ತುಮಕೂರು:ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್‍ಗಳು ಸೇರಿದಂತೆ,ಎಲ್ಲಾ ವಲಯದ ಇಂಜಿನಿಯರ್‍ಗಳ ಜವಾಬ್ದಾರಿ ಮತ್ತು ರಕ್ಷಣೆಯ ದೃಷ್ಟಿಯಿಂದ ಕರ್ನಾಟಕ ಪ್ರೋಫೆಸನಲ್ ಸಿವಿಲ್ ಇಂಜಿನಿಯರ್ಸ್ ಆಕ್ಟ್ (ಕೆಪಿಸಿಇಎ) ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ಇಂಡಿಯನ್ ಕಾಂಕ್ರಿಟ್ ಇನ್ಸಿಟ್ಯೂಟ್ (ಐಸಿಐ)ನ ಮುಖ್ಯಸ್ಥ ಹೆಚ್.ಆರ್.ಗಿರೀಶ್ ತಿಳಿಸಿದರು.
ನಗರದ ಹರ್ಬನ್ ರೆಸಾರ್ಟ್‍ನಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ತುಮಕೂರು ಇವರು ದಿ ರಾಮಕೋ ಸಿಮೆಂಟ್ಸ್ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ, ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು,ವಕೀಲರಿಗೆ ಬಾರ್ ಕೌನ್ಸಿಲ್, ವೈದ್ಯರಿಗೆ ಐಎಂಎ ಇರುವ ರೀತಿ,ಕೆಪಿಸಿಇಎ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ.ಇದು ಇಂಜಿನಿಯರ್‍ಗಳ ಜವಾಬ್ದಾರಿ ಯನ್ನು ಹೆಚ್ಚಿಸುವುದರ ಜೊತೆಗೆ,ಅವರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಕಾಯ್ದೆಯಾಗಿದೆ.ಈ ರೀತಿಯ ಕಾಯ್ದೆ ತಂದ ಎರಡನೇ ರಾಜ್ಯ ಕರ್ನಾಟಕವಾಗಲಿದೆ.ಡಿಪ್ಲಮೋ ಮುಗಿಸಿದವರು 2ವರ್ಷಗಳ ಕಾಲ, ಇಂಜಿನಿಯರಿಂಗ್ ಪದವಿ ಪಡೆದವರು ಒಂದು ವರ್ಷಗಳ ಕಾಲ ಅನುಭವ ಪಡೆಯಬೇಕಾಗಿದೆ ಎಂದರು.
ಸ್ವಾತಂತ್ರ ನಂತರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ.ರೋಟಿ,ಘರ್ ಔರ್ ಮಕಾನ್ ಎಂಬ ಘೋಷವಾಕ್ಯದ ಹಿನ್ನೆಲೆಯಲ್ಲಿ ಆರಂಬದಲ್ಲಿ 2.2 ಮಿ ಟ ಸಿಮೆಂಟ್ ಉತ್ಪಾಧನೆ ಇಂದು 550 ಮಿ.ಟನ್‍ಗೆ ಬಂದು ನಿಂತಿದೆ.2047ರ ಭಾರತ ಸ್ವಾತಂತ್ರದ ಶತಮಾನೋತ್ಸವದ ವೇಳೆಗೆ ಇದರ ಪ್ರಮಾಣ 1300 ಮಿ.ಟ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದೆಲ್ಲವೂ ವಿಕಸಿತ ಭಾರತದ ಪ್ರಗತಿಯ ಸಂಕೇತವಾಗಿದೆ.ಭಾರತದ ಇಂಜಿನಿಯರ್‍ಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ.ಇಂದಿಗೂ ಭಾರತದಲ್ಲಿ ದೊಡ್ಡ ನಿರ್ಮಾಣಗಳ ಒಟ್ಟಾರೆ ಸರಾಸರಿ ಶೇ10 ಮಾತ್ರ.ಶೇ90ರಷ್ಟು ಮನೆ,ರಸ್ತೆ, ಸೇತುವೆ,ಸಣ್ಣಪುಟ್ಟ ನಿರ್ಮಾಣ ಕ್ಷೇತ್ರದಲ್ಲಿಯೇ ಬರುತ್ತಿದೆ.ಹಾಗಾಗಿ ಜನಸಾಮಾನ್ಯರ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಬೇಕಾಗಿದೆ.ಅವರ ರಕ್ಷಣೆಗೆ ನಿಲ್ಲಬೇಕಾಗಿದೆ. ಆಗ ಮಾತ್ರ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಗಿರೀಶ್ ನುಡಿದರು.
ರಾಮ್ಕೋ ಸಿಮೆಂಟ್ ಲಿಮಿಟೆಡ್‍ನ ತಾಂತ್ರಿಕ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕೆ.ಪಿಳ್ಳೈ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ಆಗಾಧವಾದ ಬೆಳೆವಣಿಗೆಯಾಗುತ್ತಿದೆ.ಐದು ವರ್ಷಗಳ ಹಿಂದೆ ಕಲಿತ ತಂತ್ರಜ್ಞಾನ ಇಂದು ಉಪಯೋಗಕ್ಕೆ ಬಾರದಂತಹ ಸ್ಥಿತಿ ಇದೆ.ಹಾಗಾಗಿ ಕಾಂಕ್ರಿಟ್‍ಗೆ ಬಳೆಸುವ ಸಿಮೆಂಟ್‍ಗಳಲ್ಲಿಯೂ ನಾನಾ ವಿಧಗಳಿವೆ. ಸರಿಯಾದ ತಿಳುವಳಿಕೆಯಿಂದ ಬಳಕೆ ಮಾಡಿದರೆ ಕಟ್ಟಡದ ಗುಣಮಟ್ಟ ಹೆಚ್ಚುವುದರ ಜೊತೆಗೆ,ಗ್ರಾಹಕರ ನಂಬಿಕೆಯನ್ನು ಗಳಿಸಬಹುದಾಗಿದೆ.ಈ ನಿಟ್ಟಿನಲ್ಲಿ ಇಂಜಿನಿಯರ್‍ಗಳು ದಿನನಿತ್ಯದ ತಾಂತ್ರಿಕ ಬದಲಾವಣೆಗೆ ತಮ್ಮನ್ನು ಒಗ್ಗಿಸಿಕೊಂಡು ಮುನ್ನೆಡೆಯಬೇಕಾಗಿದೆ.ಈ ನಿಟ್ಟಿನಲ್ಲಿ ರಾಮ್ಕೋ ಸಿಮೆಂಟ್ ಹಲವಾರು ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.
ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಫಣಿರಾಜು ಮಾತನಾಡಿದರು.
ಇಂಜಿನಿಯರ್ಸ್ ಅಸೋಸಿಯೇಷನ್ ತುಮಕೂರು ಇದರ ನಿರ್ದೇಶಕ ಶ್ರೀಕಂಠಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ವಿ.ರಾಮಮೂರ್ತಿ ಅವರ ನೇತೃತ್ವದಲ್ಲಿ 2006ರಲ್ಲಿ ಆರಂಭವಾದ ನಮ್ಮ ಸಂಸ್ಥೆ ನಿರ್ಮಾಣ ಕ್ಷೇತ್ರದ ಜೊತೆಗೆ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳ ಹಿರಿಯ ಮತ್ತು ಕಿರಿಯ ಇಂಜಿನಿಯರ್‍ಗಳ ಸಮಾಗಮಕ್ಕೆ ವೇದಿಕೆ ಕಲ್ಪಿಸಿದೆ. ಅಲ್ಲದೆ ಜನಸಾಮಾನ್ಯರಿಗೆ ನಿರ್ಮಾಣ ಕ್ಷೇತ್ರದಲ್ಲಿ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ಬಿಲ್ಡ್‍ಟೆಕ್ ಹೆಸರಿನಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಹೊಸ ಇಂಜಿನಿಯರಿಂಗ್ ಪದವಿಧರರಿಗೆ ಅಗತ್ಯ ಮಾಹಿತಿ ಮತ್ತು ತರಬೇತಿ,ಹಾಗೆಯೆ ಗಾರೆ ಕೆಲಸ ಮಾಡುವ ಮೇಸ್ತ್ರಿಗಳಿಗೂ ಅಗತ್ಯ ತರಬೇತಿ ನೀಡಲಾಗುತ್ತಿದೆ.ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಇನ್ನಿತರ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದೆ ಎಂದರು.
ಇಂಜಿನಿಯರ್ಸ್ ಡೇ ಅಂಗವಾಗಿ 12ಜನ ಸಾಧಕರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ರಾಮ್ಕೋ ಸಿಮೆಂಟ್ ಲಿಮಿಟೆಡ್‍ನ ಡಿಜಿಎಂ ವೆಂಕಟರಾವ್,ಇಂಜಿನಿಯರ್ಸ್ ಅಸೋಸಿಯೇಷನ್ ತುಮಕೂರು ಇದರ ಕಾರ್ಯದರ್ಶಿ ಎಂ.ಡಿ.ರಾಜು,ಜಂಟಿ ಕಾರ್ಯದರ್ಶಿ ಹೆಚ್.ಎನ್.ಮಂಗಳಕುಮಾರ್, ನಿರ್ದೇಶಕರಾದ ಎ.ಸತೀಶ್, ಎಂ.ಎಸ್.ರವಿಕುಮಾರ್, ಟಿ.ಎನ್.ಶ್ರೀಕಂಠಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.