ತುಮಕೂರು : ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ , ತುಮಕೂರಿನ ಎಲೆಕ್ಟ್ರಾನಿಕ್ಸ್ ಹಾಗೂ ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಆಯೋಜಿಸಿದ 17ನೇ ಆವೃತ್ತಿಯ ಮಂಥನ್ – 2025 ರಾಜ್ಯಮಟ್ಟದ ಆವಿಷ್ಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು, ರೂ. 3.00 ಲಕ್ಷ ನಗದು ಪುರಸ್ಕಾರ ಗಳಿಸಿದ್ದಾರೆ.
ಕರ್ನಾಟಕದಾದ್ಯಂತದ 560ಕ್ಕೂ ಹೆಚ್ಚು ತಂಡಗಳಲ್ಲಿ ನಮ್ಮ ವಿದ್ಯಾರ್ಥಿಗಳ ಈ ಜಯ ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿದೆ ಎಂದು ಪ್ರಾಂಶುಪಾಲರಾದ ಪ್ರ.ಎಸ್.ವಿ.ದಿನೇಶ್ ತಿಳಿಸಿದ್ದಾರೆ.
ಎಫ್.ಕೆ.ಸಿ.ಸಿ.ಯ ಮಂಥನ್ ರಾಜ್ಯದ ಪ್ರಮುಖ ವೇದಿಕೆಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳಲ್ಲಿ ನವೀನತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಸಮಾಜ ಎದುರಿಸುತ್ತಿರುವ ನೈಜ ಸವಾಲುಗಳಿಗೆ ಶಾಶ್ವತ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ತಯಾರಿಸಲು ಈ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಬಾರಿ SIT ತಂಡವು “ಈಕೋರಿಯಾಕ್ಟರ್ – CO₂ ಮಾನಿಟರಿಂಗ್ ಹಾಗೂ ಬಯೋಕನ್ವರ್ಷನ್ ಸಿಸ್ಟಂ” ಎಂಬ ನೂತನ ಪ್ರಾಜೆಕ್ಟ್ ಮೂಲಕ ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಆಲ್ಗೀ ಆಧಾರಿತ ಜೈವಿಕ ಕ್ರಿಯಾಶೀಲಕ (bioreactor) ಮೂಲಕ ಹಾನಿಕಾರಕ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಶೋಷಿಸಿಕೊಂಡು ಅದನ್ನು ಪೋಟೋಸಿಂಥೆಸಿಸ್ ಮೂಲಕ ಆಮ್ಲಜನಕವಾಗಿ ಪರಿವರ್ತಿಸುವ ಈ ಆವಿಷ್ಕಾರವು ಹವಾಮಾನ ಬದಲಾವಣೆ ಹಾಗೂ ಪರಿಸರ ಸಂರಕ್ಷಣೆಯ ತುರ್ತು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿರುತ್ತದೆ.
ವಿಜೇತ ತಂಡದಲ್ಲಿ ಸಯ್ಯದ್ ಮೊಹಮ್ಮದ್ ಮಕ್ಸೂದ್, ತನುಶ್ರೀ ಎಸ್.ಪಿ, ಸ್ನೇಹ ಆರ್ ಮತ್ತು ಸುಚಯ್. ಜೆ. ಇದ್ದಾರೆ. ಇವರಿಗೆ ಡಾ. ಪನ್ವಾಲಾ ಫೆನಿಲ್ ಚೇತನ್ಕುಮಾರ್, ಸಹಾಯಕ ಪ್ರಾಧ್ಯಾಪಕರು, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ವಿಭಾಗ ಮಾರ್ಗದರ್ಶನ ಒದಗಿಸಿದ್ದಾರೆ.
ಈಕೋರಿಯಾಕ್ಟರ್ ವ್ಯವಸ್ಥೆಯು ಕಡಿಮೆ ವೆಚ್ಚದ, ಸುಲಭವಾಗಿ ಅಳವಡಿಸಬಹುದಾದ, ಹಾಗೂ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ನಗರ ರಸ್ತೆಗಳ ಸ್ಮಾರ್ಟ್ ಲೈಟ್ ಕಂಬಗಳಲ್ಲಿ ಬಳಸಬಹುದಾದ ವಿನ್ಯಾಸವನ್ನು ಹೊಂದಿದೆ. ಇದು ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಲಾಭದಾಯಕ ತಂತ್ರಜ್ಞಾನವಾಗಿದೆ.
ಈ ತಂಡವು ಸಿದ್ದಗಂಗಾ ಟೆಕ್ನಾಲಜಿ ಬಿಸಿನೆಸ್ ಇಂಕ್ಯೂಬೇಟರ್ ((STBI) ನಲ್ಲಿ ನಡೆದ SPARK – ಮೂರು ತಿಂಗಳ ಪೂರ್ವ ಇಂಕ್ಯೂಬೇಷನ್ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಐಡಿಯಾ ವ್ಯಾಲಿಡೇಷನ್, ಮಾರುಕಟ್ಟೆ ವಿಶ್ಲೇಷಣೆ, ಬಿಸಿನೆಸ್ ಮಾದರೀಕರಣ, ಪ್ರಸ್ತಾವನೆ ಬರೆಯುವುದು, ಪ್ರಸ್ತುತಿಕರಣ ಹಾಗೂ Proof of Concept (PoC) TRL-4 ಮಟ್ಟದವರೆಗೆ ಅಭಿವೃದ್ಧಿಪಡಿಸುವುದು ಮುಂತಾದ ವಿಷಯಗಳಲ್ಲಿ ಮಾರ್ಗದರ್ಶನ ಪಡೆದಿದ್ದಾರೆ.
ಈ ಸಾಧನೆ SITತುಮಕೂರಿನ ನವೀನತೆ, ಸಂಶೋಧನೆ ಹಾಗೂ ಉದ್ಯಮಶೀಲತೆಯ ಉತ್ತೇಜನದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ತಿಳಿಸಲು ಹರ್ಷಿಸುತ್ತೇವೆ ಎಂದು ತಿಳಿಸಿದ್ದಾರೆ.