ತುಮಕೂರು : ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಕಲ್ಪತರು ನಾಡು ತುಮಕೂರಿಗೆ ನೀರು ಹರಿಸಲು ಸರ್ಕಾರ ವಿಳಂಬ ರಾಜಕಾರಣ ಮಾಡುತ್ತಿದೆ ಎಂದು ನೀರಾವರಿ ಹೋರಾಟಗಾರ ಮತ್ತು ಮಾಜಿ ಸಚಿವರಾದ ಸೊಗಡು ಶಿವಣ್ಣನವರು ಆಕ್ರೋಶ ವ್ಯಕ್ತಪಡಿಸಿ, ಶನಿವಾರ ಸಂಜೆಯಿಂದ ನಾಗಮಂಗಲದ ಬಾಗೂರು ನವಿಲೆ ದಂಡೆ ಬಳಿಯೇ ತಮ್ಮ ಕಾರಿನಲ್ಲೇ ಮಲಗಿ ಧರಣಿ ನಡೆಸುತ್ತಿದ್ದಾರೆ.
ಕಳೆದ ಶನಿವಾರದ ರಾತ್ರಿ ಪೂರ್ತಿ ಮಳೆಯಲ್ಲೇ ನಾಗಮಂಗಲದ ಬಳಿ ಇರುವ ಬಾಗೂರು ನವಿಲೆ ಕಾಮಗಾರಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕೆರಳಿರುವ ಸೊಗಡು ಶಿವಣ್ಣ, ಗೊರೂರುನಲ್ಲಿರುವ ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದರೂ, ತುಮಕೂರು ಜಿಲ್ಲೆಗೆ ಈವರೆವಿಗೂ ಒಂದೇ ಒಂದು ಹನಿ ನೀರು ಹರಿಸಲು ಸರ್ಕಾರ ವಿಫಲವಾಗಿದ್ದು, ನಾಗಮಂಗಲದ ಕಡೆ ಮಾತ್ರ ಹೇಮಾವತಿ ನೀರು ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಗೊರೂರು ಜಲಾಶಯ ಭರ್ತಿಯಾಗಿ, ತುಮಕೂರು ಜಿಲ್ಲೆಯ ಕಡೆಗೆ
ಹೇಮಾವತಿ ನೀರು ಹರಿಯುವಿಕೆ ನಿರೀಕ್ಷಿಸಿ, ಕಳೆದ ಶುಕ್ರವಾರ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಚಾನಲ್ ವಿರೋಧಿ ಹೋರಾಟ ಸಮಿತಿ ಪ್ರಮುಖರೊಂದಿಗೆ ನಾಗಮಂಗಲದ ಬಳಿಯ ಬಾಗೂರು ನವಿಲೆ ಬಳಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದು ಬರುವ ಚಾನೆಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ತೆರಳಿದ್ದ ತಂಡ ಭೇಟಿ ನೀಡಿ, ಕುಲಂಕುಶವಾಗಿ ಪರಿಶೀಲಿಸಿದ್ದರು.
ನಂತರ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ತುಮಕೂರಿಗೆ ಮರಳಿದ್ದ ಸೊಗಡು ಶಿವಣ್ಣ ಹಾಗೂ ಹೋರಾಟಗಾರರು ಚಾಲನ್ ಕಾಮಗಾರಿ ತಡವಾದರೆ ತುಮಕೂರು ಜಿಲ್ಲೆಗೆ ನೀರಿನ ಹರಿಯುವಿಕೆ ಖೋತಾ ಆಗಿ, ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಮ್ಮಿ ಆಗಿ, ನೀರು ಹರಿದು ಬರಲು ವಿಳಂಬವಾಗಬಹುದು
ಎಂಬ ಮಾಹಿತಿ ಪಡೆದು, ಶನಿವಾರ ಸಂಜೆ ಮತ್ತೆ ಕಾಮಗಾರಿ ಮಾಡುತ್ತಿರುವ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹೇಮಾವತಿ ನೀರು ಜಿಲ್ಲೆಗೆ ಬರಲು ವಿಳಂಬವಾಗುವುದೆಂಬ ಮಾಹಿತಿ ತಿಳಿಯುತ್ತಿದ್ದಂತೆ, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಇರಲು ಸೊಗಡು ಶಿವಣ್ಣನವರು ನಿರ್ಧರಿಸಿ, ಅಲ್ಲಿಯೇ ಅವರ ತಂಡ ಮಳೆ-ಚಳಿ-ಗಾಳಿ ಎನ್ನದೆ ಉಳಿದುಕೊಂಡಿದೆ.
ಜಿಲ್ಲೆಯ ರೈತರು, ನಾಗರೀಕರು, ಜಾನುವಾರುಗಳು, ವ್ಯಾಪಾರ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳ ಹಿತದೃಷ್ಟಿ ಮತ್ತು ನಮ್ಮ ಜಿಲ್ಲೆಗಾಗುವ ತೀವ್ರ, ಭಾರೀ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆತ್ಮೀಯರು-ಹೋರಾಟ ಸಮಿತಿಯ ಪ್ರಮುಖರೊಂದಿಗೆ ಚರ್ಚಿಸಿ, ಭಾನುವಾರ ರಾತ್ರಿಯೂ ತುಮಕೂರಿಗೆ ಹೇಮಾವತಿ ನೀರು ಹರಿದು ಬರುವ ಬಾಗೂರು ನವಿಲೆಯ ಸ್ಥಳದಲ್ಲೇ ಇರುವುದಾಗಿ ಮತ್ತು ಹೇಮಾವತಿ ನೀರು ಹರಿಸುವೆಗೂ ಹೋರಾಟ ಮುಂದುವರೆಸುವುದಾಗಿ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಊರುಕೆರೆ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ನಂಜುಂಡಪ್ಪ, ತಿಪಟೂರು ನಗರಸಭೆ ಮಾಜಿ ಸದಸ್ಯ ಎಂ.ಪಿ.ಪ್ರಸನ್ನಕುಮಾರ್ ಹಾಗೂ ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದಾರೆ.