ತುಮಕೂರು.ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಸೊಗಡು ಶಿವಣ್ಣ ತಮ್ಮ ಮೂರನೇ ದಿನದ ಜೋಡಿ ಜೋಳಿಗೆ ಪ್ರಚಾರವನ್ನು ಮಂಗಳವಾರ ಸಂಜೆ ಟೌನ್ ಹಾಲ್ ಮುಂಭಾಗದಲ್ಲಿ ಇರುವ ನಾಗದೇವತೆ ದೇವಾಲಯಕ್ಜೆ ಪೂಜೆ ಸಲ್ಲಿಸಿ, ಪಕ್ಕದಲ್ಲಿಯೇ ಇರುವ ಜೋಡಿ ದರ್ಗಾಕ್ಕೆ ಚಾದರ್ ಹೊದಿಸಿ,ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ್ದಾರೆ.
ಮಂಗಳವಾರ ಸಂಜೆ ಐದುಗಂಟೆ ಸುಮಾರಿಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಹೊರಟ ಜೋಡಿ ಜೋಳಿಗೆ ಪ್ರಚಾರ ಅಭಿಯಾನ,ಎಂ.ಜಿ.ರಸ್ತೆ,ಕೆ.ಆರ್.ಬಡಾವಣೆ ಮತ್ತಿತರರ ಕಡೆಗಳಲ್ಲಿ ಸಂಚರಿಸಿ ಶ್ರೀರಾಮಮಂದಿರದ ಬಳಿ ಮುಕ್ತಾಯ ಗೊಂಡಿತು. ಎಂ.ಜಿ.ರಸ್ತೆಯ ವ್ಯಾಪಾರಿಗಳು,ಗಿರಿವಿ ಅಂಗಡಿಗಳ ಮಾಲೀಕರು ತಮ್ಮ ಅಂಗಡಿ ಬಳಿ ಬಂದ ಸೊಗಡು ಶಿವಣ್ಣ ಅವರನ್ನು ಬರಮಾಡಿಕೊಂಡು, ಒಂದು ಜೋಳಿಗೆಗೆ ನೋಟು ನೀಡುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಬಲ ವ್ಯಕ್ತಪಡಿಸಿದರು.
ಟೌನ್‍ಹಾಲ್ ಬಳಿ ನಾಗದೇವತೆ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಎಲೆಕ್ಷನ್ ನಲ್ಲಿ ಗೆಲ್ಲಲು ಮನೆ ಮನೆಗೆ ಕುಕ್ಕರ್,ಸೀರೆ ಇನ್ನಿತರ ಆಮೀಷಗಳನ್ನು ಒಡ್ಡಿ ಜನರನ್ನು, ಅದರಲ್ಲಿಯೂ ಯುವಜನರನ್ನು ದಾರಿ ತಪ್ಪಿಸುತ್ತಿರುವ ವ್ಯವಸ್ಥೆಯ ವಿರುದ್ದ ಸಿಡಿದೆದ್ದು,ಗಾಂಧಿಯ ಶಾಂತಿ ಮಂತ್ರದ ಹಾದಿಯಲ್ಲಿ ಮತದಾರರ ಬಳಿ ಜೋಳಿಗೆ ಹಿಡಿದು ಹೊರಟ್ಟಿದ್ದೇನೆ.ಅವರು ಕೊಡುವುದನ್ನು ಸ್ವಿಕರಿಸಿ,ಅದನ್ನು ಜನತೆಯ ಕಲ್ಯಾಣಕ್ಕೆ ಬಳಸುತ್ತೇನೆ ಎಂದರು.
ತುಮಕೂರು ನಗರದಲ್ಲಿ 1994 ರಿಂದ 2013 ವರೆಗೆ ಸುಮಾರು 20 ವರ್ಷಗಳ ಕಾಲ ತದನಂತರ,ಹತ್ತು ವರ್ಷಗಳ ಕಾಲ ಶಾಸಕನಾಗಿ,ಸಚಿವನಾಗಿ,ಸಾಮಾನ್ಯ ಪ್ರಜೆಯಾಗಿ ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ನನ್ನ ಈ ಹೋರಾಟವನ್ನು ಗುರುತಿಸಿ,ಜನರೇ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ. ಇದು ನನಗೆ ಮತ್ತಷ್ಟು ಸ್ಪೂರ್ತಿ ನೀಡಿದೆ.ಹಾಗಾಗಿ ಅನ್ಯಾಯ,ಅಕ್ರಮದ ವಿರುದ್ದ ನನ್ನ ಈ ಹೋರಾಟವನ್ನು ಚುನಾವಣೆ ಮುಗಿಯುವವರೆಗೂ ಮುಂದುವರೆಸುತ್ತೇನೆ ಎಂದು ಸೊಗಡು ಶಿವಣ್ಣ ನುಡಿದರು.
ಇಂದು ನಾನು ಆರಂಭಿಸಿರುವುದು ಧರ್ಮ, ಆಧರ್ಮದ ನಡುವಿನ ಹೋರಾಟವಾಗಿದೆ. ಇದಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಭಾಂಧವರು ತಮ್ಮ ದರ್ಗಾಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಅಲ್ಲಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ. ನಿಜವಾಗಿಯೂ ನಗರದ ಬಗ್ಗೆ ಕಾಳಜಿ ಇದ್ದರೆ ಇತರೆ ಪಕ್ಷದ ಅಭ್ಯರ್ಥಿಗಳು ನನ್ನಂತೆಯೇ ಜೋಳಿಗೆ ಹಿಡಿದು ಬರಲಿ,ಹಣ,ಹೆಂಡ,ಸೀರೆ,ಕುಕ್ಕರ್ ಹಂಚಿ,ಬಾಡೂಟ ಹಾಕಿ ಮತದಾರರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಎಲ್ಲಾ ಪಕ್ಷಗಳ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದರು.
ಜೋಡಿ ಜೋಳಿಗೆ ಮತಯಾಚನೆ ಯಾತ್ರೆಯಲ್ಲಿ ಆದಿ ಕಾಯಕಯೋಗಿ ಮಹಾಸ್ವಾಮಿಗಳು ಪಾವಗಡ,ರಮೇಶಾಚಾರ್, ಕೆ.ಪಿ.ಮಹೇಶ್,ಗೋಕುಲ ಮಂಜು,ಧನ್ಯಕುಮಾರ್,ಉತ್ತಮಕುಮಾರ್,ಸನತ್,ರಂಗಾನಾಯಕ್,ಡಿ.ಎಂ.ಸತೀಶ್ ಸೇರಿದಂತೆ ನೂರಾರು ಜನರ ಮೂಲ ಬಿಜೆಪಿ ಕಾರ್ಯಕರ್ತರು ಸೊಗಡು ಶಿವಣ್ಣ ಅವರೊಂದಿಗೆ ಹೆಜ್ಜೆ ಹಾಕಿದರು.