ತುಮಕೂರು :ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸೊಗಡು ಶಿವಣ್ಣನವರು ರಂಜಾನ್ ಹಬ್ಬದ ಶುಭಾಶಯ ಹೇಳುವ ಸಲುವಾಗಿ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ನಿವಾಸಕ್ಕೆ ದಿಢೀರ್ ಭೇಟಿ ನೀಡಿದರು.
ತುಮಕೂರು ನಗರದ ಜಯನಗರದಲ್ಲಿರುವ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಭೇಟಿ ನೀಡಿ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಹಿಂದೆ ಒಬ್ಬರಿಗೊಬ್ಬರು ಕೆಲ ವಿಷಯಗಳಲ್ಲಿ ಭೇಟಿಯಾಗುವುದಕ್ಕಿಂತ ರಾಜಕಾರಣ ಮಾಡಿದ್ದೆ ಹೆಚ್ಚು, ಈಗ ಡಾ.ರಫೀಕ್ ಅಹ್ಮದ್ ಅವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗದಿರುವುದರಿಂದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣನವರು ಭೇಟಿ ನೀಡಿ ಮಾತುಕತೆ ನಡೆಸಿದರು.
ಚುನಾವಣೆಯಲ್ಲಿ ಸಹಕಾರ ನೀಡುವಂತೆ ಡಾ.ರಫೀಕ್ ಅಹ್ಮದ್ ಅವರನ್ನು ಶಿವಣ್ಣನವರು ಕೇಳಿಕೊಂಡರೆನ್ನಲಾಗಿದೆ.
ಈ ವೇಳೆ ಡಾ. ರಫೀಕ್ ಅಹ್ಮದ್ ರವರ ಪತ್ನಿ ಶ್ರೀಮತಿ ಅಯಿಷಾ ಸುಲ್ತಾನ, ಮುಖಂಡರಾದ ಧನಿಯಾ ಕುಮಾರ್, ನರಸಿಂಹಯ್ಯ ಮತ್ತಿತರರಿದ್ದರು.
ಚುನಾವಣಾ ಕಣದಿಂದ ಹಿಂದೆ ಸರಿದಿಲ್ಲ: ಕೆಲ ನನ್ನ ರಾಜಕೀಯ ವಿರೋಧಿ ಬಣಗಳು ನಾನು ಉಮೇದುವಾರಿಕೆಯಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿಯನ್ನು ಜಾಲತಾಣ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವುದು ಸತ್ಯವಲ್ಲ ಎಂದು ಸೊಗಡು ಶಿವಣ್ಣನವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳು ಮತ್ತು ತುಮಕೂರಿನ ಸ್ವಾಭಿಮಾನಿಗಳ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದು, ಸ್ವರ್ಗದಲ್ಲಿರುವ ನನ್ನ ತಂದೆ ತಾಯಿಗಳು ಹೇಳಿದರೂ ಕಣದಿಂದ ಹಿಂದೆ ಸರಿಯುವುದಿಲ್ಲ, ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿದ್ದಾರೆ.