ತುಮಕೂರು : ಜಿಲ್ಲೆಯ ಕುಣಿಗಲ್‍ನಿಂದ ಮಾಗಡಿ ಮತ್ತು ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಮೇ 31 ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಸರ್ಕಾರದ ವಿರುದ್ಧ ಮಾಜಿ ಸಚಿವ ಎಸ್.ಶಿವಣ್ಣ ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಪ್ರವೇಶ ದ್ವಾರದ ಒಳಗಡೆ ಅಮರಣಾಂತ ಉಪವಾಸ ಕೈಗೊಳ್ಳಲು ಮುಂದಾದಾಗ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರವೇಶ ಧ್ವಾರದಲ್ಲಿ ಶಿವಣ್ಣನವರು ಚಾಪೆ ದಿಂಬು ಹಾಕಿ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಘೋಷಿಸಿ ಅಲ್ಲಿಯೇ ಮಲಗಿದರು, ಇದರಿಂದ ಇಕ್ಕಟ್ಟಿಗೆ ಸಿಲುಕಿದ ಜಿಲ್ಲಾಡಳಿತ ನಗರ ಡಿವೈಎಸ್‍ಪಿ ಮುಖಾಂತರ ಮನವೊಲಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ, ಆರೋಗ್ಯ ತಪಾಸಣೆಯ ನೆಪದಲ್ಲಿ ಚಿಕ್ಕಪೇಟೆಯ ಮನೆಗೆ ಕರೆ ತಂದರೂ ಶಿವಣ್ಣನವರು ಮತ್ತೆ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಲು ಮುಂದಾದಾಗ, ಅವರನ್ನು ಬೆಳ್ಳಾವಿ ಪೊಲೀಸ್ ಠಾಣೆಗೆ ಕರೆ ತಂದು ಕೂರಿಸಿದರೂ, ಅಲ್ಲಿಯೇ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ನೆಲದ ಮೇಲೆಯೇ ಮಲಗಿದ್ದಾರೆ.
ವಿಷಯ ತಿಳಿದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಬೆಳ್ಳಾವಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಶಿವಣ್ಣನವರ ಜೊತೆ ಮಾತುಕತೆ ನಡೆಸಿದರು.

ಇದಕ್ಕೂ ಮೊದಲು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸೊಗಡು ಶಿವಣ್ಣನವರು ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರು ನಮ್ಮ ಹಕ್ಕು ಇದಕ್ಕೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ನೀತಿ ಅಮಾನವೀಯ ಹಾಗೂ ದುರುದೇಶದಿಂದ ಕೂಡಿದೆ. ನೀರಿನಲ್ಲಿ ರಾಜಕೀಯ ಬೆರಸಬಾರದು ಮೂಲ ಹಂಚಿಕೆಯಾಗಿರುವಂತೆ ನೀರನ್ನು ಪಡೆಯುವುದರಲ್ಲಿ ಯಾವುದೆ ತಕರಾರು ಇರುವುದಿಲ್ಲ ಎಂದರು.
ರಾಜ್ಯ ಸರ್ಕಾರ ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಅನಧಿಕೃತವಾಗಿ ಅಧಿಕಾರ ಚಲಾಯಿಸಿ ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಭಯಸಿದ್ದು ಕಾಲುವೆ ಕಾಮಗಾರಿಯನ್ನು ಸಹ ಆರಂಭಿಸಿದೆ. ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ 3 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಅಭ್ಯಂತರ ಇಲ್ಲ. ಆದರೆ ಮಾಗಡಿಗೆ ಹರಿಸಲು ಹೊರಟಿರುವುದು ದೌರ್ಜನ್ಯ ಎಂದು ಟೀಕಿಸಿದರು.
ಹೇಮಾವತಿ ನಾಲೆಯ 70ನೇ ಕಿ.ಮೀ.ಯಿಂದ 167ನೇ ಕಿ.ಮೀ.ವರೆಗೆ 15 ಅಡಿ ಆಳದಲ್ಲಿ ಪೈಪ್‍ಲೈನ್ ಹಾಕಲಾಗು ತ್ತಿದ್ದು, ಈ ವ್ಯಾಪ್ತಿಯ ಎಲ್ಲಾ ಅಚ್ಚುಕಟ್ಟುಗಳು ಸಂಪೂರ್ಣ ನಾಶವಾಗುತ್ತವೆ. ಈ ಅವೈಜ್ಞಾನಿಕ ಯೋಜನೆಗೆ 1 ಸಾವಿರ ಕೋಟಿ ರೂ. ದುರುಪಯೋಗವಲ್ಲದೆ ಬೇರೇನೂ ಅಲ್ಲ. ಇದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.
ನಮ್ಮ ಈ ಹೋರಾಟಕ್ಕೆ ಜಿಲ್ಲೆಯ 40 ಮಠಾಧೀಶರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೇರಿದಂತೆ ವಿವಿಧ ಮುಖಂಡರು, ಸಂಘಟನೆಗಳ ಪದಾಧಿಕಾರಿ ಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮೇ 31ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಅಮಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಲು ಸರ್ಕಾರ ಹುನ್ನಾರ ನಡೆಸಿದ್ದು ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜಿಲ್ಲೆಯ 30 ಲಕ್ಷ ಜನರ ಪರವಾಗಿ ನೀರನ್ನು ಉಳಿಸಿಕೊಳ್ಳಲು ವಿವಿಧ ಮಠಾ ಧೀಶರು, ರೈತರು, ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇವರೇನೂ ದರೋಡೆಕೋರರೆ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಎಂದು ಪ್ರಶ್ನಿಸಿ, ಇದನ್ನು ರದ್ದುಪಡಿಸು ವರೆಗೂ ಉಪವಾಸ ಸತ್ಯಾಗ್ರಹ ಮುಂದು ವರೆಸುವುದಾಗಿ ತಿಳಿಸಿದರು.
ಮೇ 30 ರಂದು ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರು, ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ಕಾವೇರಿ ಮ್ಯಾನೇಂಜ್‍ಮೆಂಟ್ ಬೋರ್ಡ್ ಇವರಿಗೆ ಈ ಸಂಬಂಧ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಮುಖಂಡರಾದ ಕೆ.ಪಿ.ಮಹೇಶ್, ಪ್ರಭಾಕರ್, ನಂಜುಂಡಪ್ಪ, ಆರ್.ನವೀನ್, ತರಕಾರಿ ಮಹೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.