ತುಮಕೂರು: ತುಮಕೂರು ನಗರದ ಯಾವೊಬ್ಬ ಜೆಡಿಎಸ್ ಮುಖಂಡರು, ಮಾಜಿ ಕಾರ್ಪೊರೇಟರ್ಗಳು, ಕಾರ್ಯಕರ್ತರು ಪಕ್ಷ ಬಿಟ್ಟುಹೋಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ, ಎಲ್ಲರೂ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಸೋಮಣ್ಣ ಅವರ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಹೇಳಿದರು.
ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಜೆಡಿಎಸ್ನ ಎಲ್ಲಾ ಮಾಜಿ ಕಾರ್ಪೊರೇಟರ್ಗಳು, ಪ್ರಮುಖ ಮುಖಂಡರೊಂದಿಗೆ ಒಗ್ಗಟ್ಟು ಪ್ರದರ್ಶನದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಆರ್.ಸಿ.ಅಂಜನಪ್ಪ, ನಗರದಿಂದ ಮೂರು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಗೋವಿಂದರಾಜು ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದು, ಅವರ ಜೊತೆ ಹಲವು ಜೆಡಿಎಸ್ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರಿದ್ದಾರೆ ಎಂಬ ಅಪಪ್ರಚಾರ ನಡೆದಿದ್ದು, ಜೆಡಿಎಸ್ನ ಯಾರೊಬ್ಬರೂ ಪಕ್ಷಬಿಟ್ಟು ಹೋಗಿಲ್ಲ, ಎಲ್ಲರೂ ಇಲ್ಲೇ ಇದ್ದು ಉಳಿದು ವಿ.ಸೋಮಣ್ಣ ಅವರ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ಗೆ ಕಾರ್ಯಕರ್ತರೇ ಜೀವಾಳ, ಗೋವಿಂದರಾಜು ಅವರು ಮೂರು ಬಾರಿ ಚುನಾವಣೆ ಸೋಲಲು ಅವರ ಸ್ವಯಂಕೃತ ಅಪರಾಧಗಳೇ ಕಾರಣ ಹೊರತು ಜೆಡಿಎಸ್ ಅಲ್ಲ. ಸೋತರೂ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಗೋವಿಂದರಾಜು ಅವರಿಗೇ ಟಿಕೆಟ್ ನೀಡಿ ನೆರವಾಗಿದ್ದರು. ಈಗ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿರುವ ಗೋವಿಂದರಾಜು ಅವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುತ್ತಾರೆ ಎಂದು ಹೇಳಿದರು.
ನಗರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಪಡೆಯುವುದು ಖಚಿತ, ಕ್ಷೇತ್ರದ ಎಲ್ಲಾ ಕಡೆಯೂ ಜೆಡಿಎಸ್ನವರು ಸೋಮಣ್ಣ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.
ಕೆ.ಎನ್.ಆರ್ ಹೇಳಿಕೆಗೆ ಖಂಡನೆ
ಸಚಿವ ಕೆ.ಎನ್.ರಾಜಣ್ಣನವರು ಮಾಜಿ ಪ್ರಧಾನಿ, ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಬಗ್ಗೆ ಪದೇಪದೆ ಅವಹೇಳನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ನಾಲ್ಕು ಜನರ ಮೇಲೆ ಹೋಗುವ ಸಮಯ ಬಂದಿದೆ, ಸಾಯೋ ಕಾಲದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಎಂದು ದೇವೇಗೌಡರನ್ನು ಗುರಿ ಮಾಡಿಕೊಂಡು ಅವರ ಸಾವಿನ ಬಗ್ಗೆ ಮಾತನಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಹಿಂದೆ ಕಾಂಗ್ರೆಸ್ನವರು ಟಿಕೆಟ್ ನಿರಾಕರಿಸಿದ್ದಾಗ ಕೆ.ಎನ್.ರಾಜಣ್ಣನವರಿಗೆ ಬೆಳ್ಳಾವಿ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು ಗೆಲ್ಲಿಸಿ ಮೊದಲ ಬಾರಿಗೆ ಶಾಸಕರಾಗಲು ಅವಕಾಶ ಮಾಡಿಕೊಟ್ಟು ರಾಜಕೀಯ ಪುನರ್ಜನ್ಮ ನೀಡಿದ್ದರು.
ದೇವೇಗೌಡರು ನಿಮಗೆ ಯಾವುದೇ ಅನ್ಯಾಯ ಮಾಡಿಲ್ಲ, ಅಸಹ್ಯ ಮಾತುಗಳನ್ನೂ ಆಡಿಲ್ಲ, ಆದರೂ ಅವರನ್ನು ಹೀನಾಯವಾಗಿ ಟೀಕಿಸುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ, ಮುಂದೆ ಇಂತಹ ವರ್ತನೆ ನಿಲ್ಲಿಸಿ ಆರೋಗ್ಯಕರ ರಾಜಕಾರಣ ಮಾಡುವಂತೆ ಕೆ.ಎನ್.ರಾಜಣ್ಣರಿಗೆ ಆರ್.ಸಿ.ಆಂಜನಪ್ಪ ಹೇಳಿದರು.
ದೇವೇಗೌಡರ ಸಾವಿನ ವಿಚಾರ ಶೋಭೆಯಲ್ಲ: ಟಿ.ಆರ್.ನಾಗರಾಜು
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಕ್ಷ ನಿಷ್ಠರು, ಯಾರೂ ಪಕ್ಷಬಿಟ್ಟುಹೋಗಿಲ್ಲ. ಪಕ್ಷದ ಹೈಕಮಾಂಡ್ ಸೂಚನೆಯಂತೆ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆ.ಎನ್.ರಾಜಣ್ಣನವರಿಗೆ ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ? ಜಿಲ್ಲೆಯ ಜೆಡಿಎಸ್ ಮುಖಂಡರ ವಿರೋಧದ ನಡುವೆ ರಾಜಣ್ಣ ಅವರಿಗೆ ಬೆಳ್ಳಾವಿ ಕ್ಷೇತ್ರದ ಟಿಕೆಟ್ ಕೊಟ್ಟು, 103 ಡಿಗ್ರಿ ಜ್ವರದಲ್ಲೂ ಬಂದು ದೊಡ್ಡೇರಿ ಹೋಬಳಿಯಲ್ಲಿ ದೇವೇಗೌಡರು ಪ್ರಚಾರ ಮಾಡಿದ್ದರಿಂದ ಕೆ.ಎನ್.ರಾಜಣ್ಣ ಮೊದಲ ಬಾರಿಗೆ ಶಾಸಕರಾದರು. ಉಪಕಾರಸ್ಮರಣೆ ಇಲ್ಲದ ರಾಜಣ್ಣ ಅವರು ದೇವೇಗೌಡರು ಮಾಡಿದ ಸಹಾಯವನ್ನು ನೆನೆಸಿಕೊಳ್ಳಬೇಕು. ದೇವೇಗೌಡರ ಸಾವಿನ ಬಗ್ಗೆ ಮಾತನಾಡುವುದು ಸರಿಯಲ್ಲ, ಯಾರೂ ಚಿರಂಜೀವಿಗಳಲ್ಲ ಎಲ್ಲರೂ ಒಂದಲ್ಲಾ ಒಂದು ದಿನ ಸಾಯಲೇಬೇಕು.ದೇವೇಗೌಡರ ಸಾವಿನ ವಿಚಾರ ಮಾತನಾಡುವುದು ನಿಮಗೆ ಶೋಭೆಯಲ್ಲ. ಚುನಾವಣೆ ನೀತಿ ಸಂಹಿತೆ ಕಾರಣದಿಂದ ಪ್ರತಿಭಟನೆ ಮಾಡಿಲ್ಲ, ರಾಜಣ್ಣನವರು ಇದೇ ವರ್ತನೆ ಮುಂದುವರೆಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಟಿಕೆಟ್ ತ್ಯಾಗ ಮಾಡಿದೆವು
ಜೆಡಿಎಸ್ ಮುಖಂಡ ರವೀಶ್ ಜಹಂಗೀರ್ ಮಾತನಾಡಿ, ತುಮಕೂರು ನಗರ ಕ್ಷೇತ್ರದಲ್ಲಿ ತಿಗಳ ಸಮುದಾಯಕ್ಕೆ ಕೊಡಬೇಕು ಎಂದುಕೊಂಡಿದ್ದ ಟಿಕೆಟ್ ಅನ್ನು ಗೋವಿಂದರಾಜು ಅವರಿಗೆ ಬಿಟ್ಟುಕೊಟ್ಟೆವು, ದೇವೇಗೌಡರು, ಕುಮಾರಸ್ವಾಮಿಯವರ ಮನವಿ ಮೇರೆಗೆ ಗೋವಿಂದರಾಜು ಅವರಿಗೆ ಟಿಕೆಟ್ ತ್ಯಾಗ ಮಾಡಿ ಅವರ ಪರ ಚುನಾವಣೆಗೆ ಕೆಲಸ ಮಾಡಿದೆವು. ಅದೆಲ್ಲವನ್ನೂ ಮರೆತು ಅವರು ಕಾಂಗ್ರೆಸ್ ಸೇರಿದರು, ಅವರು ಹೋಗಿರುವುದರಿಂದ ಪಕ್ಷಕ್ಕೆ ನಷ್ಟವೇನೂ ಆಗಿಲ್ಲ, ಜೆಡಿಎಸ್ ಕಾರ್ಯಕರ್ತರು ಗಟ್ಟಿಯಾಗಿ ನಿಂತಿದ್ದಾರೆ ಎಂದು ಹೇಳಿದರು.
ನಗರ ಜೆಡಿಎಸ್ ಅಧ್ಯಕ್ಷ ವಿಜಯ್ಗೌಡ, ಹಿರಿಯ ಮುಖಂಡರಾದ ಶ್ರೀನಿವಾಸಪ್ರಸಾದ್, ಟಿ.ಹೆಚ್.ಜಯರಾಂ, ಟಿ.ಜಿ.ನರಸಿಂಹರಾಜು, ಟಿ.ಹೆಚ್.ವಾಸುದೇವ್, ಹನುಮಂತರಾಯಪ್ಪ(ಹೆಚ್.ಆರ್), ರಾಮಕೃಷ್ಣಯ್ಯ, ಜೆಡಿಎಸ್ನ ನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಹೆಚ್.ಡಿ.ಕೆ.ಮಂಜುನಾಥ್, ಟಿ.ಹೆಚ್.ಬಾಲಕೃಷ್ಣ, ಲಕ್ಷ್ಮೀನರಸಿಂಹರಾಜು, ಶ್ರೀನಿವಾಸ್, ಮನು, ಧರಣೇಂದ್ರಕುಮಾರ್, ಮರಿಗಂಗಯ್ಯ, ವಿಶ್ವನಾಥ್ಗೌಡ, ಲೋಕೇಶ್, ಮುಖಂಡರಾದ ಮೆಡಿಕಲ್ ಮಧು, ಭೈರೇಶ್ ಮೊದಲಾದವರು ಭಾಗವಹಿಸಿದ್ದರು.