ತುಮಕೂರು : ಈಗ ತುಮಕೂರು ಪೊಲೀಸ್ ಇಲಾಖೆಯಲ್ಲಿ ಟಿಂಗ್ ಬಜಾರ್ ಕಥೆ ನಡಯುತ್ತಾ ಇದೆ, ಟಿಂಗ್ ಬಜಾರ್ ಕಲಿತ್ತಿರುವ ಎಸ್ಪಿಯವರು ಜನರಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಅರಿಯದೆ ಸಿಕ್ಕ ಸಿಕ್ಕವರನ್ನೆಲ್ಲಾ ಅಮಾನತ್ತು ಮಾಡಿ ತಮ್ಮ ಟಿಂಗ್ ಬಜಾರ್ ಮಂತ್ರ ದಂಡವನ್ನು ಜಳಿಪಿಸುತ್ತಿದ್ದಾರೆ.
ಮೊದಲು ಈ ಟಿಂಗ್ ಬಜಾರ್ ಕಥೆ ಹೇಳುತ್ತೇನೆ, ದಂಪತಿಗಳಿಗೆ ಗೇಣುದ್ದ ಮಗ ಹುಟ್ಟಿದ, ಏನು ಮಾಡಿದರೂ ಅವನು ಮನಷ್ಯನಂತೆ ಬೆಳೆಯಲ್ಲೇ ಇಲ್ಲ, ಗೇಣುದ್ದವೇ ಇದ್ದ ಅವನಿಗೆ ಶಿವ ಎಂದು ಹೆಸರಿಟ್ಟದ್ದು, ಏಕೆಂದರೆ ಅವರ ತಂದೆ-ತಾಯಿ ಶಿವನನ್ನು ಯಾವಾಗಲೂ ನೆನೆಯುತ್ತಿದ್ದರೆ ಅವನು ಬೆಳೆಯಬಹುದೆಂಬ ನಂಬಿಕೆ.
ಶಿವ ಗೇಣುದ್ದವಿದ್ದರೂ ಅವನು ದನ ಕಾಯುವ ಕೆಲಸ ಚಾಚು ತಪ್ಪದೆ ಮಾಡುತ್ತಿದ್ದ, ಇವನು ಗೇಣುದ್ದ ಇರುವುದಕ್ಕೂ ಆ ದನಗಳು ಆ ಹೊಲ, ಈ ಹೊಲ ಎಂದು ಹೋಗಿ ಮೇಯುವುದರಿಂದ ಹೊಲದ ಮಾಲೀಕರು ಗೇಣುದ್ದ ಶಿವನಿಗೆ ದಿನಾ ಬೈಯುತ್ತಿದ್ದರು, ಇದನ್ನು ಅವರಮ್ಮನಿಗೆ ಹೇಳಿದಾಗ ಶೀವನ ಧ್ಯಾನ ಮಾಡು ಶಿವ ಬಂದು ನಿನಗೆ ಸಹಾಯ ಮಾಡುತ್ತಾನೆ ಎಂದು ಹೇಳಿದರು.
ಗೇಣುದ್ದ ಶಿವ, ಶಿವನನ್ನು ಧ್ಯಾನ ಮಾಡಿದಾಗ ಶಿವ ಪ್ರತ್ಯಕ್ಷನಾಗಿ ಏನು ಬೇಕು ಭಕ್ತ ಎಂದು ಕೇಳಿದಾಗ ದನಗಳು ಕೊಡುತ್ತಿರುವ ಕಾಟ ಹೇಳಿಕೊಂಡಾಗ ಶಿವನು ಒಂದು ದಂಡ ಕೊಟ್ಟು ದನಗಳು ಬೇರೆ ಹೊಲಕ್ಕೆ ಹೋದಾಗ ಟಿಂಗ್ ಬಜಾರ್ ಅಂತ ಒಂದು ಸಲ ಹೇಳಿದರೆ ವಾಪಸ್ಸು ಬರುತ್ತವೆ, ಎರಡು ಸಲ ಹೇಳಿದರೆ ಮಲಗಿಕೊಳ್ಳುತ್ತವೆ, ಮೂರು ಸಲ ಹೇಳಿದರೆ ಸತ್ತೋಗುತ್ತವೆ ಅಂತ ಶಿವ ಮರೆಯಾದ.
ಶಿವ ಒಂದಷ್ಟು ದಿನ ದನಗಳಿಗಷ್ಟೇ ಟಿಂಗ್ ಬಜಾರ್ ಹೇಳುತ್ತಿದ್ದವನು ಇಷ್ಟು ದಿನ ಅವನಿಗೆ ಬೈದವರಿಗೆಲ್ಲಾ ಎರಡೆರಡು ಸಲ ಟಿಂಗ್ ಬಜಾರ್ ಹೇಳಿ ಮಲಗಿಸಿದರೆ, ಕೆಲವರಿಗೆ ಮೂರು ಸಲ ಟಿಂಗ್ ಬಜಾರ್ ಎಂದು ಹಳಿ ಕೆಲವರನ್ನೆಲ್ಲಾ ಸಾಯಿಸಿಬಿಟ್ಟ.
ಜನರೆಲ್ಲಾ ಗೇಣುದ್ದ ಶಿವನ ತಂಟಗೆ ಬರದಂತಾದರೂ, ಶಿವನೂ ಹಿಂಗೆ ಇರುವಾಗ ನಡೆದುಕೊಂಡು ಹೋಗುವಾಗ ಎಡವಿ ಬಿಟ್ಟ, ಆಗ ಎಡವಿದ ಕಾಲು ಟಿಂಗ್ ಬಜಾರ್ ಎಂದ ಇವನ ಒಂದು ಕಾಲು ಹೋಗಿ ಕುಂಟನಾಗಿ ಬಿಟ್ಟ, ಇನ್ನೊಮ್ಮೆ ಒಂದೇ ಕಾಲಲ್ಲೆ ಕುಂಟಿಕೊಂಡು ಹೋಗುವಾಗ ಬಿದ್ದೆ ಬಿಟ್ಟ,ಬಿದ್ದ ನೋವಿಗೆ ಬಿದ್ದವನಿಗೇ ಟಿಂಗ್ ಬಜಾರ್, ಟಿಂಗ್ ಬಜಾರ್, ಟಿಂಗ್ ಬಜಾರ್ ಎಂದು ಹೇಳಿ ಸತ್ತು ಹೋದ.
ಈಗ ನಮ್ಮ ಪೊಲೀಸ್ ಇಲಾಖೆಯ ಕಥೆಯು ಈ ಟೀಂಗ್ ಬಜಾರ್ ಕಥೆಯಾಗಿದೆ, ಒಂದು ಇಲಾಖೆ ಅಂದ ಮೇಲೆ ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ ಆಗ ಅಂತಹ ಪೊಲೀಸರಿಗೆ, ಪೊಲೀಸ್ ಅಧಿಕಾರಿಗಳಿಗೆ ನೋಟೀಸ್ ಕೊಟ್ಟು ಬುದ್ದಿ ಹೇಳುವುದನ್ನು ಬಿಟ್ಟು ಕೈಯಲ್ಲಿ ದಂಡವಿದೆ ಎಂದು ಎಲ್ಲಾರಿಗೂ ಶಿವನಂತೆ ಟಿಂಗ್ ಬಜಾರ್ ಹೇಳಿದರೆ ಇಡೀ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದೆ ಖಾಲಿಯಾಗುತ್ತದೆ, ಈಗಲೇ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದೆ ಮೂರು ಜನ ಮಾಡುವ ಕೆಲಸವನ್ನು ಒಬ್ಬೊಬ್ಬರು ಮಾಡುತ್ತಿದ್ದಾರೆ.
ಈ ಹಿಂದೆ ಆರ್. ಹಿತೇಂದ್ರ ಅಂತ ಎಸ್ಪಿಯವರು ನನ್ನ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಸಿಕ್ಕ ಸಿಕ್ಕವರನ್ನೆಲ್ಲಾ ಅಮಾನತ್ತು, ಕಿರುಕುಳ ನೀಡಿದ್ದರು, ಅವರು ವರ್ಗಾವಣೆಯಾದಾಗ ಇಲಾಖೆಯ ಯಾವ ಸಿಬ್ಬಂದಿಯೂ ಅವರಿಗೆ ಬೀಳ್ಕೊಡಿಗೆ ನೀಡಲು ಹೋಗಲಿಲ್ಲ. ಇಲಾಖೆಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆ ಹೊರತು ಅಮಾನತ್ತು ಮಾಡಿ ಸಿಬ್ಬಂದಿ ಇಲ್ಲದೆ ಮಾಡುವುದು ಇಲಾಖೆಯ ದೃಷ್ಠಿಯಿಂದ ಒಳ್ಳೆಯದಲ್ಲ.
ಅದೂ ಗೃಹ ಸಚಿವರಿರುವ ತವರು ಜಿಲ್ಲೆಯಲ್ಲಿ ಎಸ್ಪಿಯವರು ಟಿಂಗ್ ಬಜಾರ್ ಹೇಳುವುದನ್ನು ನಿಲ್ಲಿಸಿ, ಸಿಬ್ಬಂದಿಗೆ ತಾಳ್ಮೆ ಕಲಿಸಿ, ಒಳ್ಳೆಯ ಕೆಲಸ ಮಾಡಿಸಿದರೆ ಎಸ್ಪಿಯವರಿಗೆ ಒಳ್ಳೆಯ ಹೆಸರು ತರಲು ಸಿಬ್ಬಂದಿ ಶ್ರಮಿಸುತ್ತಾರೆ.
ಪೊಲೀಸ್ ಇಲಾಖೆ ಅಂದರೆ ಒತ್ತಡದ ಕೆಲಸ, ಅವರಿಗೂ ಮಕ್ಕಳು, ವಯಸ್ಸಾದ ತಂದೆ-ತಾಯಿ, ಶಾಲೆಗೆ ಹೋಗುವ ಮಕ್ಕಳು, ದುಡಿಯುವ ಹೆಂಡತಿ ಇರುತ್ತಾರೆ, ಇವರು ಅಮಾನತ್ತು ಮಾಡಿ 3 ತಿಂಗಳ ನಂತರ ದೂರಕ್ಕೆ ವರ್ಗಾವಣೆ ಮಾಡಿದರೆ ಅವರ ಪಾಡೇನು, ಹೆಂಡತಿ ಮಕ್ಕಳ ಪಾಡೇನು, ವಯಸ್ಸಾದ ತಂದೆ ತಾಯಿಗಳಿಗೆ ಔಷಧ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಮಯ ಎಲ್ಲಾ ಬೇಕಲ್ಲ, ಒಂದು ಕಡೆ ವರ್ಗಾವಣೆ ಮಾಡಿದ ಮೇಲೆ ಅವರ ಅವಧಿ ಮುಗಿಯುವವರೆಗೂ ಅವರಿಗೆ ಅವಕಾಶ ಕೊಡದೆ ಅಮಾನತ್ತು ಹೆಸರಲ್ಲಿ ದೂರಕ್ಕೆ ವರ್ಗಾವಣೆ ಮಾಡುವುದು ಎಷ್ಟು ಸರಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕುತ್ತಾ ದೂರಕ್ಕೆ ಹೋದಾಗ ಇಂತಹ ಉನ್ನತಾಧಿಕಾರಿಗಳಿಗೆ ಒಳ್ಳೆಯದಾಗುವುದೇ ಎಂಬುದು ಇತ್ತೀಚೆಗೆ ಸುಮಾರು 15ರಿಂದ 20ಜನ ಅಮಾನತ್ತಾದವರ ಕುಟುಂಬದವರ ಅಳಲಾಗಿದೆ, ಇನ್ನೂ ಮುಂದಾದರೂ ದೇವರ ಸಮಾನರಾದ ಎಸ್ಪಿಯವರು ತಮ್ಮ ಸಿಬ್ಬಂದಿಗೆ ಬಲಿ ದೇವರಾಗದೆ, ಒಳ್ಳೆಯ ದೇವರಾಗಲಿ.
-ವೆಂಕಟಾಚಲ.ಹೆಚ್.ವಿ.
ಹಿರಿಯ ಪತ್ರಕರ್ತರು