ತುಮಕೂರು:ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಹೊರತರಲು 2700 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಮಹಾತ್ವಗಾಂಧಿ ಅವರ ಸ್ವಾರ್ಥರಹಿತ ಹೋರಾಟ ಕುರಿತು ಸುಳ್ಳು ಸುದ್ದಿ ಹರಡಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದಲ್ಲಿ ಮಹಾತ್ಮಗಾಂಧಿ ದಿನಾಚರಣೆ ಆಂಗವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯಕೇಂದ್ರ, ಶ್ರೀಶಾರದದೇವಿ ಕಣ್ಣಿನಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ, ಪಾವಗಡ, ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ವೈದ್ಯಕೀಯಕಾಲೇಜು, ತುಮಕೂರುಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾಕೇಂದ್ರ ಮಹಾತ್ಮಗಾಂಧಿಅವರ 156ನೇ ಜನ್ಮಜಯಂತಿ ಹಾಗೂ ಕುಷ್ಠ ರೋಗಿಗಳಿಗೆ ನೂತನ ವಸ್ತ್ರ, ಸಾಧನ ಸಲಕರಣೆ, ಶುಚಿತ್ವಕಿಟ್ ಪಾದರಕ್ಷೆ ವಿತರಣಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಮಹಾತ್ಮಗಾಂಧಿಅವರ ನಿಸ್ವಾರ್ಥ ಸೇವೆ ಯುವಜನರಿಗೆ ಮಾದರಿಯಾಗಬೇಕು ಎಂದರು.
ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ, ಸಂವಿಧಾನಾತ್ಮಕ ಹಕ್ಕುಗಳು ಮಹಾತ್ಮಗಾಂಧಿ ಅವರ ಹೋರಾಟದಿಂದದೊರೆತ ಪ್ರತಿಫಲಗಳು,ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು,ಅವರ ಸಾವಿನ ನಂತರ ಅತ್ಯಂತ ತುಚ್ಚವಾಗಿ ಕಾಣಲಾಗುತ್ತಿದೆ. ಅವರ ಬಗ್ಗೆ ಇಲ್ಲಸಲ್ಲದೆ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದರ ವಿರುದ್ದ ಯುವ ಜನರಲ್ಲಿ ಜಾಗೃತಿ ಮೂಡಬೇಕಿದೆ. ಗಾಂಧಿಯ ಬದುಕನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮುನ್ನೆಡೆಯುವ ಕೆಲಸ ಆಗಬೇಕು.ಗಾಂಧಿಯ ಮಾರ್ಗದಲ್ಲಿಯೇ ಅಶಕ್ತರು, ನಿರ್ಗತಿಕರು, ಬಡವರು, ರೋಗಿಗಳ ಸೇವೆ ಮಾಡುತ್ತಿರುವ ಪಾವಗಡದ ಶ್ರೀಜಪಾನಂದಜೀ ಅವರು, ಪದವಿ ಕಾಲೇಜು ಮಕ್ಕಳಿಗೆ ಬಿಸಿಯೂಟ, ಪ್ರಕೃತಿ ವಿಕೋಪಗಳಿಂದ ನೊಂದವರಿಗೆ ನೆರವು ನೀಡುತ್ತಿರುವ ಶ್ರೀಜಪಾನಂದಜೀ ಇತರೆ ಶ್ರೀಗಳಿಗಿಂತ ಭಿನ್ನವಾಗಿದ್ದಾರೆಎಂದು ಮುರುಳೀಧರ ಹಾಲಪ್ಪ ನುಡಿದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ಮಾತನಾಡಿ,2025ರ ನವೆಂಬರ್ 25ಕ್ಕೆ ಮಹಾತ್ಮಗಾಂಧಿ ಅವರು ತಮ್ಮಆತ್ಮ ಚರಿತ್ರೆ ಬರೆದು 100 ವರ್ಷ ತುಂಬಲಿದೆ. ಹಾಗಾಗಿ ನಮ್ಮ ಕಾಲೇಜಿನ ವತಿಯಿಂದ ಗಾಂಧೀಜಿಯವರ ಆತ್ಮಚರಿತ್ರೆ ಕುರಿತ ಪ್ರಭಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು,ಆಸಕ್ತರು ಭಾಗವಹಿಸಬಹುದಾಗಿದೆ. ಉತ್ತರ ಬರಹಕ್ಕೆ ಬಹುಮಾನ ನೀಡಲಾಗುವುದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದಜೀ ಆಶೀರ್ವಚನ ನೀಡಿ,ಇಂದು ನಮ್ಮಯುವಕರು ಸಿನಿಮಾ ನಟರನ್ನು ತಮ್ಮ ಮಾದರಿಯಾಗಿ ಸ್ವಿಕರಿಸಿದ್ದಾರೆ.ಇದರ ಫಲವಾಗಿ ದೇಶದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ.ದೇಶದಲ್ಲಿ ಮತ್ತೊಮ್ಮೆ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ನಾವು ಗಾಂಧಿತತ್ವಕ್ಕೆ ಮೊರೆ ಹೋಗಬೇಕಾದ ಅನಿವಾರ್ಯತೆಇದೆ.ನಾನು, ನನ್ನದು ಎಂಬ ಸ್ವಾರ್ಥ ಇಂದಿನ ಯುವಕರಲ್ಲಿ ಮನೆ ಮಾಡಿದೆ.ಭಾರತದ ಸ್ವಾತಂತ್ರಕ್ಕಾಗಿ ಮನೆ, ಮಠತೊರೆದು, ಹತ್ತಾರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಮಹಾತ್ಮಗಾಂಧಿಯವರನ್ನು ಅವಹೇಳನ ಮಾಡುವುದು ಈ ದೇಶಕ್ಕೆ ಭವಿಷ್ಯವಿಲ್ಲ ಎಂಬುದನ್ನುತೋರಿಸುತ್ತದೆಎಂದರು.
ಈ ದೇಶ ಮುಂದುವರೆದಿದೆ ಎಂದು ಕೆಲವರು ಭ್ರಮೆಯಲ್ಲಿ ಮಾತನಾಡುತ್ತಾರೆ. ಆದರೆ ನಿಜವಾದ ಭಾರತವಿರುವುದು ಹಳ್ಳಿಗಳಲ್ಲಿ. ಇಂದಿಗೂ ಹಳ್ಳಿಯ ಜನಒಂದು ಹೊತ್ತಿನ ಕೂಳಿಗೆ ಪರಿತಾಪ ಪಡುತ್ತಿದ್ದಾರೆ. ಒಳ್ಳೆಯ ಆಸ್ಪತ್ರೆಗಳಿಲ್ಲ.ಇದ್ದರೂ ಗುಣಮಟ್ಟದ ಚಿಕಿತ್ಸೆಯಿಲ್ಲ. ಭರಿಸಲಾಗದ ಶುಲ್ಕದಿಂದ ರೋಗವನ್ನೇ ನುಂಗಿ ಜನ ಬದುಕುತಿದ್ದಾರೆ. ಗಾಂಧಿಯ ವಿಚಾರಧಾರೆಗಳನ್ನು ಮರೆತಿದ್ದರ ಪರಿಣಾಮ ಇಂದು ಎಲ್ಲೆಡೆ ಆಶಾಂತಿ ಮನೆ ಮಾಡಿದೆ.ದೇಷ, ಅಸೂಯೆ ಮನೆ ಮಾಡಿದೆ. ಹಾಗಾಗಿ ನಾವೆಲ್ಲರೂ ಗಾಂಧಿ ವಿಚಾರಧಾರೆಗಳಿಗೆ ಮತ್ತೆ ಮರಳಬೇಕಿದೆ ಎಂದು ಶ್ರೀಜಪಾನಂದಜೀ ತಿಳಿಸಿದರು.
ಇದೇ ವೇಳೆ ಕ್ಷಯ, ಕುಷ್ಠ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಬಟ್ಟೆ, ಪೌಷ್ಠಿಕ ಆಹಾರದಕಿಟ್,ಪಾದರಕ್ಷೆ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಲಾಯಿತು. ನೂರಾರು ಜನರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಿದ್ದಗಂಗಾ ಆಸ್ಪತ್ರೆಯ ಡಾ.ಎಂ.ಎನ್.ಸಂಜೀವಕುಮಾರ್, ಡಾ.ಚಂದ್ರಕಲಾ.ಜಿ.ಆರ್, ಡಾ.ಅಭಿಷೇಕ್ ಡಿ, ಡಾ.ಕೀರ್ತಿಅಭಿಷೇಕ್, ಡಾ.ಸ್ವಾತಿ ಎಂ., ಶ್ರೀಮತಿ ಕೆ,ಶೋಭಾ, ಕೆ.ಜಯಶ್ರೀ, ಕೆ.ಎನ್.ಲಕ್ಷಿ, ಎಂ.ಎಸ್.ನಾಗರಾಜು, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.