ಶ್ರೀ ಸಿದ್ದಗಂಗಾ : ವಸ್ತುಪ್ರದರ್ಶನದಲ್ಲಿ ಮದ್ಯ, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮಳಿಗೆ

ತುಮಕೂರು : ಮದ್ಯ ಮತ್ತು ಮಾದಕ ವಸ್ತುಗಳು ಸಮಾಜ ಹಾಗೂ ಯುವ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಈ ಕಾಲದಲ್ಲಿ ನಗರದ ಶ್ರೀ ಸಿದ್ಧಗಂಗಾಮಠದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಮೂಡಿಸಲು ನಿರ್ಮಿಸಲಾದ ಜನ ಜಾಗೃತಿ ವಸ್ತುಪ್ರದರ್ಶನ ಮಳಿಗೆಯು ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೂ ಜಾಗೃತಿಯ ಕೇಂದ್ರವಾಗಿದೆ.

“ಮಾನವೀಯ ಮೌಲ್ಯಗಳನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಮಕ್ಕಳಲ್ಲಿ ಇವನ್ನು ಬೆಳೆಸೋಣ. ಮದ್ಯ ಮತ್ತು ಮಾದಕ ವಸ್ತು ಸೇವನೆಯಿಂದ ದೂರವಿರೋಣ. ಇವುಗಳ ವಿರುದ್ಧ ಜಾಗೃತಿ ಮೂಡಿಸೋಣ” ಎಂಬ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶ ಸೇರಿದಂತೆ ಪೂಜ್ಯ ಶ್ರೀಗಳಾದ ಶಿವಕುಮಾರಸ್ವಾಮೀಜಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ, ಕವಿಗಳಾದ ಕಾಳಿದಾಸ, ಸರ್ವಜ್ಞ, ಸಾಂಸ್ಕøತಿಕ ನಾಯಕ ಬಸವಣ್ಣ ಹಾಗೂ ಯೋಗ ಗುರು ರಾಮದೇವ್ ಅವರ ಜನ ಜಾಗೃತಿ ಸಂದೇಶಗಳನ್ನೊಳಗೊಂಡ ಚಿತ್ರಗಳು ಮಳಿಗೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಿದೆ.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಳಿಗೆಯನ್ನು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮಹೇಶ್, ಸಿದ್ಧಗಂಗಾಮಠದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *