ತುಮಕೂರು:ಎಸ್ ಎಸ್ ಎಲ್ ಸಿ ಪರೀಕ್ಷೆ ಈ ವೇಳೆ ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡಿದ್ದ . ಈ ವೇಳೆ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ ಸಿ.ಎಸ್ (16) ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿ ತುರವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಬಳಿಯ ಶ್ರೀ ಕಂಚಿರಾಯ ಸನಿವಾಸ ಪ್ರೌಢ ಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ತುರುವೇಕೆರೆ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಿಕಾ ಪ್ರೌಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಮೋಹನ್ ಕುಮಾರ್ ಸಿ.ಎಸ್ ಸೋಮವಾರ ಬೆಳಗ್ಗೆ ಪ್ರಥಮ ಭಾಷೆ ಕನ್ನಡ ವಿಷಯವನ್ನು ಬರೆಯುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದಾನೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕೆಲ ಸಮಯದ ನಂತರ ಮತ್ತೆ ತೀವ್ರ ಅಸ್ಪಸ್ಥಗೊಂಡಿದ್ದರಿಂದ ವೈದ್ಯರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣ ಆಂಬ್ಯೂಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗುಬ್ಬಿ ಸಮೀಪ ಸಾವನ್ನಪ್ಪಿದ್ದರಿಂದ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಅದೇ ಮಧ್ಯಾಹ್ನ ಹುಲ್ಲೇಕೆರೆಯ ಬಸವೇಶ್ವರ ಸಂಯುಕ್ತ ಪದವಿಪೂರ್ವ ಪ್ರೌಢ ಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮತ್ತೊರ್ವ ವಿದ್ಯಾರ್ಥಿ ರೋಹಿತ್ ಅಸ್ವಸ್ಥಗೊಂಡಿದ್ದರಿಂದ ದಂಡಿನಶಿವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆಂದು ಇಲಾಖಾ ಮೂಲಗಳು ತಿಳಿಸಿವೆ.