ತುಮಕೂರು:ಇದೇ ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ರೈತರು, ಕಾರ್ಮಿಕರು, ಬಡವರ ವಿರೋಧಿಯಾಗಿರುವ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಕರೆ ನೀಡಿದ್ದಾರೆ.
ತುಮಕೂರು ವಿಜ್ಞಾನಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 10 ವರ್ಷಗಳಲ್ಲಿ ರೈತರನ್ನು ಹೆಜ್ಜೆ, ಹೆಜ್ಜೆಗೂ ಅಪಮಾನಿಸುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸಿ, ರೈತರ ಉಳಿಸಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು,ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರೈತವಿರೋಧಿ,ಕಾರ್ಪೋರೇಟರ್ ಪರ ನಿಲುವು ಹೊಂದಿರುವ ಕೇಂದ್ರ ಸರಕಾರದ ವಿರುದ್ದ ದೇಶದ ಸುಮಾರು 444 ರೈತ ಪರ ಸಂಘಟನೆಗಳು ಒಗ್ಗೂಡಿ ದೆಹಲಿ ಮುತ್ತಿಗೆಯಂತಹ ಬೃಹತ್ ಹೋರಾಟ ರೂಪಿಸಿದಂತಹ ಸಂದರ್ಭದಲ್ಲಿ ರೈತರು ದೆಹಲಿ ಒಳಗೆ ಬರದಂತೆ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಿ,ರಸ್ತೆಗೆ ಸಿಮೆಂಟ್ ತಡೆಗೋಡೆ, ಮುಳ್ಳುತಂತಿ ಹೊಡೆಸಿದ್ದಲ್ಲದೆ, ಮಳೆಗಳನ್ನು ನೆಟ್ಟು ಇನ್ನಿಲ್ಲದ ಕಿರುಕುಳ ನೀಡಿದರು.ಇವೆಲ್ಲವನ್ನು ಮೆಟ್ಟಿನಿಂತ 13 ತಿಂಗಳುಗಳ ಕಾಲ ಲಕ್ಷಾಂತರ ರೈತರು ದೆಹಲಿ ಗಡಿಯಲ್ಲಿ ಹೋರಾಟ ಮುಂದುವರೆಸಿದ ಪರಿಣಾಮ ರೈತರಿಗೆ ಮಾರಕವಾಗಿದ್ದ 3 ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೆ ಆ ಸಮಯದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳಲಿಲ್ಲವೆಂದು ದೂರಿದರು.
ಪ್ರತಿಭಟನಾ ನಿರತ ರೈತರಿಗೆ ಕೊಟ್ಟ ಮಾತಿನಂತೆ ಎಂ.ಎಸ್.ಪಿ.ಗೆ ಕಾನೂನಿನ ನೆರವು ಒದಗಿಸಲಿಲ್ಲ.ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಬಿಜೆಪಿ ವಚನಭ್ರಷ್ಟವಾಗಿದೆ.ಹಾಗಾಗಿ 2024ರ ಫೆ.14 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಿಸಾನ್ ಮೋರ್ಚಾ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ರೈತರು ಬಿಜೆಪಿಗೆ ವಿರುದ್ದವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂಬುದು ರೈತ ಸಂಘದ ಮನವಿಯಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ದೇಶದ ಪ್ರಧಾನಿ ನರೇಂದ್ರಮೋದಿ ಅವರನ್ನು ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಸಾಲ ಮನ್ನಾ ಮಾಡಬೇಕೆಂದು ಹಲವು ಬಾರಿ ಮನವಿ ಮಾಡಿದ್ದರೂ ಕಿವಿಗೋಡದೆ, ರೈತರ ಸಾಲ ಮನ್ನಾ ಮಾಡಿದರೆ ದೇಶದ ಅರ್ಥಿಕ ಸ್ಥಿತಿ ದಿವಾಳಿಯಾಗುತ್ತದೆ ಎಂಬ ಮಾತುಗಳನ್ನಾಡಿದ್ದರು.ಆದರೆ ರೈತರ ಸಾಲ ಮನ್ನಾಕ್ಕಿಂತ ನಾಲ್ಕು ಪಟ್ಟು ಹೆಚ್ಚಿರುವ ಉದ್ದಿಮೆದಾರರ,ಎಂ.ಎನ್ಸಿ. ಕಂಪನಿಗಳ 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ತನ್ನ ರೈತ ವಿರೋಧಿ ನೀತಿಯನ್ನು ಪ್ರಚುರ ಪಡಿಸಿದೆ.ಇಂತಹ ರೈತ ವಿರೋಧಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹಾಗಾಗಿ ಬಿಜೆಪಿಯನ್ನು ಸೊಲಿಸಬೇಕೆಂಬುದು ರೈತ ಸಂಘದ ಮನವಿಯಾಗಿದೆ ಎಂದರು.
ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ,ಒಂದು ಕಾಲದಲ್ಲಿ ಕ್ವಿಂಟಾಲ್ ಕೊಬ್ಬರಿ 19 ಸಾವಿರ ಇದ್ದ ಬೆಲೆ, ಈಗ 7500-8000 ರೂ ಇದೆ.ಕೇಂದ್ರದ ಅವೈಜ್ಞಾನಿಕವಾದ ಅಮದು ನೀತಿಗಳಿಂದಾಗಿ ಕೊಬ್ಬರಿ ಬೆಲೆ ಕುಸಿತ ಕಂಡಿದೆ.ಕೇಂದ್ರ ಸರಕಾರ ಅವೈಜ್ಞಾನಿವಾಗಿ 11750 ರೂ ಇದ್ದ ಎಂ.ಎಸ್.ಪಿ.ಯನ್ನು 12000 ರೂಗಳಿಗೆ ಹೆಚ್ಚಳ ಮಾಡಿ ದೊಡ್ಡ ಸಾಧನೆ ಮಾಡಿರುವಂತೆ ಬಿಂಬಿಸುತ್ತಿದ್ದು, ಚುನಾವಣೆ ವೇಳೆ ಕೊಬ್ಬರಿ ಬೆಲೆ ಹೆಚ್ಚಳ ಮಾಡುವ ಬಣ್ಣದ ಮಾತುಗಳನ್ನಾಡುತ್ತಿದೆ. ರೈತರು ಇದನ್ನ ನಂಬ ಬಾರದು. ಕಳೆದ 8 ತಿಂಗಳಿನಿಂದ ರೈತರು ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ರೈತರು,ಕಾರ್ಮಿಕರು, ದಲಿತರು, ಯುವಕರು ಬಿಜೆಪಿಯನ್ನು ಸೋಲಿಸಿ, ಈ ದೇಶದ ರೈತರನ್ನು ಉಳಿಸುವಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲಿಸಿ, ರೈತರನ್ನು ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ದೊಡ್ಡಮಾಳಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ,ವಿವಿಧ ತಾಲೂಕುಗಳ ಅಧ್ಯಕ್ಷರುಗಳಾದ ಚಿಕ್ಕಬೋರೇಗೌಡ,ರಂಗಹನುಮಯ್ಯ, ತಿಮ್ಮೇಗೌಡ, ಕೆ.ಎನ್.ವೆಂಕಟೇಗೌಡ,ಯುವಘಟಕದ ಅಧ್ಯಕ್ಷ ಅರೇಹಳ್ಳಿ ಮಂಜುನಾಥ್,ಮಹೇಶ್, ಮಧುಗಿರಿ ನಾಗರಾಜು, ಶಬ್ಬೀರ ಪಾಷ, ಪುಟ್ಟಸ್ವಾಮಿ, ಸೋಮಶೇಖರ್, ಲಕ್ಷ್ಮಿಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.