ತುಮಕೂರು:ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್,ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಸ್ಕಾಲರ್‍ಶಿಫ್ ಯೋಜನೆಗಳನ್ನು ಕಡಿತ ಮಾಡುವ ಮಾಡುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ನಡಹಳ್ಳಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2008ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ,ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದರು.ಆ ನಂತರ ಕೇಂದ್ರ ಸರಕಾರದ ಪಿ.ಎಂ.ಕಿಸಾನ್ ಸನ್ಮಾನ ಯೋಜನೆಯ 6 ಸಾವಿರದ ಜೊತೆಗೆ,ರಾಜ್ಯ ಸರಕಾರವೂ 4 ಸಾವಿರ ಸೇರಿಸಿ,ವಾರ್ಷಿಕ 10 ಸಾವಿರ ರೂ ರೈತರ ಖಾತೆಗೆ ನೇರ ವರ್ಗಾವಣೆ ಯಾಗುವಂತೆ ಮಾಡಿದ್ದರು.ಅತಿವೃಷ್ಟಿ, ಆನಾವೃಷ್ಟಿಯಂತಹ ಕಾಲದಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ, ರಾಜ್ಯ ಸರಕಾರವೇ ಎಕರೆಗೆ 10 ಸಾವಿರ ರೂ ಪರಿಹಾರ ನೀಡಿತ್ತು.ಆದರೆ ಈಗ ರಾಜ್ಯ ಸರಕಾರದ ಬಳಿ ಎಕರೆಗೆ 2000 ರೂ ಪರಿಹಾರ ನೀಡಲು ಹಣವಿಲ್ಲ. ರಾಜ್ಯದ ಖಜಾನೆ ಇವರ ವಿವೇಚನಾ ರಹಿತ ಗ್ಯಾರಂಟಿಗಳಿಂದ ಖಾಲಿಯಾಗಿದೆ ಎಂದು ದೂರಿದರು.
ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೆಂಗು.ಕೇಂದ್ರ ಸರಕಾರ ತೆಂಗಿಗೆ 12 ಸಾವಿರ ರೂ ಬೆಂಬಲ ಬೆಲೆ ಘೋಷಿಸಿ ಖರೀದಿಗೆ ಅವಕಾಶ ನೀಡಿದ್ದರೂ ರಾಜ್ಯಸರಕಾರ ಇದುವರೆಗೂ ಒಂದು ನೈಯಾಪೈಸೆ ನೀಡಿಲ್ಲ. ಬದಲಾಗಿ ಖರೀದಿಯನ್ನು ಸಮರ್ಪಕವಾಗಿ ಮಾಡಿಲ್ಲ. ಕಾಮಧೇನು ಮತ್ತು ಕಲ್ಪವೃಕ್ಷ ಎರಡಕ್ಕೂ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ರೈತ ಮೋರ್ಚಾ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ತೆಂಗು ಮತ್ತು ಹಾಲಿನ ಉಪ ಉತ್ಪನ್ನಗಳ ಮೌಲ್ಯವರ್ಧನೆಗೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದು ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ನಡಹಳ್ಳಿ ನುಡಿದರು.
ಸುದ್ದಿಗೋಷ್ಠಿಗೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗಸ್ವಾಮಿಜಿ ಅವರ ಆಶೀರ್ವಾದ ಪಡೆದರು. ನಂತರ ತುಮಕೂರು ತಾಲೂಕು ಮಷಾಣಪುರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ರೈತರೊಂದಿಗೆ ಸಂವಾಧ ನಡೆಸಿದರು.
ರೈತರ ಜಯಣ್ಣ ಅವರ ತೋಟದಲ್ಲಿ ನಡೆದ ಸಂವಾದದ ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ,ರೈತರಿಗೆ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಕಳೆದ ಒಂದು ವಾರದಿಂದ ರಾಜ್ಯದಾದ್ಯಂತ ಗ್ರಾಮ ಪರಿಕ್ರಮ ಅಭಿಯಾನ ನಡೆಯುತ್ತಿದೆ. ಇಂದು ಮಶಾಣಪುರದ ಜಯಣ್ಣ ಅವರ ತೋಟದ ಮನೆಯಲ್ಲಿ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದೆ.ಮಂಡ್ಯ ಜಿಲ್ಲೆ ಮುಗಿಸಿ, ತುಮಕೂರು ಜಿಲ್ಲೆಗೆ ಪ್ರವೇಶ ಮಾಡಿದ್ದೇವೆ.ಕಳೆದ 10 ವರ್ಷಗಳಲ್ಲಿ ರೈತರಿಗೆ ನೀಡಿದ ಜಲಜೀವನ್ ಮೀಷನ್, ಕೃಷಿ ಸನ್ಮಾನ್ ಯೋಜನೆಗಳಿಂದ ಜನರಿಗೆ ಆಗಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದು,ಹೊಸ ಯೋಜನೆಗಳ ಅಗತ್ಯತೆ ಕುರಿತಂತೆ ಸಂವಾದ ನಡೆಸುವುದು ಇದರ ಉದ್ದೇಶವಾಗಿದೆ. ರೈತರು, ಬಡವರು, ಮಹಿಳೆಯರನ್ನು ಮುಖ್ಯವಾಗಿಟ್ಟುಕೊಂಡು ಕೇಂದ್ರದ ನರೇಂದ್ರಮೋದಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ,ರೈತಮೋರ್ಚಾ ಪದಾಧಿಕಾರಿಗಳಾದ ಸತ್ಯಮಂಗಲ ಜಗದೀಶ್,ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ,ಸಹ ಪ್ರಮುಖ್ ಜೆ.ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.