ಜನರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರ-ನಿಖಿಲ್ ಕುಮಾರಸ್ವಾಮಿ

ತುಮಕೂರು- ತನ್ನ ಅಸ್ತಿತ್ವಕ್ಕಾಗಿ ಪಂಚ ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಕ್ಕಾಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ಸ್ವೇಚ್ಛಾಚಾರವಾಗಿ ಬಳಸಿಕೊಳ್ಳುತ್ತಿದೆ. ಇನ್ನೊಂದೆಡೆ ಮಂತ್ರಿಗಳು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಜೈಲಿಗೆ ಹೋಗುತ್ತಿದ್ದಾರೆ ಎಂದು ಅವರು ದೂರಿದರು.

ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಅಳವಡಿಸುವ ವಿದ್ಯುತ್ ಪರಿವರ್ತಕಗಳ ಬೆಲೆಯನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ. ಇದನ್ನು ಗಮನಿಸಿದರೆ ರೈತರ ಮೇಲೆ ಈ ಸರ್ಕಾರಕ್ಕೆ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟಿಸಲು 58 ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದೇವೆ. ಡಿಸೆಂಬರ್ ತಿಂಗಳಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ನಡೆಸಬೇಕಿದೆ. ಇದುವರೆಗೂ ಚುನಾವಣೆ ನಡೆಯದ ಹಾಗೆ ಈ ಚುನಾವಣೆ ನಡೆಸಬೇಕಾಗಿದೆ ಎಂದರು.

ಯಾವುದೇ ಪಕ್ಷದ ರಾಜಕಾರಣ ಪುಟಿದೇಳಬೇಕು ಎಂದರೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿರುವ ಕಾರ್ಯಕರ್ತರ ಶಕ್ತಿ ಬಹಳ ದೊಡ್ಡದು. ಚುನಾವಣೆ 6 ತಿಂಗಳಾಗುತ್ತೋ ಅಥವಾ ವರ್ಷವಾಗುತ್ತೋ ಗೊತ್ತಿಲ್ಲ. ಆದರೆ ಪಕ್ಷ ಎಲ್ಲದಕ್ಕೂ ಸಿದ್ದವಾಗಿರಬೇಕು. ಅಷ್ಟರಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ನಾನು ಬಂದಿದ್ದೇನೆ, ನಿಮ್ಮೆಲ್ಲರ ಹೃದಯ ಗೆಲ್ಲಬೇಕು ಎಂಬ ಒಳ್ಳೆಯ ಉದ್ದೇಶದಿಂದ ಸಾರ್ವಜನಿಕ ಜೀವನಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಕುಮಾರಣ್ಣನ ಆಶೀರ್ವಾದಿಂದ ಈ ಭಾಗದಲ್ಲಿ ಪ್ರಾದೇಶಿಕ ಪಕ್ಷವನ್ನು ಮತ್ತಷ್ಟು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ನಮಗಿದೆ. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಜತೆಗೆ ರಾಜ್ಯಾದ್ಯಂತ ಜನರ ಸಮಸ್ಯೆ ಅರಿಯಲು ಈ ಪ್ರವಾಸ ಸಹಕಾರಿಯಾಗಿದೆ ಎಂದರು.

ಶಾಸಕ ಸಿ.ಬಿ. ಸುರೇಶ್‍ಬಾಬು ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಣ ತೊಡಲಾಗಿದೆ ಎಂದು ಹೇಳಿದರು.

ಮೂರು ಬಾರಿ ಸೋತರೂ ಸಹ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರು ಹೋರಾಟಕ್ಕೆ ಇಳಿದಿದ್ದಾರೆ ಎಂದರು.

ರಾಜ್ಯ ಸರ್ಕಾರದ ನಡೆದುಕೊಳ್ಳುತ್ತಿರುವ ರೀತಿಯಿಂದ ಜನತೆಗೆ ಪಶ್ಚಾತ್ತಾಪ ಆಗುತ್ತಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಸಹ ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಾಗಿದೆ ಎಂದು ಟೀಕಿಸಿದರು.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ಬಂದಿತ್ತು. ಇದರಲ್ಲಿ 2 ಕೋಟಿ ರೂ.ಗಳನ್ನು ಬುಕ್ಕಾಪಟ್ಟಣ ಅಭಿವೃದ್ಧಿಗೆ ನೀಡಲಾಗಿದೆ ಎಂದರು.

ಆರ್‍ಸಿಬಿ ವಿಜಯೋತ್ಸವದ ವೇಳೆ 11 ಮಂದಿ ಅಮಾಯಕರನ್ನು ರಾಜ್ಯ ಸರ್ಕಾರ ಬಲಿ ತೆಗೆದುಕೊಂಡಿತು. ಈ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸ್ವಪ್ರತಿಷ್ಠೆಗಾಗಿ ಕಾರ್ಯಕ್ರಮ ಮಾಡಲು ಹೋಗಿ ಕಾಲ್ತುಳಿತ ದುರಂತಕ್ಕೆ ಕಾರಣರಾದರು ಎಂದರು.

ರಾಜ್ಯ ಸರ್ಕಾರ ಯುವಕರಿಗೆ ಯುವ ನಿಧಿ ಯೋಜನೆಯಡಿ 3 ಸಾವಿರ ಕೊಟ್ಟು ಸೋಮಾರಿಗಳನ್ನಾಗಿ ಮಾಡಲು ಹೊರಟಿದೆ. ಈ ಸರ್ಕಾರ ಕೊಡುವ 3 ಸಾವಿರ ಪಡೆದು ಸೋಮಾರಿಗಳಾಗಲು ನಮ್ಮ ಯುವಕರು ಸಿದ್ದರಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಎಂದರು.

2028ಕ್ಕೆ ಕುಮಾರಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿ ಎಂಬ ಅಭಿಯಾನವನ್ನು 224 ಮತ ಕ್ಷೇತ್ರದಲ್ಲೂ ನಡೆಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಜೆಡಿಎಸ್ ಮುಖಂಡ ಎಸ್.ಆರ್. ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಇದಕ್ಕೂ ಮುನ್ನ ಬುಕ್ಕಾಪಟ್ಟಣ ವೃತ್ತದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ತುಂತುರು ಮಳೆಯಲ್ಲೇ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದೊಯ್ಯಲಾಯಿತು.

ಸಮಾವೇಶದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಚಿ.ನಾ.ಹಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಆರ್. ಉಗ್ರೇಶ್, ಎಸ್.ಆರ್.ಗೌಡ, ರಾಜಕುಮಾರ್, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಚೇತನ ಗಂಗಾಧರ್, ಲೋಹಿತಾ ಬಾಯಿ, ಶಶಿಧರಯ್ಯ, ದಾಂಡೇಲಿ ಗಂಗಣ್ಣ, ಮುದಿಮಡು ರಂಗಸ್ವಾಮಿ, ಹೊನ್ನೇಶಪ್ಪ, ರಾಮಕೃಷ್ಣಪ್ಪ, ಖಲಂದರ್ ಸಾಬ್, ಹೆಚ್.ಎನ್. ಕುಮಾರ್, ಜಾನಮ್ಮ ರಾಮಚಂದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *