ತುಮಕೂರು: ನಗರದ ವಿವೇಕಾನಂದ ಕ್ರೀಡಾ ಸಂಸ್ಥೆ ಹಾಗೂ ರಾಜ್ಯ ಖೋ ಖೋ ಸಂಸ್ಥೆ ಆಶ್ರಯದಲ್ಲಿ ಈ ತಿಂಗಳ 10ರಿಂದ 12ರವರೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಎರಡು ಅಂಕಣದಲ್ಲಿ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಹೆಚ್.ಡಿ.ಕುಮಾರ್ ಅವರು ಗುರುವಾರ ಮೈದಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಹೆಸರಾಂತ ಖೋ ಖೋ ಆಟಗಾರರು ಒಳಗೊಂಡ ತಂಡಗಳು ಹಗಲು ಹಾಗೂ ಹೊನಲುಬೆಳಕಿನ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪುರುಷರ 13 ಹಾಗೂ ಮಹಿಳೆಯರ 8 ತಂಡಗಳು ಸೆಣೆಸಾಡುವ ರೋಚಕ ಖೋ ಖೋ ಪಂದ್ಯಾವಳಿಯನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ 10ರಂದು ಸಂಜೆ 6 ಗಂಟೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯಸಾನಿಧ್ಯದ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಖೋ ಖೋ ಪಂದ್ಯಾವಳಿ ಉದ್ಘಾಟಿಸುವರು. ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರು ಭಾಗವಹಿಸುವರು. ಎರಡು ಅಂಕಣಗಳಲ್ಲಿ ಮ್ಯಾಟ್ ಅಳವಡಿಸಿ ಅಂತರಾಷ್ಟ್ರೀಯ ಗುಣಮಟ್ಟದ ಅಂಕಣ ಸಿದ್ಧಪಡಿಸಲಾಗುವುದು. ರಾಜ್ಯ ಸಂಸ್ಥೆಯ ಹೊಸ ನಿಯಮಗಳನ್ನು ಟೂರ್ನಿಯಲ್ಲಿ ಅಳವಡಿಸಲಾಗಿದೆ ಎಂದರು.
ವಿಜೇತ ತಂಡಗಳಿಗೆ ನಗದು ಬಹುಮಾನದ ಜೊತೆ ಟ್ರೋಫಿ ನೀಡಲಾಗುವುದು. ವಿಜೇತ ಪುರುಷ ತಂಡಕ್ಕೆ ಹಿರಿಯ ಕ್ರೀಡಾಪಟು ದಿ.ರವಿ ಸ್ಮಾರಕ ಟ್ರೋಫಿ ಹಾಗೂ ಮಹಿಳಾ ತಂಡದ ವಿಜೇತರಿಗೆ ದಿ.ಚಂದ್ರಕಲಾ ಸ್ಮರಣಾರ್ಥ ಟ್ರೋಪಿ ವಿತರಿಸಲಾಗುವುದು. 12ರಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್, ಸುರೇಶ್‍ಗೌಡ, ಸುರೇಶ್‍ಬಾಬು ಮೊದಲಾದವರು ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು ಎಂದು ಹೆಚ್.ಡಿ.ಕುಮಾರ್ ಹೇಳಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ವಿವೇಕಾನಂದ ಕ್ರೀಡಾ ಸಂಸ್ಥೆ ಸುಮಾರು 45 ವರ್ಷಗಳಿಂದ ತಾಲ್ಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗಿನ ಟೂರ್ನಿಗಳನ್ನು ಆಯೋಜಿಸಿ ಹೆಸರಾಗಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಕ್ರೀಡೆಯನ್ನು ಪ್ರೋತ್ಸಾಹಿಸಲು ಸರ್ಕಾರ ಉದ್ಯೋಗ ನೇಮಕಾತಿಯಲ್ಲಿ ಕ್ರೀಡಾ ಕೋಟಾ ಪ್ರಮಾಣವನ್ನು ಹೆಚ್ಚುಮಾಡಬೇಕು ಎಂದು ಮನವಿ ಮಾಡಿದರು.
ರೈಲ್ವೆ ಇಲಾಖೆಯ ನೇಮಕಾತಿಗಳಲ್ಲಿ ಕ್ರೀಡಾ ಕೋಟಾಕ್ಕೆ ಹೆಚ್ಚಿನ ಒತ್ತು ನೀಡಿ, ಕ್ರೀಡಾಪಟುಗಳಿಗೆ ಉದ್ಯೋಗ ದೊರಕಿಸುವ ಮೂಲಕ ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸಲು ಸಹಕರಿಸಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಕೋರುವುದಾಗಿ ಹೇಳಿದರು. ಸಮಾರೋಪ ಸಮಾರಂಭದಲ್ಲಿ ವಿವಿಧ ಪಂದ್ಯಾವಳಿಗಳಲ್ಲಿ ಸಾಧನೆ ಮಾಡಿ ಕೀರ್ತಿ ತಂದಿರುವ ಕ್ರೀಡಾಪಟುಗಳಾದ ಗೌತಮ್, ಚೇತನಾ, ಚೈತ್ರ, ಸಿದ್ಧಲಿಂಗಮೂರ್ತಿ, ವೀಣಾ, ಸರಸ್ವತಿ ಅವರನ್ನು ಗೌರವಿಸಲಾಗುವುದು ಎಂದು ಧನಿಯಾಕುಮಾರ್ ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ಎನ್.ನರಸಿಂಹರಾಜು, ಕಾರ್ಯದರ್ಶಿ ವಿನಯ್, ಜಂಟಿ ಕಾರ್ಯದರ್ಶಿ ಪ್ರೀತಂ, ಖಜಾಂಚಿ ಎಸ್.ಎನ್.ಹರೀಶ್, ಹಿರಿಯ ಕ್ರೀಡಾ ತರಬೇತುದಾರ ರವೀಶ್ ಮೊದಲಾದವರು ಭಾಗವಹಿಸಿದ್ದರು.