ತುಮಕೂರಿನಲ್ಲಿ ರಾಜ್ಯ ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ : ಜಿಲ್ಲಾಧಿಕಾರಿ

ತುಮಕೂರು : ಕರ್ನಾಟಕ ರಾಜ್ಯ 2025-26ನೇ ಸಾಲಿನ ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತುಮಕೂರು ಜಿಲ್ಲೆ ಆತಿಥ್ಯವಹಿಸಲಿದ್ದು, ಇದರ ಪೂರ್ವಭಾವಿಯಾಗಿ ನಗರದ ವಿವಿಧ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿವಿಧ ಕ್ರೀಡಾಂಗಣಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಜಿಲ್ಲೆ ಮತ್ತೊಮ್ಮೆ ಕ್ರೀಡಾ ಚಟುವಟಿಕೆಗಳ ಕೇಂದ್ರ ಬಿಂದುವಾಗುತ್ತಿದ್ದು, ಜನವರಿ 15 ರಿಂದ 22ರವರೆಗೆ ಏಳು ದಿನಗಳ ಕಾಲ ಜಿಲ್ಲೆಯಲ್ಲಿ ರಾಜ್ಯ ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧಿಕಾರಿಗಳು ಹಾಗೂ ಆಯೋಜನಾ ಸಮಿತಿಯ ಸದಸ್ಯರು  ನಗರದಲ್ಲಿನ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ವಿವಿಧ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ರೀಡಾಂಗಣಗಳಲ್ಲಿ  ಮೂಲಭೂತ ಸೌಲಭ್ಯಗಳು, ಕ್ರೀಡಾಪಟುಗಳ ವಸತಿ ವ್ಯವಸ್ಥೆ ಹಾಗೂ ಪ್ರೇಕ್ಷಕರ ಸೌಲಭ್ಯಗಳನ್ನೂ ವೀಕ್ಷಿಸಿದರು ಎಂದರು.

 ರಾಜ್ಯ ಹಿರಿಯರ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಒಟ್ಟು 27 ಕ್ರೀಡೆಗಳಿದ್ದು, ಅದರಲ್ಲಿ 23 ಕ್ರೀಡೆಗಳು ತುಮಕೂರು ಜಿಲ್ಲೆಯ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಉಳಿದ ಕ್ರೀಡೆಗಳು ರಾಜ್ಯ ರಾಜಧಾನಿಯಲ್ಲಿ  ಆಯೋಜನೆಗೊಳ್ಳಲಿವೆ ಎಂದು ಹೇಳಿದರು.

 ಕ್ರೀಡಾಕೂಟದ ವೇಳೆ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಸೇರಿದಂತೆ ಅನೇಕ ವಿಭಾಗಗಳಲ್ಲಿ ಹಿರಿಯ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

 ತುಮಕೂರು ಜಿಲ್ಲೆ ತನ್ನ ಕ್ರೀಡಾ ಪರಂಪರೆ, ಉತ್ತಮ ಸೌಲಭ್ಯಗಳು ಮತ್ತು ಸಂಘಟನಾ ಸಾಮಥ್ರ್ಯದಿಂದಾಗಿ ಈ ಮಹತ್ವದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಹಿರಿಯ ಕ್ರೀಡಾಪಟುಗಳ ಶಕ್ತಿಯು ಹಾಗೂ ಉತ್ಸಾಹವು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಂತರಾಜ್, ಸದಸ್ಯರಾದ ಶ್ರೀಪ್ರಕಾಶ್, ದಿಲೀಪ್, ಶಶಿವರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *