ಮಾರುಕಟ್ಟೆ ನಿಯಂತ್ರಣಕ್ಕೆ ಪರಿಣಾಮಕಾರಿ ಹೊಸ ಕಾನೂನು ಜಾರಿಗೆ ಕ್ರಮ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು: ಕಷ್ಟಪಟ್ಟು ಬೆಳೆ ಬೆಳೆಯುವ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೆ ಅನ್ಯಾಯವಾಗುತ್ತಿದೆ. ಜೊತೆಗೆ ಮಧ್ಯವರ್ತಿಗಳ ಹಾವಳಿಯಿಂದ ರೈತರು ವಂಚನೆಗೊಳಗಾಗುತ್ತಾರೆ. ಈ ಪರಿಸ್ಥಿತಿಯಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿಯಂತ್ರಣಕ್ಕೆ ಸರ್ಕಾರ ಪರಿಣಾಮಕಾರಿಯಾದ ಹೊಸ ಕಾನೂನುಗಳನ್ನು ರೂಪಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಅಂತರಸನಹಳ್ಳಿ ಎಪಿಎಂಸಿ ಉಪ ಪ್ರಾಂಗಣದಲ್ಲಿ ಸೋಮವಾರ ಇಲ್ಲಿನ ತರಕಾರಿ, ಹೂವು, ಹಣ್ಣು ವರ್ತಕರು ವೀಳ್ಯೆಯದೆಲೆ ಮತ್ತು ದಿನಸಿ ವ್ಯಾಪಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವರು, ವ್ಯಾಪಾರಿಗಳ ಬೇಡಿಕೆಯಂತೆ ಮಾರುಕಟ್ಟೆ ಪ್ರಾಂಗಣದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಮೇಲ್ಛಾವಣೆ ಹಾಕಿಸಲಾಗುವುದು. ಒಂದು ವಾರದಲ್ಲಿ ಇದರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಎಪಿಎಂಸಿ ಕಾರ್ಯದರ್ಶಿ ಪುಷ್ಪ ಅವರಿಗೆ ಸೂಚಿಸಿದರು.

ಮಾರುಕಟ್ಟೆಯಲ್ಲಿ ವ್ಯಾಪಾರಿ ಸಂಘಕ್ಕೆ ಜಾಗ ನೀಡುವುದು, ಮಾರುಕಟ್ಟೆ ಎದುರು ರಸ್ತೆಯಲ್ಲಿ ಹಂಪ್ಸ್ ಹಾಕಿಸಿ ಸಂಚಾರ ಒತ್ತಡ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ನಗರಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

2013ರಲ್ಲಿ ಇಲ್ಲಿ ಆರಂಭವಾದ ಮಾರುಕಟ್ಟೆಯಿಂದ ಇದೂವರೆಗೆ 56 ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗಿದೆ. ಇಲ್ಲಿ ವ್ಯವಸ್ಥಿತವಾಗಿ ವ್ಯಾಪಾರವಹಿವಾಟು ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದ ಸಚಿವ ಡಾ.ಪರಮೇಶ್ವರ್, ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹೊರಗಿನವರ ಅವಲಂಬನೆ ಹೆಚ್ಚಾಗಿರುವ ಕಾರಣ ನಗರದಲ್ಲಿ ಇಂತಹುದೇ ಮತ್ತೊಂದು ಮಾರುಕಟ್ಟೆ ಸ್ಥಾಪನೆ ಮಾಡುವ ಅಗತ್ಯವಿದೆ. ಹಾಗೇ ನಗರದ ವಿವಿಧೆಡೆ ಉಪ ಮಾರುಕಟ್ಟೆಗಳ ಸ್ಥಾಪನೆಯ ಪ್ರಸ್ತಾವಿದೆ. ಅಧಿಕಾರಿಗಳು ಸೂಕ್ತ ಜಾಗ ಗುರುತಿಸಿ ನೀಡಿದರೆ ಮಾರುಕಟ್ಟೆ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ತುಮಕೂರು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಜಿಲ್ಲೆಯಲ್ಲಿ ಹೆಚ್ಚು ಜನ ರೈತರು ಹೂವು, ತರಕಾರಿ ಬೆಳೆಯುತ್ತಾರೆ. ನಮ್ಮ ರೈತರ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯನ್ನು ತುಮಕೂರಿನಲ್ಲಿ ಆರಂಭಿಸಬೇಕು ಎಂದು ಸಚಿವ ಡಾ.ಪರಮೇಶ್ವರ್ ಅವರಿಗೆ ಮನವಿ ಮಾಡಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೆರೆ ಅಂಗಳವಾಗಿದ್ದ ಜಾಗದಲ್ಲಿ ಈ ಮಾರುಕಟ್ಟೆ ಸ್ಥಾಪನೆಯಾಗಿದೆ. ಮಳೆಗಾಲದಲ್ಲಿ ಅವ್ಯವಸ್ಥೆಯಾಗುತ್ತದೆ. ಸಮಸ್ಯೆಗಳನ್ನು ನಿವಾರಿಸಿ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ವ್ಯವಹಾರ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವರಲ್ಲಿ ವಿನಂತಿಸಿದರು.

ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅವರು, ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಎಲ್ಲಾ ಭಾಗದ ಜನ ಈ ಮಾರುಕಟ್ಟೆಗೆ ಬಂದುಹೋಗಲು ಕಷ್ಟವಾಗುತ್ತದೆ. ಹೀಗಾಗಿ ನಗರದ ವಿವಿಧೆಡೆ ಉಪ ಮಾರುಕಟ್ಟೆಗಳನ್ನು ಸ್ಥಾಪನೆ ಮಾಡುವಂತೆ ಸಚಿವರಿಗೆ ಕೋರಿದರು. ಸಾಂಪ್ರದಾಯಕ ವ್ಯಾಪಾರದ ಜೊತೆಗೆ ವ್ಯಾಪಾರಿಗಳು ಆಧುನಿಕ ವ್ಯಾಪಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ನಗರಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಪಿಎಂಸಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ, ನಗರಪಾಲಿಕೆ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಅಧ್ಯಕ್ಷ ಅರ್.ರಾಮಕೃಷ್ಣ, ವ್ಯಾಪಾರಿಗಳ ಸಂಘದ ಮುಖಂಡರಾದ ಟಿ.ಹೆಚ್.ವಾಸುದೇವ್, ಕೃಷ್ಣಪ್ಪ, ಟಿ.ಎನ್.ಎಸ್.ಯೋಗಾನಂದ್, ಮರಿಗಂಗಯ್ಯ, ರೈಟರ್ ರಾಮಣ್ಣ, ರವೀಶ್ ಜಹಂಗೀರ್, ಮುತ್ತುರಾಯಪ್ಪ, ಲಕ್ಷ್ಮೀನಾರಾಯಣ್, ಹೂವಿನ ನಾಗರಾಜು, ಮಾರುತಿಪ್ರಸನ್ನ, ನಾಗರಾಜು, ಪಾಪಣ್ಣ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *