ಮೊನ್ನೆ ಪತ್ರಿಕಾಗೋಷ್ಠಿಗೆ ಬಂದಿದ್ದ ಹಿರಿಯ ಗೆಳೆಯ ನರಸಿಂಹಯ್ಯನವರನ್ನು ಏನ್ರಿ ಯಂಗ್ ಅಂಡ್ ಎನರ್ಜಿಯಾಗಿದ್ದೀರ ಎಂದು ಕಿಚಾಯಿಸಿದೆ, ಅದೇ ನಗುವಿನೊಂದಿಗೆ ಎಲ್ಲಿ ಸ್ವಾಮಿ 60ವರ್ಷ ಆಯಿತು ಯಂಗ್ ಅಂಡ್ ಎನರ್ಜಿ ಎಂದು ಪಕಾರನೇ ನಕ್ಕರು.
ನನಗೆ ಅಯ್ಯೋ ನಮ್ಮ ಸ್ಥಿತ ಪ್ರಜ್ಞಾ ಪತ್ರಕರ್ತರು, 40ವರ್ಷದ ಪತ್ರಿಕಾ ಹಿರಿಯ ಗೆಳೆಯನಿಗೆ 60 ವರ್ಷ ಆಯಿತೇ ಎಂದುಕೊಳ್ಳುತ್ತಾ ಬನ್ನಿ ಎಂದು ಜೊತೆಯಲ್ಲಿ ಪೋಟೋ ತೆಗೆಸಿಕೊಂಡೆವು, ಯಾಕಪ್ಪ ಇಷ್ಟು ದಿನ ಇಲ್ಲದ್ದು ಈ ದಿನ ಪೋಟೋ ತೆಗೆಸಿಕೊಳ್ಳುತ್ತಿದ್ದೀಯ ಅಂತ ಮತ್ತೊಮ್ಮೆ ಯಾವುದೇ ಕಲ್ಮಶವಿಲ್ಲದ ನಗುವನ್ನು ಸೂಸಿದರು, ಅಯ್ಯೋ ಹಿರಿಯರಾದ್ರಲ್ಲ ಅದಕ್ಕೆ ಇರಲಿ ಅಂತ ಪೋಟೋ ತೆಗೆಸಿಕೊಂಡೆ ಅಂದೆ.
ಹೀಗೆ ಮಾತನಾಡುತ್ತಾ 1989ರಿಂದ ಪತ್ರಿಕೋದ್ಯಮದಲ್ಲಿದ್ದೀರಿ ಪ್ರಶಸ್ತಿ ಏನಾದರೂ ಬಂದಿದೆಯೇ ಎಂದೆ ಮತ್ತೊಮ್ಮೆ ಪಕಾರನೇ ನಕ್ಕ ನರಸಿಂಹಣ್ಣ, ನನ್ನ ಎದೆ ದಸಕ್ಕೆನ್ನುವಂತೆ ನಮ್ಮಂತಹವರನ್ನು ಯಾರು ಗುರುತಿಸಿ ಯಾವ ಪ್ರಶಸ್ತಿ ಕೊಡ್ತಾರೆ ಸಾರ್, ನಾವೇನು ಅದಕ್ಕಾಗಿ ಲಾಭಿ ಮಾಡಿದವರೂ ಅಲ್ಲ, ಅರ್ಜಿ ಹಾಕಿದವರೂ ಅಲ್ಲ ಎಂದರು.
ನರಸಿಂಹಣ್ಣ ವಕೀಲ ವೃತ್ತಿ ಹೇಗಿದೆ ಎಂದಾಗ ಅದೂ ಹಾಗೇ ಸ್ವಾಮಿ ನಮ್ಮಂತಹ ವಕೀಲರ ಹತ್ತಿರ ಬಡವರು, ಬಲ್ಲಿಗರೇ ಹೆಚ್ಚು ಬರೋದು, ಶ್ರೀಮಂತರು ಯಾರು ಬರುತ್ತಾರೆ ಒಟ್ಟಿನಲ್ಲಿ ನಾವು ನಗುತ್ತಾ ಎಲ್ಲಾದನ್ನು ಸ್ವೀಕರಿಸುತ್ತಾ ಹೋಗುತ್ತಾ ಇದ್ದೇನೆ, ಯಾಕಂದ್ರೆ ಮದುವೆ ಇಲ್ಲ, ಮುಂಜಿ ಇಲ್ಲ ಆದ್ರಿಂದ ಹ್ಯಂಗೋ ನಡೆಯುತಾ ಇದೆ ಎಂದು ಮತ್ತೊಮ್ಮೆ ನಗುವಿನಲ್ಲೇ ಮದುವೆಯಾಗಿರುವ ನಮಗೆ ನಗು ಬಾಣದಿಂದ ಚುಚ್ಚಿದರು.
ಹೌದು ನರಸಿಂಹಣ್ಣ ಬಂದಿದ್ದು ಬಡತನದಿಂದ, ಮಧುಗಿರಿ ತಾಲ್ಲೂಕು ಬಿಜವರದವರಾದ ನರಸಿಂಹಯ್ಯನವರು ತಂದೆ ನರಸಪ್ಪ, ತಾಯಿ ನರಸಮ್ಮನವರು ಹಿರಿಯ ಮಗ, 1989ರಲ್ಲಿ ತುಮಕೂರಿಗೆ ಬಂದು ಎಲ್‍ಎಲ್‍ಬಿ ಓದಲು ಬಂದ ನರಸಿಂಹಯ್ಯನವರು ಓದಿನ ಖರ್ಚಿಗಾಗಿ ಮಾಜಿ ಶಾಸಕ ಗಂಗಹನುಮಯ್ಯನವರ ಅಮೃತವಾಣಿಯಲ್ಲಿ ವರದಿಗಾರರಾಗಿ ಸೇರಿಕೊಂಡವರು, ಇದೂವರೆವಿಗೂ ಆ ಪತ್ರಿಕೆಯಲ್ಲೇ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಕೀಲರು, ಪತ್ರಕರ್ತರಾದರೂ ಮನೆಯ ಸಹೋದರ ಮತ್ತು ಸಹೋದರಿಯರನ್ನು ದಡ ಮುಟ್ಟಿಸುವ ಜವಾಬ್ದಾರಿ ಇವರ ಮೇಲೆ ಬಿದ್ದಿತ್ತು, ಅವರನ್ನು ದಡ ಮುಟ್ಟಿಸುವ ವೇಳೆಗೆ ಇವರಿಗೆ 50 ವರ್ಷ ದಾಟಿದ್ದರಿಂದ ಮದುವೆಯ ಯೋಚನೇನೆ ಬರಲಿಲ್ಲ ಕಣ್ರಿ ಎನ್ನುವ ನರಸಿಂಹಯ್ಯನವರು, ಎಲ್ಲಿಯೂ ನಾನು ಪತ್ರಕರ್ತ, ವಕೀಲ ಎಂದು ಹಮ್ಮಿ ಬಿಮ್ಮು ತೋರಿಸಿದ್ದನ್ನು ನನಗೆ 30ವರ್ಷಗಳಿಂದ ಗೆಳೆಯರಾದಾಗಿನಿಂದಲೂ ಕಂಡಿಲ್ಲ, ಅವರು ಅಮೃತವಾಣಿಯಲ್ಲಿದ್ದರೆ ನಾನು ಪ್ರಜಾಪ್ರಗತಿ, ಸೊಗಡು ಪತ್ರಿಕೆ ನಂತರ ನನ್ನದೇ ಸ್ವಂತ ಪತ್ರಿಕೆಯ ಸಂಪಾದಕನಾಗಿದ್ದೇನೆ, ಆದರೆ ನರಸಿಂಹಯ್ಯನವರು ಎಲ್ಲಿಯೂ ತಮ್ಮ ಸ್ಥಿತ ಪ್ರಜ್ಞೆಯನ್ನು ಕಳೆದುಕೊಳ್ಳದೆ ಸಮ-ಸಮಾಜಕ್ಕಾಗಿ ಏನಾದರೂ ಮಾಡೋಣ ಎನ್ನುತ್ತಾ ವಕೀಲ ವೃತ್ತಿ ಮತ್ತು ಪತ್ರಿಕೋದ್ಯಮದಲ್ಲಿ ನೊಗಲು ಕೊಟ್ಟು ಬಹು ದೂರ ಸಾಗಿ ಬಂದಿರುವ ನರಸಿಂಹಯ್ಯನವರಿಗೆ 60 ವರ್ಷ ತುಂಬಿದ್ದು ಗೊತ್ತಾಗಲೇ ಇಲ್ಲ.
ಕಳಂಕವಿಲ್ಲದ ನರಸಿಂಹಯ್ಯನನ್ನು ಕಾರ್ಯನಿರತ ಪತ್ರಕರ್ತರ ಸಂಘ ಗುರುತಿಸಿ ಗೌರವಿಸದೇ ಇರುವುದು, ಪ್ರಶಸ್ತಿ ನೀಡದಿರುವುದನ್ನು ನೋಡಿದರೆ ಪತ್ರಿಕಾ ಸಂಘವೂ ಒಡ್ಡೋಲಗದ ಪತ್ರಕರ್ತರನ್ನು ಮಾತ್ರ ಓಲೈಸುತ್ತಾ ಬಂದಿದೆ, ಒಬ್ಬ ಸ್ಥಿತಪ್ರಜ್ಞಾ ನರಸಿಂಹಯ್ಯನಂತಹ ಪತ್ರಕರ್ತರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪತ್ರಕರ್ತರು ನೀಡುವ ದತ್ತಿ ಪ್ರಶಸ್ತಿಗಳು ದೊರೆಯಬೇಕಿತ್ತು, ಏಕೆಂದರೆ ಇಂತಹ ಪ್ರಾಮಾಣಿಕ, ಸಾಮಾಜಿಕ ಕಾಳಜಿಯುಳ್ಳವರಿಗೆ ಪ್ರಶಸ್ತಿಗಳು ದೊರೆತಾಗ ಆ ಪ್ರಶಸ್ತಿಗೆ ಒಂದು ಅರ್ಥ, ಗೌರವ ಸಿಗುತ್ತದೆ. ಜೊಳ್ಳುಗಳಿಗೆ ಪ್ರಶಸ್ತಿ ನೀಡಿದಾಗ ಪ್ರಶಸ್ತಿಯೂ ಜೊಳ್ಳಾಗಿರುತ್ತದೆ.
ನರಸಿಂಹಯ್ಯ ಅವರಿಗೆ 60 ತುಂಬಿದ್ದಕ್ಕೆ ಮೈತ್ರಿನ್ಯೂಸ್ ಪತ್ರಿಕಾ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತದೆ, ಅವರು ಪತ್ರಕರ್ತರಾಗಿ ನೂರು ವರ್ಷದ ತನಕ ಇದೇ ನಗುವಿನ ಸ್ಥಿತ ಪ್ರಜ್ಞರಾಗಿ ನಮ್ಮೊಂದಿಗಿರಲಿ ಎಂಬ ಹಾರೈಕೆ ನಮ್ಮದು, ಪ್ರಶಸ್ತಿಗಳು ಬಂದಿಲ್ಲ ಎಂದು ಕೊರಗುವುದು ಬೇಡ, ಪ್ರಾಮಾಣಿಕ, ನೈತಿಕತೆ, ಬದ್ಧತೆ ಇರುವಂತಹವರು ಎಂದೆಂದೂ ಸಮಾಜದಲ್ಲಿ ಕಡೆಗಣಿಸಲ್ಪಡುತ್ತಿರುತ್ತಾರೆ, ಯಾಕೆಂದರೆ ಸತ್ಯ ಯಾವಾಗಲೂ ಕಠೋರವಾಗಿರುತ್ತದೆ, ಸತ್ಯವೇ ನನ್ನ ದೇಯ ಎಂದ ಗಾಂಧಿಯ ಎದೆಗೆ ಗುಂಡು ಹೊಡೆದಿರುವಾಗ ನಮ್ಮ ನರಸಿಂಹಣ್ಣನಿಗೆ ಬಿರಿದು, ಭಾವಲಿ, ಪ್ರಶಸ್ತಿಗಳು ಅವಾಗೆ ಹುಡುಕಿಕೊಂಡು ಬರಲು ಸಾಧ್ಯವಿಲ್ಲ.
ನರಸಿಂಹಣ್ಣ ಇದೇ ರೀತಿ ನಗುತ್ತಾ ವಕೀಲಿ ಮತ್ತು ಪತ್ರಿಕೋದ್ಯಮದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂಬುದೇ ನನ್ನಂತಹವನ ಆಶಯ, ನರಸಿಂಹಣ್ಣ ಮತ್ತಷ್ಟು ಯಂಗ್ ಅಂಡ್ ಎನರ್ಜಿಯೊಂದಿಗೆ ನಮಗೆ ಸ್ಫೂರ್ತಿಯಾಗಲಿ ಎಂಬ ಆಶಯ ನನ್ನದು.
-ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್
ತುಮಕೂರು.