ವಾರದೊಳಗೆ ತಾಲೂಕು ಮಟ್ಟದ ಜಾಗೃತಿ ಉಸ್ತುವಾರಿಸಭೆ ನಡೆಸಲು ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ಸೂಚನೆ

ತುಮಕೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಕುಂದುಕೊರತೆಗಳ ಬಗ್ಗೆ ತಾಲೂಕು ಹಂತದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಇನ್ನೊಂದು ವಾರದೊಳಗಾಗಿ ಜಿಲ್ಲೆಯ ಎಲ್ಲಾ ಉಪ ವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತಿ ಉಸ್ತುವಾರಿ ಸಭೆ ನಡೆಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಉಪ ವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಸಭೆ ನಡೆಸಿ ಮುಂದಿನ ಸಭೆಯೊಳಗಾಗಿ ವರದಿ ಸಲ್ಲಿಸಬೇಕು ಎಂದು ಆಯಾ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ತುಮಕೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹೊರತುಪಡಿಸಿ ಉಳಿದ 8 ತಾಲೂಕುಗಳಲ್ಲಿ ಸಭೆ ನಡೆಸದೇ ಇರುವ ಕುರಿತು ಆಯಾ ತಹಶೀಲ್ದಾರ್ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಮುಂದಿನ ವಾರದೊಳಗೆ ಸಭೆ ನಡೆಸಲು ಉದಾಸಿನ ತೋರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರಲ್ಲದೆ ಪರಿಶಿಷ್ಟ ಜಾತಿ-ವರ್ಗದವರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದೀರ್ಘಕಾಲದವರೆಗೆ ಬಗೆಹರಿಸದೆ ಬಾಕಿ ಉಳಿಸಿಕೊಳ್ಳಬಾರದು. ತಾಲೂಕು-ವಿಭಾಗ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಮಿತಿ ಗಮನಕ್ಕೆ ತರಬೇಕೆಂದರು.

ಸಮಿತಿ ಸದಸ್ಯರಾದ ರಂಗಯ್ಯ ಹಾಗೂ ನರಸಿಂಹಮೂರ್ತಿ ಮಾತನಾಡಿ 2018 ರಿಂದ 2024ರ ಜೂನ್ 30ರವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 380 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇದ್ದು, ತ್ವರಿತ ವಿಲೇವಾರಿಗೆ ಮಾನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸುಮಾರು 6 ವರ್ಷಗಳಿಂದ ಬಾಕಿ ಇರುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯಗಳ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು. ಇಂತಹ ಪ್ರಕರಣಗಳನ್ನು ಆದಷ್ಟು ಕಡಿಮೆ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸಬೇಕು. ವಿಶೇಷ ನ್ಯಾಯಾಲಯಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯಗಳ ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಬೇಕು. ಉಳಿದ ಪ್ರಕರಣಗಳನ್ನು ವಿಶೇಷ ನ್ಯಾಯಗಳಲ್ಲಿ ದಾಖಲಿಸಿಕೊಳ್ಳದಿರಲು ಕ್ರಮವಹಿಸಬೇಕೆಂದು ಸರ್ಕಾರಿ ಅಭಿಯೋಜಕ ಡಿ.ಎಸ್. ಜ್ಯೋತಿ ಅವರಿಗೆ ಸೂಚಿಸಿದರು.

ಸಮಿತಿ ಸದಸ್ಯರಾದ ರಂಗಯ್ಯ ಹಾಗೂ ನರಸಿಂಹಮೂರ್ತಿ ಮಾತನಾಡಿ ಜಿಲ್ಲೆಯಲ್ಲಿ 2023ರ ಜನವರಿಯಿಂದ ನವಂಬರ್‍ವರೆಗೂ ಪೋಕ್ಸೋ ಕಾಯ್ದೆಯಡಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ 19 ಪ್ರಕರಣಗಳ ಪೈಕಿ ಒಬ್ಬ ಆರೋಪಿ ಬಿಡುಗಡೆಯಾಗಿದ್ದು, ಉಳಿದ 18 ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸಮಿತಿಗೆ ಒತ್ತಾಯಿಸಿದರಲ್ಲದೆ ನೊಂದ ಬಾಲಕಿ ಹಾಗೂ ಆಕೆಯ ತಂದೆ ತಾಯಿಗಳು ಆರೋಪಿಗಳೊಂದಿಗೆ ರಾಜಿ-ಸಂಧಾನ ಮಾಡಿಕೊಳ್ಳದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪೋಕ್ಸೋ ಪ್ರಕರಣಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥವಾದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಆರೋಪಿಗಳಿಗೆ ಶಿಕ್ಷೆಯ ಸ್ವರೂಪದ ಬಗ್ಗೆ ತಿಳುವಳಿಕೆ ಮೂಡಿದಾಗ ಮಾತ್ರ ಪೋಕ್ಸೋ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ 2023ರ ಕ್ಯಾಲೆಂಡರ್ ವರ್ಷದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ವಿಶೇಷ ನ್ಯಾಯಾಲಯದಲ್ಲಿ 354 ಪ್ರಕರಣಗಳು ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಆರೋಪಿಗಳ ಬಿಡುಗಡೆಯಾಗಿದೆ. ಉಳಿದ ಪ್ರಕರಣಗಳು ಬಾಕಿ ಇದ್ದು, ಶಿಕ್ಷೆ ಪ್ರಮಾಣ ಶೂನ್ಯವಾಗಿದೆ. ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಶಿಕ್ಷೆಗೆ ಅಗತ್ಯವಿರುವ ಸೂಕ್ತ ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ಒದಗಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಜಿಲ್ಲಾದ್ಯಂತ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಮಂಜೂರಾಗಿರುವ ಸ್ಮಶಾನ ಭೂಮಿಗಳಿಗೆ ತ್ವರಿತವಾದ ಕಾಯಕಲ್ಪ ನೀಡಬೇಕು ಹಾಗೂ ಇದುವರೆಗೂ ಸ್ಮಶಾನ ಮಂಜೂರಾಗದೆ ಇರುವ ಗ್ರಾಮಗಳಿಗೆ ಜಾಗ ನಿಗಧಿಪಡಿಸಬೇಕೆಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಮಾತನಾಡಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಂಜೂರಾಗಿರುವ ಸ್ಮಶಾನ ಭೂಮಿಗಳನ್ನು ಗುರುತಿಸಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಜಿಲ್ಲಾಡಳಿತದಿಂದ ಸುಮಾರು 2437 ಸ್ಮಶಾನ ಭೂಮಿಗಳನ್ನು ಗುರುತಿಸಿದ್ದು, ಈ ಪೈಕಿ 600 ಸ್ಮಶಾನ ಭೂಮಿಗಳನ್ನು ಜಿಪಿಎಸ್ ಮಾಡಿ ಸಂಬಂಧಿಸಿದ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರವಾಗಿರುವ ಸ್ಮಶಾನ ಭೂಮಿಯನ್ನು ಆಯಾ ಪಂಚಾಯಿತಿಗಳು ಸುತ್ತಲೂ ಬೇಲಿ ಹಾಕಿ “ಸಾರ್ವಜನಿಕರ ಸ್ಮಶಾನ ಭೂಮಿ”ಯೆಂದು ಫಲಕವನ್ನು ಅಳವಡಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಅವರಿಗೆ ಸೂಚನೆ ನೀಡಿದರು.

ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದಲಿತರಿಗೆ ಶವ ಹೂಳಲು ಅವಕಾಶ ನೀಡದೆ ಅಡ್ಡಿಪಡಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ದೂರು ನೀಡಬೇಕೆಂದು ಪ.ಜಾತಿ/ಪಂಗಡದ ಸಮುದಾಯದವರಿಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಪಾವಗಡ ತಾಲೂಕು ಕ್ಯಾತಗಾನಹಳ್ಳಿ, ಕೊರಟಗೆರೆಯ ನೀಲಗೊಂಡನಹಳ್ಳಿ, ತುಮಕೂರಿನ ದುರ್ಗದಹಳ್ಳಿ, ಚಿಕ್ಕನಾಯಕನಹಳ್ಳಿಯ ಹಂದನಕೆರೆಯ ಸ್ಮಶಾನ ಭೂಮಿ ಸಮಸ್ಯೆ ಸಂಬಂಧ ಕೈಗೊಂಡಿರುವ ಕ್ರಮಗಳ ಹಾಗೂ ಮುಜರಾಯಿ ದೇವಾಲಯಗಳಲ್ಲಿ ಪರಿಶಿಷ್ಟ ಜಾತಿ-ಪಂಗಡ ಜನಾಂಗದವರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಎಂಬ ನಾಮಫಲಕಗಳನ್ನು ದಪ್ಪ ಅಕ್ಷರಗಳಲ್ಲಿ ಬರೆಸಿ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸಭೆಗೆ ಮಾಹಿತಿ ನೀಡುತ್ತಾ, 2023-24ನೇ ಸಾಲಿನಲ್ಲಿ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಸಂಬಂಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ನಡೆದಿರುವ 96 ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯಲ್ಲದೆ ದೌರ್ಜನ್ಯ ಪ್ರಕರಣಗಳು ನಡೆದಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೆÇಲೀಸ್ ಇಲಾಖೆ ಸಹಕಾರದಲ್ಲಿ ಶಾಂತಿ ಸಭೆಗಳನ್ನು ನಡೆಸಿ ನೊಂದ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಮಂಜೂರಾತಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ಪ್ರಕರಣಗಳಡಿ 2024ರ ಜನವರಿಯಿಂದ ಜುಲೈ 16ರವರೆಗೆ ಜಾತಿನಿಂದನೆ, ಪ್ರಾಣ ಬೆದರಿಕೆ, ಹಲ್ಲೆ, ಕೊಲೆ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ 46(ಪ.ಜಾ=34, ಪ.ಪಂ=12) ಪ್ರಕರಣಗಳ ಪೈಕಿ 55 ಪರಿಶಿಷ್ಟ ಜಾತಿಯ ಸಂತ್ರಸ್ತರಿಗೆ ಒಟ್ಟು 40.50ಲಕ್ಷ ರೂ. ಹಾಗೂ ಪರಿಶಿಷ್ಟ ಪಂಗಡದ 25 ಸಂತ್ರಸ್ತರಿಗೆ ಒಟ್ಟು 16.25ಲಕ್ಷ ರೂ.ಗಳ ಪರಿಹಾರ ನೀಡಲಾಗಿದ್ದು, 2018-19 ರಿಂದ 2024-25ರವರೆಗೆ ಎಸ್.ಸಿ.-ಎಸ್.ಟಿ. ದೌರ್ಜನ್ಯ ಪ್ರಕರಣದಡಿ 32 ಮಂದಿ ಮೃತಪಟ್ಟಿದ್ದು, ಮೃತಪಟ್ಟ 4 ಪ್ರಕರಣಗಳಲ್ಲಿ ವಾರಸುದಾರರಿಗೆ ಸರ್ಕಾರಿ ನೌಕರಿ ನೀಡಲಾಗಿದೆ. ಉಳಿದಂತೆ 5 ಪ್ರಕರಣಗಳಲ್ಲಿ ವಾರಸುದಾರರು ಸರ್ಕಾರಿ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದು, ಪ್ರಕ್ರಿಯೆ ಜಾರಿಯಲ್ಲಿದ್ದು, 21 ಪ್ರಕರಣಗಳಲ್ಲಿ ವಿವಿಧ ಕಾರಣಗಳಿಂದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೆ ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ 23 ಅವಲಂಬಿತರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ, ಸಪ್ತಶ್ರೀ ಹಾಗೂ ಗೋಟೂರು ಶಿವಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಅಬ್ದುಲ್ ಖಾದರ್, ವಿವಿಧ ತಾಲೂಕು ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *