ಅಮಿತ್ ಶಾ ಅಂಬೇಡ್ಕರ್ ಬಗ್ಗೆಯ ಹೇಳಿಕೆಗೆ ತೀವ್ರ ಖಂಡನೆ

“ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಸ್ಮರಿಸುವುದು ಇತ್ತೀಚೆಗೆ ಫ್ಯಾಶನ್ ಆಗಿಬಿಟ್ಟಿದೆ. ಅದರ ಬದಲಾಗಿ ಅಷ್ಟೇ ಬಾರಿ ದೇವರ ಸ್ಮರಣೆ ಮಾಡಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎಂದು ಸಂಸತ್ತಿನಲ್ಲಿ ಹೇಳುವ ಮೂಲಕ ಸಂವಿಧಾನ ರಚನಾಕಾರರಾದ ಬಾಬಾ ಸಾಹೇಬರನ್ನು ಅವಮಾನಿಸಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರ ಹೇಳಿಕೆಯನ್ನು ತೀವ್ರ ಖಂಡಿಸುತ್ತದೆ ಎಂದು ಅಂಬೇಡ್ಕರ್-ಲೋಹಿಯಾ ಅಧ್ಯಯನ ಕೇಂದ್ರದ ಸಂಚಾಲಕರುಗಳಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಹೆಚ್.ಟಿ.ರವಿಕುಮಾರ್ ತಿಳಿಸಿದ್ದಾರೆ.

ಅವರ ಹೇಳಿಕೆಯ ಜವಾಬ್ದಾರಿಯುತವಾದ ಪ್ರಜಾಪ್ರತಿನಿಧಿಯ ಹೇಳಿಕೆಯಂತೆ ಇರದೆ, ಜಾತಿಗ್ರಸ್ಥ ಸಮಾಜದ ಪ್ರತಿನಿಧಿಯ ಹೇಳಿಕೆಯಂತಿದ್ದು ಅವರು ಪ್ರಜಾ ಪ್ರತಿನಿಧಿಯಾಗಿ ಮುಂದುವರೆಯುಲು ಯೋಗ್ಯತೆ ಇರುವುದಿಲ್ಲ. ಆದ ಕಾರಣ ತಮ್ಮ ಸಚಿವ ಸ್ಥಾನ ಮತ್ತು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಮಿತ್ ಶಾ ರವರನ್ನು ಕೇಂದ್ರವು ಆಗ್ರಹಿಸಿದ್ದಾರೆ.

ಅಂಬೇಡ್ಕರ್ ರವರಿಗೆ ಅವಮಾನಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿರುತ್ತದೆ. ಚುನಾವಣಾ ಲಾಭಕ್ಕಾಗಿ ಅಂಬೇಡ್ಕರ್ ವಾದಿಗಳನ್ನು ಓಲೈಸುವ ನಾಟಕವಾಡುತ್ತಲೇ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದ ಬಿಜೆಪಿಯವರ ನಿಜ ಬಣ್ಣ ಗೃಹಮಂತ್ರಿಗಳಾದ ಅಮಿತ್ ಶಾ ರವರ ಹೇಳಿಕೆಯಿಂದ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ರವರಿಗೆ ಅಂಬೇಡ್ಕರ್ ರವರ ಬಗ್ಗೆ ಅಸಹನೆ ಇದೆಯೇ ಅಥವಾ ಅಜ್ಞಾನವಿದೆಯೋ ತಿಳಿಯುತ್ತಿಲ್ಲ ಆದರೆ ಅವರು ಅಂಬೇಡ್ಕರ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳ್ಳೆಯದು. 1991ರಲ್ಲಿ ಲೋಕಸಭಾ ಸಚಿವಾಲಯವು ಅಪ್ರತಿಮ ಸಂಸದೀಯ ಪಟುಗಳ ಮಾಲಿಕೆಯನ್ನು ಹೊರತಂದಿದ್ದು. ಈ ಪೈಕಿ ಮಾಲಿಕೆ-12 ಡಾ.ಬಿ.ಆರ್.ಅಂಬೇಡ್ಕರ್ ಕುರಿತಾದ ಮಾಲಿಕೆಯಾಗಿರುತ್ತದೆ ಮತ್ತು ಅಮಿತ್ ಶಾ ರವರು ಕಾರ್ಯನಿರ್ವಹಿಸುವ ಸಂಸತ್ತಿನಲ್ಲಿಯೇ ದೊರೆಯುತ್ತದೆ. ಅದರಲ್ಲಿ ಅನೇಕ ವಿದ್ವಾಂಸರು ಬಾಬಾ ಸಾಹೇಬರ ಕುರಿತಾಗಿ ಲೇಖನಗಳನ್ನು ಬರೆದಿದ್ದು, ಅವುಗಳಲ್ಲಿ ಬಾಬಾ ಸಾಹೇಬರ ಸಾಧನೆ, ವಿಚಾರಗಳ ಪ್ರಸ್ತಾಪವಿದೆ. ಕನಿಷ್ಠ ಪಕ್ಷ ಅಷ್ಟನ್ನಾದರೂ ಕೇಂದ್ರ ಗೃಹ ಮಂತ್ರಿಗಳು ಓದಿಕೊಳ್ಳಲಿ ಎಂದು ಆಶಿಸುತ್ತದೆ ಎಂದಿದ್ದಾರೆ.

ಒಂದು ವೇಳೆ ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಹುಡುಕಿ ತೆಗೆದುಕೊಳ್ಳಲು ಅವರಿಗೆ ಸಮಯಾವಕಾಶವಿಲ್ಲದಿದ್ದಲ್ಲಿ ನಮ್ಮ ಕೇಂದ್ರವೇ ಅಂಬೇಡ್ಕರ್ ಸಮಗ್ರ ಬರಹಗಳು ಮತ್ತು ಭಾಷಣಗಳನ್ನು ಒಳಗೊಂಡ ಸಂಪುಟಗಳನ್ನು ಹಾಗೂ ಸಚಿವಾಲಯದ ಮಾಲಿಕೆ-12ರನ್ನು ಕಳುಹಿಸಲು ಸಿದ್ದರಿದ್ದೇವೆ ಎಂದು ಈ ಮೂಲಕ ಗೃಹ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಬಯಸುತ್ತದೆ. ಅಂಬೇಡ್ಕರ್ ರವರ ಜ್ಞಾನದ ಹಣತೆಯನ್ನು ಕೈಯಲ್ಲಿಡಿದು ಸಾಗುತ್ತಿರುವ ನಮ್ಮ ಕೇಂದ್ರವು ಗೃಹ ಮಂತ್ರಿಗಳಿಗೆ ಅಂಬೇಡ್ಕರ್‍ರವರ ಬಗ್ಗೆ ಅರಿವು ಮೂಡಿಸುವುದು ಕರ್ತವ್ಯ ಎಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *