ತುಮಕೂರು : ಮೊಬೈಲ್ ಒಂದು ಮಾಯಾ ಕನ್ನಡಿ. ಅದರಲ್ಲಿ ಮುಖನೋಡಿಕೊಳ್ಳಲು ಹೋದರೆ ನೀವು ಮುಳುಗಿ ಹೋಗುತ್ತೀರಿ. ಮಾಯಾ ಕನ್ನಡಿಯ ಮೋಹದಿಂದ ಹೊರಬಂದು ಪುಸ್ತಕ ಓದುವುದು ಅಭ್ಯಾಸ ರೂಢಿಸಿಕೊಳ್ಳಬೇಕು. ಇಂಗ್ಲಿಷ್ ಭಾಷೆಗೆ ಹೆದರಬೇಡಿ, ಭಾಷೆ ಕಲಿಯಿರಿ, ಓದುವುದು ಕಲಿಯಿರಿ. ಓದಿನಿಂದಷ್ಟೇ ಉತ್ತಮ ಬರವಣೆಗೆ ಸಾಧ್ಯ ಎಂದು ಹಿರಿಯ ಪತ್ರಕರ್ತ ಡಿ.ಉಮಾಪತಿ ಹೇಳಿದರು.
ನಗರದ ಎಸ್ ಎಸ್‍ಎಸ್‍ಐಟಿ ಕ್ಯಾಂಪಸ್ ಆವರಣದಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್,ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,, ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಇಂದಿನಿಂದ (ಗುರುವಾರ)ಆಯೋಜಿಸಿದ್ದ “ಡಿಜಿಟಲ್ ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು” ಕುರಿತು ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾಷೆ, ಜಾತಿ, ಲಿಂಗ ಸೂಕ್ಷ್ಮತೆಯ ಅರಿವು ಇರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿನಿಮಾ ನೋಡುವ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪತ್ರಕರ್ತರು ಎಐ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದಿದ್ದರೆ ಅಪ್ರಸ್ತುವಾಗುತ್ತಾರೆ. ಎಐ ತಂತ್ರಜ್ಞಾನ ಬಳಸಿಕೊಂಡು ವೃತ್ತಿಪರತೆ ಹೆಚ್ಚಿಸಿಕೊಳ್ಳಬೇಕು. ಪತ್ರಕರ್ತರು ಅಗತ್ಯವಾಗಿ ಬಳಸಲು ಕಲಿಯಬೇಕು ಎಂದರು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಮಾತನಾಡಿ ಸಂವಿಧಾನ ಮೂರು ಅಂಗಗಳನ್ನು ಸೃಜನೆ ಮಾಡಿದೆ. ಸಮಾಜ ಸೃಜನೆ ಮಾಡಿದ ನಾಲ್ಕನೇ ಅಂಗ ಪತ್ರಿಕಾ ರಂಗ. ಸಂವಿಧಾನದ ಆಶಯ ತಿಳಿದುಕೊಂಡರೆ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದರು.
ಪತ್ರಕರ್ತರಿಗೆ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೇಕು. ಸಕಾರಾತ್ಮಕ ಅಂಶಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು, ಪ್ರತಿಯೊಂದು ಇಲಾಖೆಗೆ ಭೇಟಿ ನೀಡಿ ಜನರಿಗೆ ಅಗತ್ಯವಾಗಿ ಬೇಕಾದ ಮಾಹಿತಿ ನೀಡುವಲ್ಲಿ ಪತ್ರಕರ್ತರು ಮುಂದಾಗಬೇಕು. ಅಲ್ಲದೆ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಬೇಕು ಎಂದು ಜಿ.ಪ್ರಭು ಹೇಳಿದರು.
ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರಾದ ಡಾ ವಿವೇಕ್ ವೀರಯ್ಯ ಮಾತನಾಡಿ ಶಿಕ್ಷಣ ಭೀಷ್ಮ ಡಾ. ಎಚ್.ಎಂ ಗಂಗಾಧರಯ್ಯನವರು ಆರಭಿಂಸಿದ ಪ್ರಾಥಮಿಕ ಶಿಕ್ಷಣ ಶಾಲೆ ಪ್ರಸ್ತುತ ಜಾಗತಿಕ ಗುಣಮಟ್ಟದ ಶಿಕ್ಷಣನ್ನು ನೀಡುತ್ತಿದೆ. ವೈದ್ಯಕೀಯ, ತಾಂತ್ರಿಕ ಸೇರಿದಂತೆ ವಿವಿಧ ವಲಯಗಳ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿಕೊಂಡಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಮಾಧ್ಯಮ ಶಿಕ್ಷಣಕ್ಕೂ ಒತ್ತುಕೊಟ್ಟಿದೆ. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಓದಿರುವ ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಿ ರೂಪುಗೊಂಡಿದ್ದಾರೆ ಎಂದರು.
ಗ್ರಾಮೀಣ ವರದಿಗಾರಕೆ ಮತ್ತು ಡಿಜಿಟಲ್ ಮಾಧ್ಯಮ ವಿಷಯ ಕುರಿತು ಕುವೆಂಪು ವಿವಿ ನಿವೃತ್ತ ಪ್ರಧ್ಯಾಪಕ ಪ್ರೊ.ಡಿ.ಎಸ್.ಪೂರ್ಣನಂದ ಅವರು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ನಾಗಣ್ಣ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕÀ ಡಾ. ಬಿ.ಟಿ.ಮುದ್ದೇಶ್ , ಸಹಾಯಕ ಪ್ರಧ್ಯಾಪಕರಾದ ಡಾ.ಜ್ಯೋತಿ, ಎಂ.ಪಿ. ಶ್ವೇತಾ, ಎನ್.ಜಿ.ನವೀನ್, ಪತ್ರಕರ್ತರಾದ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸಂತೋಷ್ ಎಚ್.ಎಂ ಇನ್ನಿತರರು ಹಾಜರಿದ್ದರು.