ತುಮಕೂರು: ಕ್ರೀಡೆಯಲ್ಲಿ ಸೋಲುಗೆಲುವು ಸಾಮಾನ್ಯ ಹಾಗಾಗಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಸಾಹೇ ವಿ.ವಿಯ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ ಅಂತರ್ ಕಾಲೇಜು ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಪಾಠದ ಜೊತೆ ಆಟವೂ ಸಹ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಸಾಕಷ್ಟು ಸಾಧನೆಯನ್ನು ಮಾಡಲು ಅವಕಾಶವಿದೆ. ಕ್ರೀಡೆಯು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು, ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗಾಗಿ ವಿದ್ಯಾರ್ಥಿಗಳು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಮಾತನಾಡಿ ಕಬ್ಬಡಿ ಗ್ರಾಮೀಣ ಕ್ರೀಡೆಯಾಗಿದ್ದರೂ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ಒಂದು ಕಬ್ಬಡಿ ಕ್ರೀಡೆಯನ್ನು ನಮ್ಮ ಕಾಲೇಜಿನಲ್ಲಿ ಆಯೋಜನೆ ಮಾಡಿರುವುದು ನಮ್ಮ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ದೊರೆತಂತಾಗಿದೆ. ಎಲ್ಲಾ ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್ಎಸ್ಐಬಿಎಂ ವಿಭಾಗದ ಪ್ರಾಂಶುಪಾಲರಾದ ಡಾ. ಮಮತ ಮಾತನಾಡಿ ನಮ್ಮ ವಿಭಾಗದಿಂದ ಸಂಸ್ಥೆಯ ಸಹಕಾರದಿಂದ ಪ್ರತೀ ವರ್ಷವೂ ಸಹ ಯಶಸ್ವಿಯಾಗಿ ಆಯೋಜನೆಯನ್ನು ಮಾಡುತ್ತಿದ್ದೇವೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಪಾಲ್ಗೊಂಡರೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಂತರ್ ಕಾಲೇಜು ಕಬ್ಬಡಿ ಪಂದ್ಯವಾಳಿಯಲ್ಲಿ ತುಮಕೂರು ಜಿಲ್ಲೆಯ 10 ಕಾಲೇಜುಗಳು ಭಾಗವಹಿಸಿದ್ದವು. ಇನ್ನು ಈ ಪಂದ್ಯದಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಎರಡನೇ ಸ್ಥಾನವನ್ನು ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರ ಅಲಂಕರಿಸಿದೆ, ಇನ್ನು ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಎಸ್ಎಸ್ಐಟಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ರುದ್ರೇಶ್, ಎಸ್ಎಸ್ಐಬಿಎಂ ನ ಎಲ್ಲಾ ವಿಭಾಗದ ಮುಖ್ಯಸ್ಥರ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.