ತುಮಕೂರು: ವಿದ್ಯಾರ್ಥಿಗಳು ಜ್ಞಾನಮುಖಿಗಳಾದಾಗ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಜೀವನವನ್ನು ಹಬ್ಬದಂತೆ ಸಂಭ್ರಮಿಸುವ ಉತ್ಸಾಹವಿರಬೇಕು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಆಯೋಜಿಸಿರುವ ‘ಸೃಜನ-2024’ ಕಾಲೇಜು ವಾರ್ಷಿಕೋತ್ಸವದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.
ಶಿಕ್ಷಣ, ಸಂಸ್ಕೃತಿ, ಕ್ರೀಡೆ ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಯ ಧ್ಯೇಯವಾಗಬೇಕು. ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಬೆರೆತು, ವಿದ್ಯಾರ್ಥಿ ಜೀವನದ ಸಂತಸವನ್ನು ಮರುರೂಪಿಸಿಕೊಂಡಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವ, ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡುವ ಮನೋಧರ್ಮ ವೃದ್ಧಿಯಾಗಲಿದೆ ಎಂದರು.
ಹಾಸ್ಯ ಕಾರ್ಯಕ್ರಮ ನೀಡಿ ಮಾತನಾಡಿದ ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ಯ, ಭಾರತೀಯರು ಬದುಕಿನ ನೈಜ ಸುಖಗಳನ್ನು ಮರೆಯುತ್ತಿದ್ದಾರೆ. ಸೃಜನಶೀಲ ಬದುಕು ನಮ್ಮದಾಗಬೇಕು. ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿರುವ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ ಇಲ್ಲದಂತಾಗಿದೆ. ಜ್ಞಾನವೃದ್ಧಿಯಾಗಬೇಕಾದರೆ ಸಾಹಿತ್ಯ ಓದಬೇಕು ಎಂದು ತಿಳಿಸಿದರು.
ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ, ಎನ್.ಸಿ.ಸಿ. ಘಟಕದ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ಘಟಕಗಳ, ಎನ್.ಎಸ್.ಎಸ್. ಘಟಕದ, ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ 2023-24ನೇ ಶೈಕ್ಷಣಿಕ ಸಾಲಿನ ವರದಿಗಳನ್ನು ಮಂಡಿಸಲಾಯಿತು.
‘ಅಭಿವ್ಯಕ್ತಿ’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಶೈಕ್ಷಣಿಕ ಸಾಧಕರಿಗೆ, ಸಾಂಸ್ಕೃತಿಕ ಸ್ಪರ್ಧೆಗಳ, ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಾ ತಂಡಗಳ ವರ್ಣರಂಜಿತ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮನ ಕುಣಿತ, ನಾಸಿಕ ಕುಣಿತ ತಂಡಗಳು, ವಿಜ್ಞಾನ ಕಾಲೇಜಿನ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ತಂಡಗಳು ಭಾಗವಹಿಸಿದ್ದವು.
ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್, ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕ ಡಾ. ರಾಮಕೃಷ್ಣ ಜಿ., ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ ಉಪಸ್ಥಿತರಿದ್ದರು.
ಡಾ. ನಾಗಭೂಷಣ ಬಗ್ಗನಡು ಸ್ವಾಗತಿಸಿದರು. ಡಾ. ಮಂಗಳಾ ಗೌರಿ ಎಂ. ನಿರೂಪಿಸಿದರು. ಡಾ. ರಾಜಲಕ್ಷಿö್ಮ ಎ. ವಂದಿಸಿದರು.