ನಾಮಪತ್ರ ಸಲ್ಲಿಕೆ-ಜಿಲ್ಲಾಧಿಕಾರಿಗಳ ಕಛೇರಿಗೆ ಮಿಲಿಟರಿ ಭದ್ರತೆ, ಮಾಧ್ಯಮಕ್ಕೂ ನಿಷೇಧ

ತುಮಕೂರು : ಲೋಕಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮಿಲಿಟರಿ ಭದ್ತೆಯ ಸರ್ಪಗಾವಲನ್ನು ಹಾಕಲಾಗಿತ್ತು. ಮಾಧ್ಯಮ ಪ್ರತಿನಿಧಿಗಳನ್ನು ನಿಷೇಧಿತ ಪ್ರದೇಶದಿಂದ ಹೊರಗೆ ನಿಲ್ಲಿಸಿ ಅಭ್ಯರ್ಥಿಗಳ ಬೈಟ್ ಕೊಡಿಸಲಾಯಿತು.

ಏಪ್ರಿಲ್ 3ರಂದು ಬಿಜೆಪಿಯ ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ನಾಮಪತ್ರ ಸಲ್ಲಿಸುವ ವೇಳೆ ಇಡೀ ಜಿಲ್ಲಾಧಿಕಾರಿಗಳ ಕಛೇರಿಗೆ ಪೊಲೀಸರ ಸರ್ಪಗಾಲನ್ನು ಹಾಕಿದ್ದು, ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸುವುದಕ್ಕೆ ಇಡೀ ಜಿಲ್ಲಾಧಿಕಾರಿಗಳ ಕಛೇರಿಯ ಆವರಣಕ್ಕೆ ಬ್ಯಾರಿಕೇಡ್‍ಗಳನ್ನು ಹಾಕಿ ಮಿಲಿಟರಿ ಭದ್ರತೆಯನ್ನು ಒದಗಿಸಲಾಗಿತ್ತು.

ನಿನ್ನೆ ಬಿಜೆಪಿ ಅಭ್ಯರ್ಥಿ 3 ಸೆಟ್ ನಾಮ ಪತ್ರ ಸಲ್ಲಿಸುವುದರಿಂದ ನನ್ನನ್ನೂ ಸೇರಿದಂತೆ 15 ಜನರನ್ನು ಒಳ ಬಿಡುವಂತೆ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದವು ನಡೆಸಿದ್ದರು.

ನಾಮಪತ್ರ ಸಲ್ಲಿಕೆಯು ಮಾರ್ಚ್ 28ರಿಂದ ಪ್ರಾರಂಭವಾಗಿದ್ದರೂ ಏಪ್ರಿಲ್ 2ರವರೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಇರದ ಭದ್ರತೆ, ಏಪ್ರಿಲ್ 3 ಮತ್ತು 4ರಂದು ಪೊಲೀಸರು ಮತ್ತು ಮಿಲಿಟರಿಯ ಸರ್ಪಗಾವಲು ಹಾಕಿದಿದ್ದು ಜನತೆಗೆ ಭೀತಿಯನ್ನುಂಟು ಮಾಡಿತ್ತು.

ಕರ್ನಾಟಕ ಶಾಂತಿಯುತ ರಾಜ್ಯವಾಗಿದ್ದು, ನಾಮ ಪತ್ರ ಸಲ್ಲಿಕೆಗೂ ಮಿಲಿಟರಿಯನ್ನು ಕರೆಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದ್ದು, ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿಗಳ ಕಛೇರಿಗೆ ಎರಡೂ ದಿನ ಭದ್ರತೆಯನ್ನು ಹಾಕಿದ್ದರಿಂದ ಕೋರ್ಟ್ ಕೆಲಸಕ್ಕೆ, ಜಿಲ್ಲಾಧಿಕಾರಿಗಳ ಕಛೇರಿಗೆ ಬರುವ ಜನ ಸಾಮಾನ್ಯರಿಗೆ ತೊಂದರೆಯಾಯಿತು.

ಜನರು ಮತ್ತು ಪೊಲೀಸರ ಮಧ್ಯೆ ನೂಕಾಟ

ಒಂದು ಹಂತದಲ್ಲಿ ಅಂಚೆ ಕಚೇರಿಗೆ ಹೊಂದಿಕೊಂಡಂತೆ ಹಾಕಿದ್ದ ಬ್ಯಾರಿಕೇಡ್‍ಗಳ ಬಳಿಗೆ ನುಗ್ಗಲು ಪ್ರಯತ್ನಿಸಿದಾಗ ಸ್ವತಃ ಡಿವೈಎಸ್ಪಿ ಚಂದ್ರಶೇಖರ್ ಅವರೇ ಜನರನ್ನು ದೂರ ತಳ್ಳಿದಾಗ, ಜನರು ಮತ್ತು ಪೊಲೀಸರ ಮಧ್ಯೆ ನೂಕಾಟ ನಡೆಯಿತು.

ನಾಮಪತ್ರ ಸಲ್ಲಿಸುವ ಈ ಎರಡು ದಿನಗಳಲ್ಲೂ ಮಾಧ್ಯಮದವರನ್ನು ನಿಷೇಧಿತ ಪ್ರದೇಶದಿಂದ ಹೊರಗೆಯೇ ನಿಲ್ಲಿಸಿದ್ದರು.

Leave a Reply

Your email address will not be published. Required fields are marked *