ತುಮಕೂರು- ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ. ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷರೂ ಆದ ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕ ಡಾ. ಕೆ. ಶಿವನ್ ಹೇಳಿದರು.
ನಗರದ ಎಸ್‍ಐಟಿ ಕಾಲೇಜಿನ ಆವರಣದಲ್ಲಿ ನಡೆದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಬದಲು ಸಂಶೋಧನಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಇಸ್ರೋ ಸಂಸ್ಥೆಯಿಂದ ನಡೆದ ಚಂದ್ರಯಾನ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾದವು. ಜತೆಗೆ ಸೋಲುಗಳು ಉಂಟಾದವು. ಆದರೂ ವಿಜ್ಞಾನಿಗಳು ಎದೆಗುಂದದೆ, ಪ್ರಯತ್ನವನ್ನು ಮುಂದುವರೆಸಿದರ ಫಲಯಾಗಿ ಚಂದ್ರಯಾನ-2 ಯಶಸ್ವಿಯಾಯಿತು. ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ಪಾಠವೆಂದು ಪರಿಗಣಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಬದುಕಿನಲ್ಲಿ ಆತ್ಮಸ್ಥೈರ್ಯ, ಕಠಿಣ ಪರಿಶ್ರಮ ಹಾಗೂ ಶೋಧನೆ ಮಾಡುವ ಮನೋಭಾವ ಬಹಳ ಮುಖ್ಯ. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ, ಕೊಡುಗೆ ಬಹುಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಿವಿಧ ವಿಭಾಗಗಳಲ್ಲಿ ಅನುಭವ ಪಡೆಯಬೇಕು. ಆಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇಂದು ಪದವಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಕನಸು ನನಸಾಗಲಿ ಎಂದು ಆಶಿಸಿದ ಅವರು, ನಿಮ್ಮನ್ನು ಉತ್ತಮ ರೀತಿಯಲ್ಲಿ ರೂಪಿಸಿದ ಎಸ್‍ಐಟಿ ಕಾಲೇಜಿನ ಶಿಕ್ಷಕರು, ಪೆÇೀಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನೀವು ಕಲಿತ ಶಿಕ್ಷಣ ಸಂಸ್ಥೆ ಎಸ್‍ಐಟಿಗೆ ಕೃತಜ್ಞತೆ ಸಲ್ಲಿಸಬೇಕು. ಪ್ರಪಂಚದ ಯಾವ ಭಾಗದಲ್ಲಿದ್ದರೂ ನೀವು ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಠಿಣ ಪರಿಶ್ರಮ, ಆಸಕ್ತಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಜತೆಗೆ ಮುಂದಿನ ಜೀವನಕ್ಕೆ ಉತ್ಸಾಹ ನೀಡುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ. ಹಾಗಾಗಿ ಗ್ರಾಜುಯೇಷನ್ ಡೇ ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಗುರಿ ಸಾಧನೆಗೆ ಇದು ಮೆಟ್ಟಲಾಗಲಿದೆ ಎಂದರು.
ಶ್ರೀಮಠದ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅನೇಕ ಬದಲಾವಣೆಯಾಗಿದ್ದು, ಯಾವುದೇ ಕಷ್ಟಕರ ಸನ್ನಿವೇಶವನ್ನು ಎದುರಿಸಲು ಶಕ್ತಿ ಬರುತ್ತದೆ ಎಂದ ಅವರು, ಎಸ್‍ಐಟಿ ಕಾಲೇಜು ಕೇವಲ ವಿದ್ಯಾಭ್ಯಾಸ, ಭಾಷಣ, ತರಗತಿ ಪಾಠಕ್ಕೆ ಸೀಮಿತವಾಗದೆ ನಿಮ್ಮನ್ನು ಉತ್ತಮ ಪ್ರಜೆಯಾಗಿ ರೂಪಿಸುತ್ತಿದೆ ಎಂದರು.
ದೇಶ ಮತ್ತು ಪ್ರಪಂಚಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಪದವಿ ಪಡೆದು ಹೊರ ಹೋಗುತ್ತಿರುವ ನೀವುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಸದೃಢ ದೇಶ ನಿರ್ಮಿಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಉತ್ತಮ ಪೆÇ್ರೀತ್ಸಾಹ ನೀಡಿದರೆ ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಉನ್ನತ ಸ್ಥಾನ ಪಡೆಯಬಹುದು ಎಂದ ಅವರು, ಗುಣಮಟ್ಟದ ಬೋಧನೆ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಗಮನ ಹರಿಸಬೇಕು ಎಂದು ಶ್ರೀಗಳು ಸಲಹೆ ಮಾಡಿದರು.
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೆÇೀಷಕರ ಪಾತ್ರವೂ ಪ್ರಮುಖವಾಗಿದೆ. ಉತ್ತಮ ಸಂಸ್ಕಾರ ಪಡೆಯುವ ಮೂಲಕ ಉನ್ನತ ಶಿಕ್ಷಣ ಪಡೆದು ಅವರಿಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಸಮಾಜದಲ್ಲಿ ಎಷ್ಟು ದೊಡ್ಡವರಾಗಿ ಬೆಳೆದು ಉನ್ನತ ಸ್ಥಾನಮಾನ ಗಳಿಸಿದರೂ ನಮ್ಮನ್ನು ಹೆತ್ತ ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಕೊಡಬೇಕು. ಇದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಪ್ರದಾನ
ಸಮಾರಂಭದಲ್ಲಿ ಬಿ.ಇ. ಬಯೋಟೆಕ್ನಾಲಜಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ಕು. ಸ್ಪಂದನಾ ವಿ. ಸಿಂಗ್ ರವರಿಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಹಾಗೂ ಇನ್ನು ಮೂರು ಚಿನ್ನದ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಎಂಟೆಕ್ 50 ಅಭ್ಯರ್ಥಿಗಳು, ಬಿ.ಇ. ವಿಭಾಗಗಳ 847 ಅಭ್ಯರ್ಥಿಗಳು, ಬಿಆರ್ಕ್ 35 ಅಭ್ಯರ್ಥಿಗಳು, ಎಂ.ಸಿ.ಎ. 118 ಅಭ್ಯರ್ಥಿಗಳು, ಹಾಗೂ ಎಂ.ಬಿ.ಎ. 196 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಎಸ್‍ಐಟಿ ಸಿಇಓ ಡಾ. ಶಿವಕುಮಾರಯ್ಯ, ಪ್ರಾಂಶುಪಾಲರಾದ ಪೆÇ್ರ. ಎಸ್.ವಿ. ದಿನೇಶ್, ಮಾಲತಿ ಶಿವನ್, ಟಿ.ಎಂ. ಸ್ವಾಮಿ ಸೇರಿದಂತೆ ಕಾಲೇಜಿನ ಬೋಧಕ ವರ್ಗ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಪಾಲ್ಗೊಂಡಿದ್ದರು.