ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ-ಡಾ.ಜಿ.ಪರಮೇಶ್ವರ್

ಕೊರಟಗೆರೆ : ರೈತರಿಗೆ ಗುಣಮಟ್ಟದ ವಿದ್ಯುತ್ಛಕ್ತಿ ಸಿಗುತ್ತಿರಲಿಲ್ಲ. ಈ ಭಾಗದ ರೈತರು ವಿದ್ಯುತ್ ಸಮಸ್ಯೆಯ ಕುರಿತು ಅನೇಕ ಸಲ ಮನವರಿಕೆ ಮಾಡಿದ್ದರು. ತುಂಬಾಡಿ ಮತ್ತು ಸಂಕರೆನಹಳ್ಳಿಗಳಲ್ಲಿ ಎರಡು ಕಡೆ ವಿದ್ಯುತ್ ಉಪಸ್ಥಾವರಗಳನ್ನು ನಿರ್ಮಿಸಿ, ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಮತ್ತು ಸಂಕೇನಹಳ್ಳಿ ಗ್ರಾಮಗಳಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಾಣವಾಗಿರುವ 66/11 ಕೆವಿ ವಿದ್ಯುತ್ ಉಪಕೇಂದ್ರಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಪ್ರಪಂಚದ ಭೂಪಟದಲ್ಲಿ ಎರಡನೇ ಅತಿದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ ಸ್ಥಾಪನೆಯಾಗಿದೆ. ಮೂರು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.

7 ರಿಂದ 8 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಸಮಸ್ಯೆಯಾಗುತ್ತಿತ್ತು. ಹೊರ ರಾಜ್ಯದಿಂದ ಖರೀದಿಸಲಾಗುತ್ತಿತ್ತು. ಪ್ರಸ್ತುತ ಕರ್ನಾಟಕದಲ್ಲಿ 32 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಪ್ರತಿ ಬಾರಿಯು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದೆ ಎಂದರು.

ಕೇಂದ್ರ ಸರ್ಕಾರ ಕುಸುಮ್ ಯೋಜನೆಯನ್ನು ಪ್ರಾರಂಭ ಮಾಡಿತು. ಹಿಂದಿನ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಕೆ.ಜೆ.ಜಾರ್ಜ್ ಅವರು ಸಚಿವರಾದ ಬಳಿಕ ಕುಸುಮ್ ಯೋಜನೆಯನ್ನು ತಂದಿದ್ದಾರೆ. ಕುಸುಮ್ ಯೋಜನೆಗೆ ಖಾಸಗಿಯವರು ಜಮೀನು ಕೊಡಬಹುದು. ವಾರ್ಷಿಕ 25 ಸಾವಿರ ರೂ. ಲೀಕ್ ನೀಡುತ್ತಾರೆ. ಇಡೀ ದೇಶದಲ್ಲಿ pm kusum ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಪ್ರಾರಂಭಿಸಬೇಕು ಎಂಬುದು ಜಾರ್ಜ್ ಅವರ ಕನಸಿನ ಕೂಸು ಎಂದರು.

ಚುನಾವಣೆಗು ಮೊದಲು ಗ್ಯಾರಂಟಿ ಕಾರ್ಡ್‍ಗಳನ್ನು ನೀಡಲಾಗಿತ್ತು. ನಮ್ಮ ಸರ್ಕಾರವು ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೆ ಉಚಿತ ವಿದ್ಯುತ್, ಸ್ತ್ರೀ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಲಕ್ಷ್ಮೀ ಯೋಜನೆಯಡಿ 2000 ಸಾವಿರ ರೂ. ನೀಡಲಾಗುತ್ತಿದೆ ಎಂದರು.

ಮಹಿಳೆಯರಿಗಾಗಿ ಅನುಷ್ಟಾನಗೊಳಿಸಿರುವ ಯೋಜನೆಗಳಿಗೆ ವಿಪಕ್ಷದವರಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಹ ಟೀಕೆ-ಟಿಪ್ಪಣಿಗಳಿಗೆ ನಾವು ಹೆದರುವುದಿಲ್ಲ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಹುಯಿಲೆಬ್ಬಿಸಿದ್ದರು. ಬಡತನ ರೇಖೆಗಿಂತ ಕೆಳಗಿರುವ ಜನ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಗಳನ್ನು ನೀಡಲಾಗಿದೆ. ಯಾವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು.

ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗಾಗಿ ಸರ್ಕಾರವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿಲ್ಲ ಎಂದರು.

ಸರ್ಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಣವಿಲ್ಲದೇ ಇದ್ದರೆ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಇಂಧನ ಅಚಿವ ಕೆ.ಜೆ.ಜಾರ್ಜ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೇ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *