5,8, 9ನೇ ತರಗತಿಗಳ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ತುಮಕೂರು : 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು
ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ.

5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾರ್ಚ್ 22ರಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿತ್ತು.

ಸದ್ಯ ಯಾವುದೇ ಶಾಲೆಗಳು ಸಹ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದ ವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾರ್ಚ್‍ನಲ್ಲಿ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿದ್ದ ಹೈಕೋರ್ಟ್, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚನೆ ನೀಡಿತ್ತು. ಅದರಂತೆ ಬಳಿಕ ಶಾಲೆಗಳು ಪರೀಕ್ಷೆಗಳನ್ನು ನಡೆಸಿದ್ದವು. ಇದೀಗ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5, 8, 9ನೇ ಹಾಗೂ 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9ನೇ ತರಗತಿ ಮಕ್ಕಳ ಬೋರ್ಡ್ ಪರೀಕ್ಷೆಯ ಮೌಲ್ಯಮಾಪನ ಕಾರ್ಯದಲ್ಲಿ ಅನೇಕ ಲೋಪದೋಷಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ರುಪ್ಸಾ ಇದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿತ್ತು. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ತನ್ನ ದೂರಿನಲ್ಲಿ ಮೌಲ್ಯಾಂಕನದ ಫಲಿತಾಂಶವನ್ನು ಆಯಾ ಶಾಲೆಗಳಿಗೆ ಕಳುಹಿಸಿದ್ದು ಇದರಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ. ವಿವಿಧ ಶಾಲಾ ಆಡಳಿತ ಮಂಡಳಿಗಳು ವಾಟ್ಸ್‍ಅಪ್, ಇಮೇಲ್ ಮೂಲಕ ಮಾಹಿತಿ ನೀಡಿವೆ. ವಿದ್ಯಾರ್ಥಿಗಳು ಸರಿಯಾದ ಉತ್ತರ ಬರೆದಿದ್ದರೂ ಸೂಕ್ತ ಅಂಕ ನೀಡಿಲ್ಲ ಎಂಬುದು ತಿಳಿದುಬಂದಿದೆ. ಉತ್ತಮವಾಗಿ ಓದುವ ಮಕ್ಕಳಿಗೆ ಕಡಿಮೆ ಅಂಕ ನೀಡಿರುವುದು. ಫಲಿತಾಂಶದ ಅಂಕಿ, ಅಂಶಗಳ ಲೆಕ್ಕವನ್ನೇ ತಪ್ಪಾಗಿ ಮಾಡಿರುವುದು. ಕೆಲ ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರದ ಪರ ಎಎಜಿ ವಿಕ್ರಮ್ ಹುಯಿಲಗೋಳ್ ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದರು. ಬಳಿಕ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

Leave a Reply

Your email address will not be published. Required fields are marked *