ದೇವೇಗೌಡರನ್ನು ವಿರೋಧಿಸಿದ್ದ ಸುರೇಶ್ ಗೌಡರಿಗೆ ಸೋಮಣ್ಣ ಪರ ಮತ ಕೇಳುವ ನೈತಿಕತೆಯಿಲ್ಲ-ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ : ದೇವೇಗೌಡರನ್ನು ವಿರೋಧಿಸಿದ್ದ ಶಾಸಕ ಬಿ.ಸುರೇಶಗೌಡರಿಗೆ ಸೋಮಣ್ಣನ ಪರ ಮತ ಕೇಳುವ ನೈತಿಕತೆಯಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ವಾಗ್ದಾಳಿ ನಡೆಸಿದರು.

ಅವರು ಹೆಗ್ಗೆರೆಯಲ್ಲಿ ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರವ ಪರ ಮತಯಾಚನೆ ಮಾಡಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಹೊರಗಿನವರು, ಅವರಿಗೆ ಮತ ನೀಡಿ ಗೆಲ್ಲಿಸಿದರೆ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಬೆಂಗಳೂರಿಗೆ ಹೋಗಬೇಕು ಅವರನ್ನು ಗೆಲ್ಲಿಸಬೇಡಿ ಎಂದು ದೊಡ್ಡದಾಗಿ ಭಾಷಣ ಮಾಡಿದ್ದ ಶಾಸಕ ಸುರೇಶ್ ಗೌಡ ಈಗ ಸೋಮಣ್ಣನವರ ಪರ ಮತ ಯಾಚನೆ ಮಾಡುತ್ತಿದ್ದಾರೆ. ಸೋಮಣ್ಣ ಎಲ್ಲಿಯವರು? ಅವರಿಗೂ ತುಮಕೂರಿಗೂ ಏನು ಸಂಬಂಧ? ಅಂದು ಹೊರಗಿನವರು ಎಂದವರು ಇಂದು ಹೊರಗಿನವರಿಗೆ ಮತ ಕೇಳುತ್ತಿದ್ದು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಮುದ್ದಹನುಮೇಗೌಡರು ಒಬ್ಬ ಸಜ್ಜನ, ಸರಳ ರಾಜಕಾರಣಿಯಾಗಿದ್ದು, ಕರ್ನಾಟಕದ ತುಮಕೂರಿನ ಕೀರ್ತಿ ಪತಾಕೆಯನ್ನು ಲೋಕಸಭೆಯಲ್ಲಿ ಹಾರಿಸಿದ್ದರು. ಜಿಲ್ಲೆಗೆ ಕೇಂದ್ರದ ಹಲವಾರು ಯೋಜನೆಗಳನ್ನು ತಂದಿರುವುದು ನಮ್ಮ ಮುಂದಿದೆ. ಇಂದಿನ ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡಿಲ್ಲ ಅದ್ದರಿಂದ ಬಿಜೆಪಿಯಿಂದ ಏನನ್ನೂ ನಿರೀಕ್ಷಸಲು ಸಾಧ್ಯವಿಲ್ಲ. ರಾಜ್ಯದ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಪಡೆಯಬೇಕೆಂದರೆ ಮುದ್ದಹನುಮೇಗೌಡರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದರು.

ಈ ವೇಳೆ ಗೃಹಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಹೆಚ್.ವಿ.ವೆಂಕಟೇಶ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *