ಗೃಹಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಮಠಾಧೀಶರುಗಳಿಂದ ಹಕ್ಕೊತ್ತಾಯ

ತುಮಕೂರು:ಸಜ್ಜರು, ವಿದ್ಯಾವಂತರು ಆಗಿರುವ ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರನ್ನು ತುಮಕೂರು ಜಿಲ್ಲೆಯ ವಿವಿಧ ಮಠಾಧೀಶರು ಹಕ್ಕೊತ್ತಾಯ ಮಂಡಿಸುವುದಾಗಿ ಹೇಳಿದರು.

ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿವಿಧ ಮಠಾಧೀಪತಿಗಳು, ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿಯೂ ಪಕ್ಷವನ್ನು ಮುನ್ನೆಡೆಸಿ, ಒಮ್ಮೆ ಪೂರ್ಣ ಬಹುಮತದೊಂದಿಗೆ, ಮತ್ತೊಮ್ಮೆ ಜೆಡಿಎಸ್ ಪಕ್ಷದ ಸಹಕಾರದೊಂದಿಗೆ ಅಧಿಕಾರ ಹಿಡಿಯಲು ಕಾರಣ ಕರ್ತರಾಗಿದ್ದಾರೆ. ಅಲ್ಲದೆ ಮೂರು ಬಾರಿ ಗೃಹ ಸಚಿವರಾಗಿ,ವಿವಿಧ ಮಂತ್ರಿ ಪದವಿಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಅವರನ್ನು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎಂಬುದು ಜಿಲ್ಲೆಯ ಎಲ್ಲಾ ಮಠಾಧೀಶರು,ಮುಖಂಡರು, ಕಾರ್ಯಕರ್ತರ ಒತ್ತಾಯವಾಗಿದೆ ಎಂದರು.

ಗೃಹಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ವಿದೇಶದಲ್ಲಿ ಕಲಿತರು, ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಒಂದೇ ಸೂರಿನಡಿ ಎಲ್.ಕೆ.ಜಿ.ಯಿಂದ ಪದವಿ, ಮೆಡಿಕಲ್, ಇಂಜಿನಿಯರಿಂಗ್ ವರೆಗೆ ಶಿಕ್ಷಣ ನೀಡುತ್ತಾ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ.ಅಲ್ಲದೆ ಜಿಲ್ಲೆಯ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಯೋಜನೆಗಳ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ.ದೂರದೃಷ್ಟಿಯುಳ್ಳ ಇಂತಹ ವ್ಯಕ್ತಿಗಳು ಮುಖ್ಯಮಂತ್ರಿಗಳಾದರೆ ರಾಜ್ಯ ಮತ್ತಷ್ಟು ಅಭಿವೃದ್ದಿ ಹೊಂದಲಿದೆ.ಹಾಗಾಗಿ ಪಕ್ಷದ ಹೈಕಮಾಂಡ್ ನಮ್ಮ ಒತ್ತಾಯಪೂರ್ವ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಠಾಧೀಶರು ತಿಳಿಸಿದರು.

ತುಮಕೂರು ಜಿಲ್ಲೆ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಿಗೆ ರಹದಾರಿ ಕಲ್ಪಿಸಿದೆ.ಪ್ರಮುಖ ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಮೆಟ್ರೋ ಸೇರಿದಂತೆ ವಿವಿಧ ಸಂಪರ್ಕ ಯೋಜನೆಗಳು ವಿಸ್ತಾರಗೊಳ್ಳುವ ಹಂತದಲ್ಲಿವೆ. ಈ ವೇಳೆ ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಜಿಲ್ಲೆ ಮತ್ತಷ್ಟು ಅಭಿವೃದ್ದಿಯಾಗಲಿದೆ. ಮೈಸೂರು, ಶಿವಮೊಗ್ಗ ಹಾಸನ ಇವುಗಳು ಮುಖ್ಯಮಂತ್ರಿಗಳ ಕ್ಷೇತ್ರ ಎಂಬ ಕಾರಣಕ್ಕೆ ಎಲ್ಲಾ ರೀತಿಯಿಂದ ಅಭಿವೃದ್ದಿಯಾಗಿವೆ. ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಅಭಿವೃದ್ದಿಯ ವೇಗ ಮತ್ತಷ್ಟು ದ್ವಿಗುಣಗೊಳ್ಳಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಮ್ಮ ಕೋರಿಕೆಯನ್ನು ಮನ್ನಿಸಿ, ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಈ ಸಂಬಂಧ ಅಗತ್ಯ ಬಿದ್ದರೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು, ಎಐಸಿಸಿ ಪ್ರಮುಖರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಸಹ ಹಿಂಜರಿಯುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮೀಜಿ,ಕುಂಚಟಿಗ ಮಹಾ ಸಂಸ್ಥಾನ ಮಠದ ಡಾ.ಶ್ರೀಹನು ಮಂತನಾಥಸ್ವಾಮಿಜಿ,ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ,ತಿಪಟೂರಿನ ಷಡಕ್ಷರ ಮಠದ ಶ್ರೀಷಡಕ್ಷರ ಮುನಿ ಸ್ವಾಮೀಜಿ,ಅರೆಶಂಕರಮಠದ ಶ್ರೀಸಿದ್ದರಾಮಚೈತನ್ಯಸ್ವಾಮೀಜಿ,ವಿಶ್ವಕರ್ಮ ಮಠದ ಶ್ರೀನೀಲಕಂಠಸ್ವಾಮೀಜಿ, ರುದ್ರಮುನಿ ಸ್ವಾಮೀಜಿ,ಮೃತ್ಯುಂಜಯಸ್ವಾಮೀಜಿ,ಬಿಂದುಶೇಖರ ಓಡೆಯರ್,ಶ್ರೀವಿದ್ಯಾವಿಭವಸ್ವಾಮೀಜಿ ಸೇರಿದಂತೆ 25ಕ್ಕೂ ಹೆಚ್ಚು ಸ್ವಾಮಿಜಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

Leave a Reply

Your email address will not be published. Required fields are marked *