ತುಮಕೂರು: ತತ್ತ್ವಪದಗಳೆಂದರೆ ತಿಳುವಳಿಕೆಯ ಹಾಡುಗಳು. ಜನರ ಸಾಹಿತ್ಯವಾಗಿರುವ ತತ್ತ್ವಪದಗಳು, ಕೀರ್ತನೆಗಳು ಹೃದಯದಿಂದ ಹುಟ್ಟಿವೆ. ಮಾತಿನಲ್ಲಿ ಕಾವ್ಯ ಕಟ್ಟಿ, ಹಾಡಿ, ಜನರಿಗೆ ತಿಳುವಳಿಕೆ ಹೇಳಿದ ಕೀರ್ತಿ ಶಿಶುನಾಳ ಶರೀಫರಿಗೆ ಸಲ್ಲುತ್ತದೆ ಎಂದು ಹಿರಿಯ ಕನ್ನಡ ವಿದ್ವಾಂಸ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ‘ಕನ್ನಡದ ಆಧುನಿಕತೆ ಮತ್ತು ಸಂತ ಶಿಶುನಾಳ ಶರೀಫರು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರ, ಧರ್ಮದ ಹೆಸರಿನಲ್ಲಿ ಮೌಢ್ಯ ಬಿತ್ತುವ ಪ್ರಕ್ರಿಯೆ ಹಿಂದೆಯಿಂದ ನಡೆದಿದೆ. ಆದರೆ, ಪ್ರತಿ ಶತಮಾನದಲ್ಲೂ ಪಂಪ, ಬಸವಣ್ಣನಂತಹ ಮಾನವೀಯ ಮೌಲ್ಯ ಉಳ್ಳವರು ಜನ್ಮತಾಳಿ ಪ್ರತಿ ಹಂತದಲ್ಲೂ ಮನುಷ್ಯತ್ವ ಬೋಧಿಸಿದರು ಎಂದು ತಿಳಿಸಿದರು.
ಮನುಷ್ಯ ಎಂಬುವ ಮಾತು ಹೃದಯದಿಂದ ಹುಟ್ಟುತ್ತದೆ. ಬಟ್ಟೆಯಿಂದ ಶ್ರೀಮಂತಿಕೆ ಬರುವುದಿಲ್ಲ, ಮನುಷ್ಯತ್ವದಿಂದ ಶ್ರೀಮಂತಿಕೆ ಬರಬೇಕು. ಮನುಷ್ಯರು ಭೇದ ಭಾವವಿಲ್ಲದೆ ಹೆಣ್ಣು-ಗಂಡು, ಮೇಲು-ಕೀಳು, ಬಡವ-ಶ್ರೀಮಂತ, ಜಾತಿ ಮುಂತಾದ ತಾರತಮ್ಯವಿಲ್ಲದೆ ಬದುಕಲು ಪ್ರಯತ್ನಿಸಬೇಕು. ಇದು ಶಿಶುನಾಳ ಶರೀಫರ ಆಶಯವಾಗಿತ್ತು ಎಂದರು.
ತಾತ್ವಿಕ ಚಿಂತನೆಗಳಿಂದ, ಪ್ರಶ್ನೆಗಳಿಂದ ಶರೀಫರು ತಾವೂ ಬೆಳೆದು, ಸಮಾಜವನ್ನು ಸಮಾಜದಿಂದಲೇ ತಿದ್ದಲು ಪದಗಳನ್ನು ಕಟ್ಟಿದರು. ಆಧುನಿಕ ಕನ್ನಡದ ಆರಂಭಿಕ ಕವಿಯಾಗಿ ಸಮಾಜಕ್ಕೆ ಶಿಕ್ಷಕನಾಗಿ, ಮೌಖಿಕ ಸಾಹಿತ್ಯದ ಸಾಂತ್ವನ ಜೀವಿಯಾಗಿ ಕಾಣುತ್ತಾರೆ. ಮನುಷ್ಯ ಬದುಕಬೇಕಾಗಿರುವುದು ಜ್ಞಾನದಿಂದ, ಅರಿವಿನಿಂದ ಎಂದು ಶರೀಫರು ಜಗತ್ತಿಗೆ ಸಾರಿದರು ಎಂದರು.
ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಶರೀಫರು ಬರೆದ ಕವಿತೆಗಳು ಸಾಮಾಜಿಕ ಪಿಡುಗುಗಳನ್ನು ತೊಲಗಿಸುವ ಮತ್ತು ಜೀವನಕ್ಕೆ ಹತ್ತಿರವಾಗುವಂತಹ ಕವಿತೆಗಳು. ಧರ್ಮ, ಜಾತಿಗಳು ಒಂದಾಗಿ ಸಾಮರಸ್ಯ ಮನುಷ್ಯನಲ್ಲಿ ಹೆಚ್ಚಾಗಬೇಕು ಎಂದರು.
ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪೆÇ್ರ. ಎನ್. ಎಸ್. ಗುಂಡೂರ ಮಾತನಾಡಿ, ಶಿಶುನಾಳ ಶರೀಫರು ಕನ್ನಡ ಸಾಹಿತ್ಯಲೋಕದ ಕಿರೀಟ. ಶರೀಫರ ತತ್ತ್ವಪದಗಳನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗಳಿಗೆ ಪಸರಿಸಬೇಕು. ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಾದಾಗ ಲೇಖಕನಿಗೆ ಮತ್ತು ಓದುಗನಿಗೆ ಆಂತರಿಕ ಉಪಯೋಗಗಳಿವೆ ಎಂದರು
ವಿವಿ ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನಕುಮಾರ್ ಕೆ. ಉಪಸ್ಥಿತರಿದ್ದರು.