ತುಮಕೂರು: ಶಾಲೆಗಳಲ್ಲಿ ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯದ ಶಿಕ್ಷಣವನ್ನು ಅಗತ್ಯವಾಗಿ ಕಲಿಸಿ ಮಕ್ಕಳಲ್ಲಿ ಸಂಸ್ಕಾರ ಮೂಡಿಸಬೇಕು. ಅನೇಕ ಸಂದರ್ಭಗಳಲ್ಲಿ ಶಿಕ್ಷಕರ ನಿರ್ಲಕ್ಷ್ಯದಿಂದ ಮಕ್ಕಳು ಕೆಟ್ಟದಾರಿ ಹಿಡಿಯುತ್ತಾರೆ. ಶಿಕ್ಷಕರು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆವಹಿಸಬೇಕು ಎಂದು ಸಿವಿಲ್ ನ್ಯಾಯಾಧೀಶರೂ ಆದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಹೇಳಿದರು.
ಮಾನವ ಹಕ್ಕುಗಳ ಜಾಗೃತಿ ದಳ ಹಾಗೂ ನಗರದ ಶಿರಾ ಗೇಟ್‍ನ ಕೆ.ಎಸ್.ಇ.ಎಫ್ ಕಾಲೇಜಿನಿಂದ ಬುಧವಾರ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಲಿಂಗತಾರತಮ್ಯ, ಜಾತಿಬೇಧ, ಆಸ್ತಿಅಂತಸ್ತು, ಅಭಿಪ್ರಾಯದ ಹಕ್ಕು ಎಲ್ಲರಿಗೂ ಸಮಾನವಾಗಿರುತ್ತದೆ. ಬೇರೆಯವರ ಹಕ್ಕನ್ನು ಕಸಿಯುವ ಹಕ್ಕು ಯಾರಿಗೂ ಇರುವುದಿಲ್ಲ. ಮಾನವ ಹಕ್ಕು ಉಲ್ಲಂಘನೆಯಾದಾಗ ಅದಕ್ಕೆ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಬಹುದು ಎಂದರು.
ಶಿಕ್ಷಣ ಪಡೆದವರು ಸಮಾಜಕ್ಕೆ ಮಾದರಿಯಾಗಿ ಬಾಳಬೇಕು. ಆದರೆ ಅಂತಹವರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಕೌಟುಂಬಿಕ ವ್ಯಾಜ್ಯ, ಇನ್ನಿತರ ಪ್ರಕರಣಗಳು ಶಿಕ್ಷಿಕರಲ್ಲೇ ಜಾಸ್ತಿ. ಯಾವುದೇ ಉನ್ನತ ಪದವಿ ಪಡೆದಿದ್ದರೂ, ಉನ್ನತ ಅಧಿಕಾರದಲ್ಲಿದ್ದರೂ ಸಂಸ್ಕಾರ, ನೈತಿಕತೆ ಇಲ್ಲದಿದ್ದರೆ ಅಂತಹವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಹಾಗೂ ಅಂತಹವರಿಂದಲೇ ಹಕ್ಕುಗಳ ಉಲ್ಲಂಘನೆಯಾಗುವ ಅಪಾಯವಿದೆ. ನಮ್ಮ ಶಿಕ್ಷಣ ಪದ್ದತಿಯಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತುಕೊಡಬೇಕಾಗುತ್ತದೆ ಎಂದರು.
ಮಕ್ಕಳಿಗೆ ನೈತಿಕತೆ ಬೋಧನೆ ಮಾಡುವ ಶಿಕ್ಷಕರು ಮೊದಲು ತಾವು ಮಾದರಿ ವ್ಯಕ್ತಿತ್ವ, ಆದರ್ಶ ಗುಣಗಳನ್ನು ಹೊಂದಿರಬೇಕು. ಮಕ್ಕಳಿಗೆ ಶಿಕ್ಷಕರೇ ಮಾದರಿ ಆಗುವುದರಿಂದ ಅವರು ಶಿಕ್ಷಕರ ನಡವಳಿಕೆಗಳನ್ನು ಅನುಸರಿಸಬಹುದು. ಇದೇ ರೀತಿ ತಂದೆತಾಯಿಯೂ ಮಕ್ಕಳಿಗೆ ಮಾದರಿ ಆಗುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅವರಂತಾಗು, ಇವರಂತಾಗು ಎಂದು ಮಕ್ಕಳಿಗೆ ಹೇಳುವ ಪೋಷಕರು ನನ್ನಂತಾಗು ಎಂದು ಹೇಳಲು ಹಿಂಜರಿಯುವಂತಾಗಿದೆ ಎಂದು ನೂರುನ್ನೀಸಾ ಹೇಳಿದರು.
ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಮಾತನಾಡಿ, ಮೊದಲು ಮಾನವನಾಗು ಎಂದು ಕುವೆಂಪು ಅವರು ಹೇಳಿದಂತೆ ಮಾನವೀಯತೆಯ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಯಾವ ಹಂತದಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆ ಆಗಲಾರದು. ಮೊದಲು ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು, ನಮ್ಮ ಬಗ್ಗೆ ನಮಗೆ ಹೆಮ್ಮೆ ಇರಬೇಕು ಅದು ಆದರ್ಶ ವ್ಯಕ್ತಿತ್ವದ ಮೂಲವಾಗುತ್ತದೆ ಎಂದರು.
ವಿದ್ಯಾರ್ಥಿಯಾಗಿ, ಅಧಿಕಾರಿಯಾಗಿ, ಮಗನಾಗಿ, ಮಗಳಾಗಿ, ಪ್ರಜೆಯಾಗಿ, ಚುನಾಯಿತ ಪ್ರತಿನಿಧಿಯಾಗಿ ನನ್ನ ಹಕ್ಕುಗಳೇನು, ಕರ್ತವ್ಯಗಳೇನು ಎಂಬ ತಮ್ಮ ಜವಾಬ್ದಾರಿಯನ್ನು ಎಲ್ಲರೂ ತಿಳಿದುಕೊಂಡರೆ, ಮಾನವ ಹಕ್ಕು, ಕಾನೂನು ಉಲ್ಲಂಘನೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು.
ನಗರ ವೃತ್ತದ ಸರ್ಕಲ್ ಇನ್ಸ್‍ಪೆಕ್ಟರ್ ಅವಿನಾಶ್ ಅವರು ಸೈಬರ್ ಕ್ರೈಂವ ಮೋಸ ಜಾಲದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಾಮಾಜಿಕ ಜಾಲತಾಣ ಬಳಕೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಸೈಬರ್ ಅಪರಾಧಿಗಳಿಂದ ಹೇಗೆಲ್ಲಾ ಮೋಸ ಹೋಗುವ ಅಪಾಯವಿದೆ ಎಂದು ವಿವರಿಸಿದರು. ಅಂತಹ ಸಂದರ್ಭದಲ್ಲಿ ಅನುಸರಿಸಬೇಕಾದ ಎಚ್ಚರಿಕೆ, ಕಾನೂನು ನೆರವಿನ ಬಗ್ಗೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಅವರು, ಪುರಾಣ ಕಾಲದಿಂದಲೂ ಮಾನವೀಯ ಗುಣಗಳನ್ನು ನಮ್ಮ ಧರ್ಮಗಳು ಸಾರುತ್ತಾ ಬಂದಿವೆ. ದಾನಧರ್ಮ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ನೋವಿನಲ್ಲಿರುವವರಿಗೆ ಸ್ಪಂದಿಸುವುದು ಮಾನವ ಹಕ್ಕುಗಳಿಗೆ ನೀಡುವ ಗೌರವ ಎಂದರು.
ಮಾನವ ಹಕ್ಕುಗಳ ಜಾಗೃತಿ ದಳದ ಜಿಲ್ಲಾಧ್ಯಕ್ಷ ಹೆಚ್.ಎಂ.ರವೀಶಯ್ಯ ಅಧ್ಯಕ್ಷತೆ ವಹಿಸಿದ್ದರು. ಜಾಗೃತಿ ದಳದ ರಾಜ್ಯಾಧ್ಯಕ್ಷ ಲೋಕೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‍ಪ್ರಸಾದ್, ಜಿಲ್ಲಾ ಕಾನೂನು ಸಲಹೆಗಾರರಾದ ಬಿಳಿಗೆರೆ ಶಿವಕುಮಾರ್, ಕೆ.ಎಸ್.ಇ.ಎಫ್ ಕಾಲೇಜು ಪ್ರಾಚಾರ್ಯ ಡಾ.ಆರ್.ಹರೀಶ್ ಮೊದಲಾದವರು ಭಾಗವಹಿಸಿದ್ದರು.