ತುಮಕೂರು : ಸೂರ್ಯನ ಶಾಖಕ್ಕೆ ರಾಜ್ಯ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನ ಉರಿ ಸೆಕೆ ಜನರನ್ನ ತತ್ತರಿಸಿದೆ. ಈಗಾಗಲೇ ದಾಖಲೆ ಬರೆದಿರೋ ತಾಪಮಾನ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಅತ್ತ, ಬೆವರಿಳಿಸೋ ಬಿಸಿ ಮಂದಿಯನ್ನ ಆಸ್ಪತ್ರೆಗೆ ಸೇರಿಸುತ್ತಿದ್ದರೆ, ಪಕ್ಷಿಗಳು ಸನ್ ಸ್ಟ್ರೋಕ್‍ಗೆ ಒಳಗಾಗಿ ಸಾವನ್ನಪ್ಪುತ್ತಿರುವುದು ಮನ ಕಲಕುತ್ತಿದೆ.
ಏಪ್ರಿಲ್ 26ರಂದು ಚುನಾವಣೆ ನಡೆಯುತ್ತಿದ್ದರಿಂದ ಹಲವಾರು ಕಡೆ ಮತದಾನದ ಬಗ್ಗೆ ತಿಳಿದುಕೊಳ್ಳಲು ಹಳ್ಳಿಗಳತ್ತ ಹೋಗಿದ್ದಾಗ ಹಲವಾರು ರಸ್ತೆಗಳಲ್ಲಿ ಪಕ್ಷಗಳು ಸಾವನ್ನಪ್ಪಿರುವುದನ್ನು ಕಂಡು ಏನಿದು ಎಂದು ಕೇಳಿದಾಗ ಸೂರ್ಯನ ಶಾಖಕ್ಕೆ ಬಳಲಿ ನೀರು ಸಿಗದೆ ಸನ್ ಸ್ಟ್ರೋಕ್ ಆಗಿ ಸಾವನ್ನಪ್ಪುತ್ತಿವೆ ಎಂದು ತಿಳಿಯಿತು.
ಹಲವಾರು ಕಡೆ ಗಿಳಿಗಳು, ಮರಕುಟುಕ, ಬೆಳವ, ಉಣ್ಣೆಗರುವ, ಸಣ್ಣ ಪುಟ್ಟ ಪಕ್ಷಿಗಳು ರಸ್ತೆ ಮತ್ತು ರಸ್ತೆ ಬದಿಗಳಲ್ಲಿ ಸತ್ತು ಬಿದ್ದಿರುವುದು ಮನ ಕಲಕ್ಕಿದ್ದಲ್ಲದೆ, ಎಂತಹ ಘನಘೋರ ಬರ ಬಂದಿತು ಎನಿಸಿತು. ಬೆಳಗಿನ ವೇಳೆಯಲ್ಲಿ ಆಹಾರ ಹುಡುಕುವ ಪಕ್ಷಿಗಳು ಮಧ್ಯಾಹ್ನದ ವೇಳೆಗೆ ನೀರನ್ನರಸಿ ಹೊರಟಾಗ ಸೂರ್ಯನ ಶಾಖಕ್ಕೆ ಹಾಗೆ ಬಿದ್ದು ಒದ್ದಾಡಿ ಸಾವನ್ನಪ್ಪುತ್ತಿರುವುದು ತುಂಬಾ ಮನಕಲಕುವಂತಹವುದು.
ರಸ್ತೆ ಬದಿಯಲ್ಲಿರುವ ಮನೆಯವರು, ರಸ್ತೆ ತೋಟದವರು ಬೋರ್‍ವೆಲ್ ಇದ್ದರೆ ರಸ್ತೆಯ ಇಕ್ಕಲೆಗಳಲ್ಲಿ ಅಲ್ಲಲ್ಲಿ ನೀರನ್ನು ಇಟ್ಟಲ್ಲಿ ಪ್ರಾಣಿ ಮತ್ತು ಪಕ್ಷಿಗಳು ನೀರು ಕುಡಿದು ದಣಿವಾರಿಸಿಕೊಳ್ಳು ಸಹಕಾರಿಯಾಗಲಿದೆ. ಜೀವವೂ ಉಳಿದಂತಾಗುತ್ತದೆ. ಪಕ್ಷಿಗಳಿಲ್ಲದೆ ಮಾನವನು ಬದುಕಿರಲಾರ, ಪಕಿಗಳು ಹುಳ-ಉಪ್ಪಟ್ಟೆ, ಮಿಡತೆ, ಹಾವು, ಚೇಳುಗಳ ಸಂತತಿ ಹೆಚ್ಚಾಗಂತೆ ನೋಡಿಕೊಳ್ಳಲಿ ಪಕ್ಷಿಗಳ ಪಾತ್ರ ದೊಡ್ಡದಿದೆ. ಪಕ್ಷಿಗಳೇ ಇವುಗಳನ್ನು ತಿನ್ನದಿದ್ದರೆ ಹುಳಗಳ ಸಾಮ್ರಾಜ್ಯದಿಂದ ಆಹಾರ ಮತ್ತು ದವಸ ಧಾನ್ಯಗಳನ್ನು ಕಳೆದುಕೊಂಡು ಮನುಷ್ಯ ಕುಲಕ್ಕೆ ಕುತ್ತು ತಂದರೂ ತರಬಹುದು, ಈ ಹಿನ್ನಲೆಯಲ್ಲಿ ಪಕ್ಷಿ ಸಂಕುಲವನ್ನು ಮಾನವ ಉಳಿಸುವ ಜವಾಬ್ದಾರಿ ದೊಡ್ಡದಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ 40 ಡಿಗ್ರಿ ಆಸುಪಾಸಿನಲ್ಲೇ ತಾಪಮಾನ ದಾಖಲಾಗ್ತಿದೆ.
ಪರಿಣಾಮ ಅತಿಯಾದ ಒಣಹವೆ, ಸನ್‍ಸ್ಟ್ರೋಕ್, ಮೈಗ್ರೇನ್, ಮೂಗಿನಲ್ಲಿ ರಕ್ತಸ್ರಾವ. ಹೀಗೆ ನಾನಾ ಸಮಸ್ಯೆಗಳಿಂದ ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಅತ್ತ ಆಸ್ಪತ್ರೆಗಳು ಕೂಡ ಪ್ರತ್ಯೇಕ ವಾರ್ಡ್‍ಗಳನ್ನು ಕಾಯ್ದಿರಿಸಲಾಗಿದೆ.
ಇನ್ನು, ರಾಜ್ಯದಲ್ಲಿ ಬೀರು ಬಿಸಿಲು ಕಡಿಮೆಯಾಗೋ ಲಕ್ಷಣವೇ ಕಾಣಿಸ್ತಿಲ್ಲ. ಸತತ ಒಂದು ವಾರದಿಂದ ತುಮಕೂರು ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ನಿಂದ 39 ತಾಪಮಾನ ದಾಖಲಾಗಿದ್ದು, ಜನರೆಲ್ಲಾ ಮಳೆರಾಯ ಬಾರಯ್ಯ ಅಂತಾ ವರುಣನ ಜಪದಲ್ಲಿ ಮುಳುಗಿದ್ದಾರೆ.
ಸಧ್ಯಕ್ಕೆ ಮಳೆಯ ಸೂಚನೆಯೂ ಕಾಣದೆ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿಗೆ ತತ್ತರಿಸುತ್ತಿದ್ದಾರೆ.IMD ಪ್ರಕಾರ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ತುಮಕೂರು, ಗದಗ, ಮಂಡ್ಯ, ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಿಸಿ ಗಾಳಿಯ ಅಲೆ ಹೆಚ್ಚಾಗುವ ಸಂಭವವಿದೆ. ಮೇ 5ರವರೆಗೂ ರಾಜ್ಯದ ಬಹುತೇಕ ಕಡೆ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮೇ 5ರಿಂದ ರಾಜ್ಯದ ವಿವಿಧೆಡೆ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 5 ದಿನಗಳು ರಾಜ್ಯದಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಂಭವವಿದೆ. ಇದೇ ಮೇ 5ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಾಧ್ಯತೆಯಿದೆ ಎಂದು ಐಎಂಡಿ ಇಲಾಖೆ ಹೇಳಿದೆ.