ತುಮಕೂರು: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡನೀಯ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಜಾತಿ, ಧರ್ಮ, ಪಕ್ಷ ಮೀರಿ ಖಂಡಿಸಬೇಕು. ಪಾಕಿಸ್ತಾನದ ಇಂತಹ ಕೃತ್ಯಗಳ ವಿರುದ್ಧ ಹೋರಾಟಕ್ಕಿಳಿಯಲು ಭಾರತೀಯ ಮುಸ್ಲೀಮರು ಸಿದ್ಧರಿದ್ದೇವೆ. ಆದರೆ ಕೆಲವು ಮಾಧ್ಯಮಗಳು ಮುಸ್ಲೀಮರನ್ನು ಬೇರೆ ರೀತಿಯಲ್ಲಿ ಬಿಂಬಿಸುತ್ತಾ ಶಾಂತಿ, ಸೌಹಾರ್ದತೆ ಕೆಡಿಸುವ ಪ್ರಯತ್ನ ಮಾಡುತ್ತಿವೆ ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಪ್ರಿಂಟ್ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಪತ್ರಕರ್ತರ ಸಂಘದ ನಿರ್ದೇಶಕ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಮುಸ್ಲೀಮರೂ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಒಪ್ಪಿಕೊಂಡು ಇಲ್ಲಿಯ ಕಾನೂನಿನ ಅಡಿಯಲ್ಲಿ ಬದುಕುತ್ತಿದ್ದಾರೆ. ನಾವು ಭಾರತದ ಭೂಮಿಯಲ್ಲಿದ್ದೇವೆ. ನೀವು ಇರುವ ಕಡೆ ಗಾಳಿ, ನೀರು ಸೇವಿಸುತ್ತಿರುವುದರಿಂದ ಅಂತಹ ರಾಜ್ಯಗಳಿಗೆ ಯಾವುದೇ ದ್ರೋಹ ಮಾಡಬಾರದು ಎಂದು ನಮ್ಮ ಮೌಲಾಲಿಗಳು, ಪ್ರವಾದಿಗಳು ನಮಗೆ ಹೇಳಿದ್ದಾರೆ. ನಾವೆಲ್ಲಾ ಒಂದು ಎಂಬ ಭಾವನೆಯ ಭ್ರಾತೃತ್ವದಿಂದ ಬಾಳಬೇಕು ಎನ್ನುವ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಈ ದೇಶದ ಐಕ್ಯತೆ, ಸಾರ್ವಭೌಮತ್ವ, ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ನಾವು ಭಾರತೀಯರು, ಭಾರತದ ಮೇಲೆ ಪಾಕಿಸ್ತಾನ ಪದೇಪದೆ ಇಂತಹ ದುಷ್ಕøತ್ಯ ನಡೆಸುತ್ತಿರುವುದು ಖಂಡನೀಯ. ಪಾಕಿಸ್ತಾನದ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯರಾದ ನಾವು ಸಿದ್ಧರಿದ್ದೇವೆ ಎಂದು ಇಕ್ಬಾಲ್ ಅಹ್ಮದ್ ಹೇಳಿದರು.
ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ವಿತರಕರಿಗೆ ಸೈಕಲ್ ವಿತರಿಸಲಾಯಿತು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್, ಸಂಘದ ರಾಜ್ಯಾಧ್ಯಕ್ಷ ಸಿ.ಡಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ನಾದೂರು ವಾಸುದೇವ, ಕಾರ್ಯದರ್ಶಿ ಜಿ.ಕೆ.ಕುಮಾರಸ್ವಾಮಿ, ಖಜಾಂಚಿ ಬಿ.ಜಗದೀಶ್ ಮೊದಲಾದವರು ಭಾಗವಹಿಸಿದ್ದರು.