ಆಗಿನ್ನ ದಲಿತ ಚಳವಳಿ ಕಾದ ಕಬ್ಬಿಣದ ಕಾವು ಆರಿದಂತೆ ಆರಿತ್ತು, ಅಂತಹ ಹೊತ್ತಿನೊಳಗೆ ಹಾಗೆ ಹೇಳಿಕೊಳ್ಳುವ ಗುಂಡಿಗೆ ಗಟ್ಟಿ ಇರಬೇಕು, ಇಲ್ಲ ಭಂಡ ಧೈರ್ಯ ಇರಬೇಕಿತ್ತು, ಅಂತಹ ಸಾಹಸವನ್ನು ಕಾರ್ಮಿಕ ಇಲಾಖೆಯಲ್ಲಿ ನೌಕರಿಯಲ್ಲಿದ್ದ ತುಂಬಾಡಿ ರಾಮಣ್ಣ ಒಂದು ಹೊಸ ದಿಕ್ಕಿನತ್ತ ಆಲೋಚನೆ ಮಾಡಿ ಒಂದು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟಿದ್ದರು.
ಅದು 1999 ಅಂದಿಗೆ ತುಮಕೂರಿನ ಪ್ರತಿಷ್ಠಿತ ಹೋಟೆಲ್ ಎಂದೇ ಕರೆಸಿಕೊಳ್ಳುವ ಕಪಾಲಿ ಹೋಟೆಲ್ ಹಾಲ್‍ನಲ್ಲಿ ‘ಮಣೆಗಾರ’ ಎಂಬ ಆತ್ಮಕತನ ಬಿಡುಗಡೆಯಾಗಲಿದೆ ಎಂದು ನನಗೆ ಸುದ್ದಿ ಮಾಡುವಂತೆ ದಲಿತ ಹೋರಾಟದ ಗೆಳೆಯರು ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆಯನ್ನು ಒಟ್ಟಿಗೆ ಇದ್ದ ಪತ್ರಿಕಾ ಗೆಳೆಯರಿಗೆ ನೀಡಿದಾಗ ಇದೇನು ಇಂತಹ ಹೆಸರನ್ನಿಟ್ಟುಕೊಂಡು ಪುಸ್ತಕ ತರ್ತಾ ಇದ್ದಾರೆ ಅಂತ ಕೆಲವರು ಇರಿಸು-ಮುರಿಸಿಗೆ ಒಳಗಾದರು.
ಜೊತೆಯಲ್ಲಿದ್ದ ಜಿ.ಇಂದ್ರಕುಮಾರ್ ಅದೇನ್ರಿ ಹಂಗೆ ಆಡುತ್ತೀರ ನಾನು ಕುರುಬನಪ್ಪ ನನ್ನ ಜಾತೀನಾ ಎಷ್ಟು ಸಲೀಸಾಗಿ ಹೇಳಿಕೊಳ್ಳುತ್ತೇನೆ, ಅವರವರ ಜಾತೀನ ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ, ಮಣೆಗಾರ ಅನ್ನೋದು ಜಾತಿಯಲ್ಲ ಅದೊಂದು ಅನ್ವರ್ಥ ನಾಮಪದ, ಹಂಗಂದ್ರೆ ಅವರು ಮಾಡುವ ಜಾಕರಿ, ಕೆಲಸ ಅಂತ ಅಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಪತ್ರಕರ್ತ ಗೆಳೆಯರ ನಡುವೆ ನಡೆಯಿತು.
ಆಗ ದಲಿತ, ರೈತ, ಬಂಡಾಯ ಚಳುವಳಿಯ ಜೊತೆಗೆ ಲಂಕೇಶ್, ತೇಜಸ್ವಿ, ರಾಮದಾಸ್, ನಂಜುಂಡಸ್ವಾಮಿ, ಪ್ರೊ.ಬಿ.ಕೃಷ್ಣಪ್ಪ, ಪ್ರೊ.ರವಿವರ್ಮಕುಮಾರ್, ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಕೆ.ಬಿ.ಸಿದ್ದಯ್ಯ ಮುಂತಾದವರು ಹೊಸ ಚಿಂತನೆಯ ಹೊಸ ದಿಕ್ಕಿನಲ್ಲಿ ಆಲೋಚಿಸುವ ಪ್ರಗತಿಪರ ಚಿಂತನೆಗಳನ್ನು ಬಿತ್ತಿ ಜಾತಿ ಸಂಕೋಲೆ, ಅಸ್ಪøಶ್ಯತೆ, ಧರ್ಮ, ಸಾಮಾಜಿಕ, ಸಮಾನತೆ, ಲೋಹಿಯಾ, ಗಾಂಧಿ, ಅಂಬೇಡ್ಕರ್ ಎಲ್ಲಾ ಚಲನೆಯ ರೂಪದಲ್ಲಿ ಆವರಿಸಿಕೊಳ್ಳುತ್ತಾ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಅಂದಿನ ಯುವ ಸಮುದಾಯವನ್ನು ಆಲೋಚಿಸುವ, ಬರಹಕ್ಕೆ ಹೆಚ್ಚು ಒತ್ತು ನೀಡುವ ನಿಟ್ಡಿನಲ್ಲಿ ಒಂದು ಬಹಿರಂಗವಾಗಿಯೋ, ಅಂತರಂಗವಾಗಿಯೋ ಅರಳುವ ಕಾಲ ಅದಾಗಿತ್ತು.
ಇಂತಹ ಹೊತ್ತಿನೊಳಗೆ ಪ್ರಗತಿಪರವಾಗಿ ಆಲೋಚಿಸುವ ಒಂದು ವರ್ಗ ಚಳುವಳಿಯಿಂದ ರೂಪುಗೊಂಡಿದ್ದರೆ ಮತ್ತೊಂದು ಕಡೆ ಈ ಚಳುವಳಿ ಪ್ರಭಾವದಿಂದ ಕ್ರಾಂತಿಗೆ ಮೂರೇಗೇಣು ಎಂಬ ಪಿತ್ತ ನೆತ್ತಿಗೇರಿಸಿಕೊಂಡ 70-80ರ ದಶಕದಲ್ಲಿ ಹುಟ್ಟಿ 90ರ ದಶಕದಲ್ಲಿ ಯುವಕರಾಗಿದ್ದ ನನ್ನಂತಹ ಸಾವಿರಾರು ಜನ ಹೊಸ ಆಲೋಚನೆಯೊಂದಿಗೆ ಸಮಾಜದ ಕಟ್ಟಳೆಗಳನ್ನು ಮೀರಿ ಹೊಸ ಬೆಳಕನ್ನು ಚೆಲ್ಲಲು ತಮ್ಮದೇಯಾದ ಒಂದು ಚಿಂತನಾ ಕ್ರಮದೊಂದಿಗೆ ಚರ್ಚೆಗಳು, ಅಂತರ್ಜಾತಿ ವಿವಾಹಗಳು, ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ಸಮತಾವಾದ-ಸಮಾಜವಾದವನ್ನು ಪ್ರತಿಪಾದನೆ ಮಾಡುತ್ತಾ ಇನ್ನೇನು ದೇಶ ಬದಲಾಗಲು ಅಸಮಾನತೆ ಹೋಗಿ ಸಮಾನತೆ ಬಂದೇ ಬಿಡ್ತು, ಜಾತಿ ಇನ್ನೆಲ್ಲಿ, ಧರ್ಮ ಇನ್ನೆಲ್ಲಿ ಅನ್ನುವ ಹೊತ್ತಿನೊಳಗೆ ಕೆಲವರು ತಮ್ಮ ಜಾತಿಯನ್ನು ಎದೆ ಸೆಟೆಸಿಕೊಂಡು ಹೇಳಿಕೊಳ್ಳಬೇಕೆಂಬ ಹೊತ್ತಿನೊಳಗೆ ತುಂಬಾಡಿ ರಾಮಣ್ಣ ‘ಮಣೆಗಾರ’ಎಂಬ ಆತ್ಮಕತನವನ್ನು ಬಿಡುಗಡೆಗೆ ಮುಂದಾಗಿದ್ದರು.

ಮಣೆಗಾರ ಎಂಬುದು ಮಾದಿಗ ಸಮುದಾಯಕ್ಕೆ ಕರೆಯುವ ಒಂದು ನಾಮ ಸೂಚಕ ಕಣೋ ಅಂತ ಆಗಿನ ಕಾಲಕ್ಕೆ ಕೇಬಿಯನ್ನು ಚುಡಾಯಿಸಿದಾಗ ಹೇಳಿದ ಮಾತು, ಮಣೆಗಾರ ಎಂಬುದು ಪ್ರಬುದ್ಧ ಮತ್ತು ಒಂದು ವರ್ಗಕ್ಕೆ ಕರೆಯುವ ಗೌರವದ ಸಂಕೇತ ಎಂದು ಮೇಲ್ವರ್ಗದ ಕೆಲ ಪ್ರಗತಿಪರರೆನಿಸಿಕೊಂಡವರು ನಮ್ಮಂತಹವರ ಜೊತೆ ವಾದಕ್ಕೆ ಇಳಿದಾಗ ಬನ್ನಿ ನಾವು ಮಾದಿಗರು, ಮಣೆಗಾರರು ಎಂದು ಹೇಳಿಕೊಳ್ಳುತ್ತೇವೆ ಇಂತಹ ಹೋಟೆಲ್, ಚೌರದ ಅಂಗಡಿಯಲ್ಲಿ ಹಳ್ಳಿಗಳಲ್ಲಿ ಅವರಿಗೆ ತಿಂಡಿ ಕೊಡಲಿ, ಚೌರ ಮಾಡಲಿ ಆಗ ‘ಮಣೆಗಾರ’ ಎಂಬುದಕ್ಕೆ ಗೌರವದ ಸಂಕೇತ ಅಥವಾ ನಾಣ್ಣುಡಿ ಎಂಬುದನ್ನು ಒಪ್ಪಿಕೊಳೋಣವೆಂದು ಚರ್ಚೆ-ವಾದಕ್ಕಿಳಿದಾಗ ನಮ್ಮಿಂದ ಆ ಗೆಳೆಯರು ಅಂತರ ಕಾಯ್ದುಕೊಂಡದ್ದುಂಟು.
ಮಣೆಗಾರ ಕೃತಿಯನ್ನು ತುಂಬಾಡಿ ರಾಮಣ್ಣ ಹೊರ ತಂದಾಗ ತುಂಬಾ ಚರ್ಚೆ ಮತ್ತು ಅದಕ್ಕೊಂದು ಹೊಸ ದಿಕ್ಕಿನೊಂದಿಗೆ ಹೊಸ ಆಲೋಚನೆಗಳು, ಚಿಂತನೆಗಳು ಹುಟ್ಟಿಕೊಂಡಿದಂತು ನಿಜ, ಈ ‘ಮಣೆಗಾರ’ ಪುಸ್ತಕವನ್ನು ಯಾವುದೇ ದಲಿತ ಸಾಹಿತಿ ಬಿಡುಗಡೆ ಮಾಡದೆ ಒಬ್ಬ ಆಗಿನ ಕಾಲಕ್ಕೆ ಸೆಡ್ಡು ಹೊಡೆದು ಅಂತರ್ಜಾತಿ ವಿವಾಹವಾಗಿದ್ದ ಪ್ರೊ.ಕಾಳೇಗೌಡ ನಾಗವಾರ ಅವರು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ವಿ.ಚಿಕ್ಕವೀರಯ್ಯ, ಜಿ.ವಿ.ಆನಂದಮೂರ್ತಿ, ಆಗಿನ ಕಾಲದಲ್ಲಿ ಮೈಸೂರು ಪೇಂಟ್ಸ್ ಅಧ್ಯಕ್ಷರಾಗಿದ್ದ ಮೈಸೂರಿನ ಕೃಷ್ಣ ಅವರು ಭಾಗವಹಿಸಿದ್ದರು.
ಇಂತಹ ಮಣೆಗಾರ ಕೃತಿ ಬಿಡುಗಡೆಗೆ ಆಗಿನ ಕಾಲದಲ್ಲೇ ಕಪಾಲಿ ಹೋಟೆಲ್ ಹಾಲ್ ತುಂಬಿ ತುಳಿಕಿತ್ತು, ಕಾಳೇಗೌಡ ನಾಗವಾರ ಅವರು ಹೆಚ್ಚು ದಲಿತ ಸಮುದಾಯದ ಒಳ ಸಂಕಷ್ಟಗಳನ್ನು ಬಿಡಿಸಿ-ಬಿಡಿಸಿ ಹೇಳಿದ್ದು, ಜಿ.ವಿ. ಆನಂದಮೂರ್ತಿ ಮತ್ತು ವೀಚಿ ಅವರು ತಮ್ಮ ದಲಿತ ಸ್ನೇಹಿತರನ್ನು ತಮ್ಮ ಮನೆಯೊಳಗೆ ಕರೆದುಕೊಂಡು ಹೋಗಲು, ಅವರಿಗೆ ಕಾಫಿ, ತಿಂಡಿ, ಊಟ ಬಡಿಸಲು ಅವರ ಮನೆಯವರ ಪ್ರತಿರೋಧ, ಬೈಯ್ಗುಳಗಳನ್ನು ಮನಸ್ಸಿಗೆ ನಾಟುವಂತೆ ಮಾತನಾಡಿದ್ದು ನನಗಿನ್ನೂ ನನ್ನ ಕಿವಿಗಳಲ್ಲಿ ಗುಯ್‍ಗುಡುತ್ತಾ ಇದೆ.
ಈ ಸಮಾರಂಭದ ಸುದ್ದಿಯನ್ನ ಅಂದಿನ ಪತ್ರಿಕೆಗಳಿಗೆ ನಾನೇ ಖುದ್ದಾಗಿ ಬರೆದು ತಲುಪಿಸಿ ಸೊಗಡು, ಪ್ರಜಾಪ್ರಗತಿ, ತುಮಕೂರು ವಾರ್ತೆ, ವಿಜಯವಾಣಿಗಳಲ್ಲಿ ಮುಖಪುಟದ ಸುದ್ದಿಯಾಗಿ ಬರುವಂತೆ ಮಾಡಲಾಯಿತು, ಮರು ದಿನ ಬೆಳಿಗ್ಗೆ ಮಣೆಗಾರ ಪುಸ್ತಕ ಮತ್ತು ಸಮಾರಂಭದ ಬಗ್ಗೆಯೇ ದಿನೇಶ್ ಅಮಿನ್ ಮಟ್ಟು ಸೇರಿದಂತೆ ಕೆಲ ಆಪ್ತ ಮತ್ತು ಪ್ರಗತಿಪರ ಪತ್ರಕರ್ತರೆಲ್ಲಾ ಸೇರಿಸಿ ಚರ್ಚಿಸಿ ಅಂದಿನ ನಂಜುಂಡೇಶ್ವರ ಹೋಟೆಲ್‍ನಲ್ಲಿ ಊಟ ಮಾಡಿದ್ದು ನಿನ್ನೆ-ಮೊನ್ನೆ ಅನ್ನುವಂತಿದೆ.
‘ಮಣೆಗಾರ’ ಆತ್ಮಕತನಕ್ಕೆ 25 ವರ್ಷಗಳು ತುಂಬಿರುವ ಹೊತ್ತಿನಲ್ಲಿ ದೇಶ ಮತ್ತು ರಾಜ್ಯದಲ್ಲಿ ಹಲವಾರು ಚಿಂತನೆಯ ಮಜಲುಗಳು ಬದಲಾಗುತ್ತಾ ಹೊಸ ತಲೆಮಾರಿನ ಯುವ ಸಮುದಾಯ ಎದೆ ಸೆಟೆಸಿಕೊಂಡು ಇಂದು ಬರೆಯಲು, ಧೈರ್ಯವಾಗಿ ಜಾತಿಯ ದ್ಯೋತಕವನ್ನು ಮೀರಿ ತಮ್ಮನ್ನು ಸಮಾಜಮುಖಿಯಾಗಿ ಚಿಂತಿಸುತ್ತಾ, ಹೊಸ ಆಯಾಮದೊಂದಿಗೆ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಮತ್ತು ಪುಸ್ತಕಗಳು ಹೊರ ಬರಲು ಅಂದು ‘ಮಣೆಗಾರ’ ಎಂಬ ಪುಸ್ತಕವನ್ನು ತಮ್ಮೆಲ್ಲಾ ಅಂಜಿಕೆ ಬದಿಗಿಟ್ಟು ಧೈರ್ಯದಿಂದ ‘ಮಣೆಗಾರ’ನನ್ನು ಲೋಕಾರ್ಪಣೆ ಮಾಡಿದ ತುಂಬಾಡಿ ರಾಯಯ್ಯನವರ ಸಾಹಸವನ್ನು ನಾವು ಒಮ್ಮೆ ತಿರುಗಿ ನೋಡಲೇಬೇಕು.

‘ಮಣೆಗಾರ’ ಈಗ 25ರ ಹರೆಹನಾಗಿ ಹೊಸ ಚಿಂತನೆಗಳೊಂದಿಗೆ ಮತ್ತೊಮ್ಮೆ ತುಮಕೂರು ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅಧ್ಯಯನಕ್ಕೆ ಮುಂದಾಗಿರುವುದು ಅಭಿನಂದನಾರ್ಹ, ಅದೂ ಹೊಸ ತಲೆಮಾರಿನ ಬರಹಗಾರರನ್ನು ಇದರಲ್ಲಿ ಒಳಗೊಳ್ಳಲು ಅವಕಾಶ ನೀಡಿರುವುದಲ್ಲದೆ, ದಲಿತ ಲೋಕದ ಅವಮಾನ, ಅಕ್ಷರವನ್ನೇ ಕಲಿಯಲು ಆಗದ ಸ್ಥಿತಿಯೊಳಗ ಅಕ್ಷರ ಸಿಕ್ಕಿ ಲೋಕದೊಳಗೆ-ಜಗದೊಳಗೆ ಹೊಸ ಆಲೋಚನೆಯ ಬರಹಗಳು, ಕಾವ್ಯ, ಕತೆ, ಕವನಗಳು ಜಗತ್ತಿಗೆ ತೆರೆದುಕೊಳ್ಳುತ್ತಿರವ ಹೊತ್ತಿನಲ್ಲಿ ಹೊಸ ಬರಗಾರರ ಮುಂದಿರುವ ಸವಾಲುಗಳು, ಅಕ್ಷರ ಕಲಿತವರಿಂದ ಗಟ್ಟಿಗೊಳ್ಳುತ್ತಿರುವ ಧರ್ಮ, ಜಾತಿ, ಆರ್ಥಿಕ ಸಂಪತ್ತು ಮತ್ತು ಸರ್ವಾಧಿಕಾರದ ಧೋರಣೆಗಳ ಬಗ್ಗೆಯು ಹೊಸ ಆಯಾಮದೊಂದಿಗೆ ಹೊಸ ಚಿಂತನೆಯೊಂದಿಗೆ ಒಂದು ಆಳವಾದ ಅಧ್ಯಯನ, ಚರ್ಚೆ ಈ ಹೊತ್ತಿನೊಳಗೆ ಹೊಸ ಯುವ ಪೀಳಿಗೆಗೆ ತುಂಬಾ ಅಗತ್ಯವೆನಿಸಿದೆ.
ಕ್ಷಣ ಮಾತ್ರದಲ್ಲಿ ಮೊಬೈಲ್ ಜಗತ್ತಿನೊಳಗೆ ಜಗತ್ತನ್ನು ತೆರೆದು ನೋಡುವ ಯುವ ಪೀಳಿಗೆ ಎತ್ತ ಸಾಗಿದೆ, ಅವರ ಚಿಂತನೆಗಳನ್ನು ಮೊಳಕೆಯೊಡೆಯವ ಹಂತದಲ್ಲೇ ಡೈವರ್ಟ್ ಮಾಡಿ ಚಿವುಟಿ ಹಾಕಿ ತಮ್ಮದಲ್ಲದ ಚಿಂತನೆಗಳನ್ನು ಮತ್ತು ಅಂದತೆಯನ್ನು ಬಿತ್ತಿ ಕೊಳಕನ್ನು ವಾಸನೆಯಲ್ಲ ಅದು ಸುವಾಸೆನೆ ಎಂದು ಹೇಳುತ್ತಿರುವ ಕಾಲಘಟ್ಟದಲ್ಲಿ ವಿಶ್ವವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬೆಳಕನ್ನು ಚೆಲ್ಲಿ ಮಲ್ಲಿಗೆ ಮಲ್ಲಿಗೆ ಹೋವಾಗಿ, ಇಬ್ಬನಿ ಇಬ್ಬನಿಯಾಗಿ, ಮನುಷ್ಯ ಮನುಷ್ಯನಾಗಿ ಅರಳುವ ಚಿಂತನೆಗಳು ಈ ಹೊತ್ತಿನೊಳಗೆ ಬೇಕಾಗಿದೆಯೋನೋ ಅದನ್ನು ಹೊಸ ಚಿಂತನೆಗಳೊಂದಿಗೆ ಬರಹವನ್ನು ಕಟ್ಟುತ್ತಿರುವ ಯುವ ಸಮುದಾಯ ಎಲ್ಲಾರನ್ನು ಒಳಗೊಳ್ಳುವ, ತಬ್ಬಿಕೊಳ್ಳುವ ನೆಲೆಯೊಳಗೆ ಕರೆದುಕೊಂಡು ಹೋಗುವ ಒಂದು ದೊಡ್ಡ ಜವಾಬ್ದಾರಿ, ಹೊಸ ಆಲೋಚನೆ, ಚಿಂತನೆ ಮತ್ತು ಬುದ್ಧನಂತೆ ಅಪ್ಪಿಕೊಳ್ಳುವ, ಅಂಬೇಡ್ಕರಂತೆ ಸಮಾನತೆ ಬಯಸುವ ಮನಸ್ಸು ಮತ್ತು ಹೃದಯಗಳು ಈಗ ಜಗತ್ತಿಗೆ ಖಂಡಿತ ಅಗತ್ಯವಾಗಿ ಬೇಕಾಗಿದೆ.
‘ಮಣೆಗಾರ’ ನನ್ನಂತಹ ಸಾವಿರಾರು ಜನರನ್ನು ಒಂದು ಹೊಸ ದಿಕ್ಕಿನತ್ತ ಆಲೋಚಿಸಲು ಹಾದಿಯನ್ನು ತೋರಿಸಿದಂತೂ ನಿಜ, ತುಂಬಾಡಿ ರಾಮಯ್ಯ ಈ ನಿಟ್ಟಿನಲ್ಲಿ 90ರ ದಶಕದಲ್ಲಿ ಈ ಕೃತಿ ತಂದಿದ್ದು ಒಳ್ಳೆಯದು, ಈಗ 25ವರ್ಷಗಳ ನಂತರವೂ ಆ ಕೃತಿ ಮತ್ತೆ ತೆರೆದುಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
-ವೆಂಕಟಾಚಲ.ಹೆಚ್.ವಿ.