ತುಮಕೂರು:ಲಿಂಗಾಯಿತರು ಗುರು,ಲಿಂಗ,ಜಂಗಮ,ಏಕ ದೇವೋಪಸಕರಾಗಿ ಬದಲಾಗದಿದ್ದರೆ,ನಮ್ಮ ವಿಭೂತಿ, ರುದ್ರಾಕ್ಷಿಯನ್ನು ವಸ್ತು ಪ್ರದರ್ಶನದಲ್ಲಿ ನೋಡಬೇಕಾದಿತು ಎಂದು ಶ್ರೀನಿಜಗುಣ ಪ್ರಭು ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಶ್ರೀಸಿದ್ದಿವಿನಾಯಕ ಸಮುದಾಯದಲ್ಲಿ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಬಸವ ಸಂಸ್ಕøತಿ ಅಭಿಯಾನದ ಸಾರ್ವಜನಿಕ ಸಮಾರಂಭದಲ್ಲಿ “ಶರಣರ ಏಕ ದೇವತಾ ನಿಷ್ಠೆ”ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು,ವೈದಿಕ ಧರ್ಮದ ಆಚರಣೆಗಳಿಂದ ಶರಣರು ಹಿಂದೆ ಸರಿಯದಿದ್ದರೆ ಲಿಂಗಾಯಿತರಿಗೆ ಉಳಿಗಾಲವಿಲ್ಲ ಎಂದರು.
ಇಂದು ಜಗತ್ತಿನಲ್ಲಿ ಪ್ರಚಲಿತರದಲ್ಲಿರುವ ಧರ್ಮಗಳೆಲ್ಲವೂ ಅಲ್ಲಿನÀ ಆಚರಣೆಯ ಮೇಲೆ ನಿಂತಿವೆ. ಹಾಗೆಯೇ ಲಿಂಗಾಯಿತ ಧರ್ಮವೂ ತನ್ನ ಆಚರಣೆಯ ಮೇಲೆ ನಿಲ್ಲಬೇಕಿದೆ.ಇತರೆ ಧರ್ಮಗಳಿಗಿಂತ ಭಿನ್ನವಾದ ದೇವರ ಪರಿಕಲ್ಪನೆಯನ್ನು ಬಸವಣ್ಣವರು ನೀಡಿದ್ದಾರೆ. ಲಿಂಗಾಯಿತ ಧರ್ಮದ ಪ್ರಮುಖ ಆಚರಣೆ ಎಂದರೆ ಲಿಂಗಪೂಜೆ, ಗುರು ಲಿಂಗ ಜಂಗಮವನ್ನು ದೇಹವೇ ದೇಗುಲವಾಗಿಸುವುದೇ ಲಿಂಗಾಯಿತದ ಧರ್ಮ ಸಾರ.ಇದೊಂದು ಜಾತ್ಯಾತೀತ ಧರ್ಮ.ಎಲ್ಲಾ ಕಾಯಕ ಸಮುದಾಯಗಳಿಗೆ ಸಮಾನತೆ ನೀಡಿದ,ಪ್ರಜಾಪ್ರಭುತ್ವದ ತಳಹದಿಯ ಮೇಲೆ ಲಿಂಗಾಯಿತ ಧರ್ಮ ನಿಂತಿದೆ ಎಂದು ಶ್ರೀನಿಜಗುಣಪ್ರಭು ಸ್ವಾಮೀಜಿ ನುಡಿದರು.
ದೇವರು, ಧರ್ಮವೆಂದರೆ ಇಂದು ಭಯ ಪಡುವ ಕಾಲ ಇದೆ.ಆದರೆ 1000 ವರ್ಷಗಳ ಹಿಂದೆ ಎಲ್ಲರನ್ನು ಒಳಗೊಂಡ ಒಂದು ಸಮಾನತೆಯ ಧರ್ಮವನ್ನು ಬಸವಣ್ಣ ಕಟ್ಟಿ ನಮಗೆ ಉಡುಗೊರೆಯಾಗಿ ನೀಡಿದ್ದಾರೆ.ಈ ಬಸವ ಸಂಸ್ಕøತಿ ಅಭಿಯಾನ ಯಾರ ವಿರುದ್ದವೂ ಅಲ್ಲ.ಧರ್ಮ ಮರೆತು ಬದುಕುತ್ತಿರುವ ಲಿಂಗಾಯಿತರ ಜಾಗೃತಿಗಾಗಿ ಆಯ್ದುಕೊಂಡ ಅಭಿಯಾನವಾಗಿದೆ. ಮಠಾಧೀಶರು ಗುಡಿ, ಗುಂಡಾರಗಳ ಕಟ್ಟುವದನ್ನು ಬಿಟ್ಟು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ದೇಶದ ಅಭಿವೃದ್ದಿಗೆ ಸಹಕರಿಸಿ ಎಂದು ಶ್ರೀನಿಜಗುಣಪ್ರಭು ಸ್ವಾಮೀಜಿ ನುಡಿದರು.
ಕೂಡಲ ಸಂಗಮದ ಡಾ.ಶ್ರೀಗಂಗಾ ಮಾತಾಜಿ ಮಾತನಾಡಿ,ಬಸವಣ್ಣನ ಪರಿಕಲ್ಪನೆಯಲ್ಲಿ ದೇವರು ಎಂದರೆ ನಿರಾಕರ, ನಿರ್ಗಣ, ನಿರಂಜನ ಸ್ವರೂಪದ ಪರಮಾತ್ಮ.ಯಾರು ಧರ್ಮದಿಂದ ದೂರವಾಗಿದ್ದರೋ, ಅವರ ಮನೆ ಬಾಗಿಲಿಗೆ ಧರ್ಮವನ್ನು ಇಷ್ಟಲಿಂಗ ಪೂಜೆಯ ಮೂಲಕ ತೆಗೆದುಕೊಂಡು ಹೋದರು. ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ ನಂತರ,ಬಸವಣ್ಣನನ್ನು ನಾಡಿಗೆ ಮತ್ತಷ್ಟು ಪರಿಚಯಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸ ಲಾಗಿದೆ.ಸೆಪ್ಟಂಬರ್ 01 ರಂದು ಹೊರಟ ಅಭಿಯಾನ ಅಕ್ಟೋಬರ್ 05 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ತಾವೆಲ್ಲರೂ ಆಗಮಿಸಬೇಕೆಂದು ಮನವಿ ಮಾಡಿದರು.
ಸಾಣೇನಹಳ್ಳಿಯ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿಗಳು ಆಶೀರ್ವಚನ ನೀಡಿ,ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂದು ಬಸವಣ್ಣನವರೇ ಹೇಳಿದ್ದಾರೆ.ಹಾಗಾಗಿ ಯಾರು ಏನೇ ಹೇಳಲಿ,ಲಿಂಗಾಯಿತರಿಗೆ ಬಸವಣ್ಣನೇ ತಂದೆ, ತಾಯಿ. ಮೊದಲು ಅವನನ್ನು ಅರಿತು,ಅದನ್ನು ಮೈಗೂಡಿಸಿಕೊಳ್ಳಬೇಕು.ಸರಕಾರ ನಡೆಸುತ್ತಿರುವ ಅರ್ಥಿಕ,ಸಾಮಾಜಿಕ ಸಮೀಕ್ಷೆಯಲ್ಲಿ ಲಿಂಗಾಯಿತರು ತಮ್ಮ ಧರ್ಮದ ಕಲಂನಲ್ಲಿ ಲಿಂಗಾಯಿತ,ಜಾತಿಯಲ್ಲಿ ನಿಮ್ಮ ಜಾತಿಯನ್ನು ಬರೆಸಬೇಕು.ಕೆಲವರು ಆರೋಪಿಸುವಂತೆ ನಾವು ಧರ್ಮವನ್ನು ಒಡೆಯುತ್ತಿಲ್ಲ. ಒಂದು ಗೂಡಿಸುವ ಕೆಲಸ ಮಾಡುತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಬಾಲ್ಕಿಯ ಡಾ.ಶ್ರೀ ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡಿ, ಲಿಂಗ ನಿಷ್ಠೆ, ವಚನ ಸಾಹಿತ್ಯ, ಬಸವ ನಿಷ್ಠೆ ಇವುಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.
ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ ಆಶೀರ್ವಚನ ನೀಡಿ, ಇದು ಆತ್ಮತೃಪ್ತಿಯ ಕೆಲಸ.ಯಾರನ್ನು ಮೆಚ್ಚಿಸಲು ಮಾಡಿದ ಕೆಲಸವಲ್ಲ.ಇದರ ಹಿಂದೆ ಹಲವರ ಶ್ರಮವಿದೆ. ಅನೇಕ ಸಂಘ ಸಂಸ್ಥೆಗಳು, ಬಸವಪರ ಸಂಘಟನೆಗಳು, 10 ತಾಲೂಕಿನ ಭಕ್ತರು ಶ್ರಮಿಸಿದ್ದಾರೆ.
ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ, ತುಮಕೂರು ಶರಣ ಸಂಸ್ಕøತಿಯ ನೆಲೆಬೀಡು, 12 ಶತಮಾನದಲ್ಲಿ ಶ್ರೀಸಿದ್ದರಾಮೇಶ್ವರರು,ಶ್ರೀಸಿದ್ದಲಿಂಗೇಶ್ವರರು ತಿರುಗಾಡಿದ,ಲಿಂಗೈಕ್ಯರಾದ ನಲ ನಮ್ಮದು.ಇಂತಹ ಪರಂಪರೆಯ ನಾಡಿನಲ್ಲಿ ಬಸವ ಸಂಸ್ಕøತಿ ಅಭಿಯಾನ ಯಶಸ್ವಿಯಾಗಿದೆ. ಡಾ.ಶ್ರೀಶಿವಕುಮಾರ ಸ್ವಾಮೀಜಿಗಳು ಗ್ರಾಮಾಂತರ ಬಸವ ಜಯಂತಿಯ ಮೂಲಕ ಬಸವಣ್ಣನವರು ಗ್ರಾಮ ಗ್ರಾಮಗಳಿಗೂ ತಲುಪಿಸುವ ಕೆಲಸ ಮಾಡಿದ್ದಾರೆ.ಶರಣ ಸಂಸ್ಕøತಿ ಅಭಿಯಾನ ಚಲಿಸುವ ವಿಶ್ವಕೋಶವಾಗಿದೆ.ಸೃಷ್ಟಿ ಮತ್ತು ಸಮಷ್ಠಿಯ ಕಲ್ಯಾಣ ಇದರ ಹಿಂದಿನ ಉದ್ದೇಶವಾಗಿದೆ.ಇಡೀ ವಿಶ್ವಕ್ಕೆ ಬೇಕಾದ ತತ್ವವನ್ನು ಬಸವಣ್ಣ ನೀಡಿದ್ದಾರೆ. ಹಾಗಾಗಿಯೇ ಬಸವಣ್ಣನವರನ್ನು ವಿಶ್ವಜೋತಿ ಎಂದು ಕರೆದಿದ್ದಾರೆ. ಇಂದಿಗೂ, ಎಂದೆಂದಿಗೂ ಬಸವಣ್ಣವ ವಿಚಾರಗಳು ಜನತೆಗೆ ಬೇಕಾಗಿದೆ. ಅಧುನಿಕ ಭಾರತದ ಸಮಸ್ಯೆಗಳ ಪರಿಹಾರ ಬಸವ ತತ್ವದಲ್ಲಿದೆ.ಮಹಾತ್ಮಗಾಂಧಿ ಅವರ ಕನಸಿನ ಭಾರತ ಇಂದಿಗೂ ಸಾಧಿಸಲು ಸಾಧ್ಯವಾಗಿಲ್ಲ.ಮಹಿಳಾ ಸಮಾನತೆ, ಜಾತಿಯತೆ, ಮೇಲು, ಕೀಳಿನ ತಾರತಮ್ಯ ರಹಿತ ಭಾರತವೇ 12ನೇ ಶತಮಾನದ ಬಸವಣ್ಣನ ಅನುಭವ ಮಂಟಪದ ಪರಿಕಲ್ಪನೆಯಾಗಿದೆ.ಜನಸಾಮಾನ್ಯರಲ್ಲಿ ಬಸವಣ್ಣನ ತತ್ವಗಳನ್ನು ಕಾಣಬಹುದಾಗಿದೆ.
ಇದೇ ವೇಳೆ ಸಾಹಿತಿ ಡಾ.ಶೈಲಾ ನಾಗರಾಜು ಅವರು ರಚಿಸಿರುವ ಬಸವ ಸಂಸ್ಕøತಿ ಎಂಬ ಕಿರು ಹೊತ್ತಿಗೆಯನ್ನು ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಗದಗದ ಡಾ.ಶ್ರೀತೊಂಟದ ಸಿದ್ದರಾಮ ಸ್ವಾಮೀಜಿ,ತಮ್ಮಡಿಹಳ್ಳಿಯ ಡಾ.ಶ್ರೀಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ,ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ,ಯಳನಾಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ,ಶ್ರೀಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ, ಶ್ರೀಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.