ಮೀಟರ್ ಬಡ್ಡಿ ಕಿರುಕುಳ ನೀಡಿ ಬೇಕರಿ ಮಾಲೀಕ ಬಸವರಾಜು ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪದಡಿ ನಾಗರಾಜು ಅಲಿಯಾಸ್ ಬಡ್ಡಿ ನಾಗನನ್ನು ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜು ಪತ್ನಿ ಶ್ರೀಮತಿ ಭವ್ಯ ತನ್ನ ಪತಿಯ ಆತ್ಮಹತ್ಯೆಗೆ ಬಡ್ಡಿನಾಗನೇ ಕಾರಣ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಬಡ್ಡಿನಾಗನನ್ನು ಬಂಧಿಸಲಾಗಿದೆ.
ಗುಬ್ಬಿ ಪಟ್ಟಣದ ಹೊರವಲಯದ ಸಿಐಟಿ ಕಾಲೇಜಿನ ಮುಂಭಾಗ ಬೇಕರಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಬಸವರಾಜು ಸ್ಥಳೀಯ ವ್ಯಕ್ತಿಗಳಿಂದ ಸಾಲ ಪಡೆದಿದ್ದ ಎನ್ನಲಾಗಿದೆ.
ಹಾಸನದ ಮೂಲದವರಾಗಿದ್ದ ಬಸವರಾಜು ಹಲವು ವರ್ಷಗಳಿಂದ ಬೇಕರಿ ಇಟ್ಟುಕೊಂಡು ಕುಟುಂಬದೊಂದಿಗೆ ವಾಸವಿದ್ದರು.
ಸ್ಥಳೀಯ ನಾಗರಾಜು ಉರೂಫ್ ಬಡ್ಡಿ ನಾಗನಿಂದ ಸಾಲ ಪಡೆದಿದ್ದ. ಸಾಲವನ್ನು ಹಿಂದಿರುಗಿಸಿದ್ದರೂ, ಬಡ್ಡಿ ನಾಗನಿಗೆ ನೀಡಿದ ಚೆಕ್ ಹಿಂದಿರುಗಿಸದೆ ಮತ್ತಷ್ಟು ಹಣಕ್ಕಾಗಿ ಪೀಡಿಸಿ ಹಿಂಸೆ ನೀಡುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಗುಬ್ಬಿ ಪೊಲೀಸರು ಬಡ್ಡಿನಾಗನಿಗೆ ಬಸವರಾಜು ನೀಡಿದ್ದ ಚೆಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.