ತುಮಕೂರು:ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು,ಸಣ್ಣ ನೀರಾವರಿ ಇಲಾಖೆ, ನರೇಗಾ, ಜೆಜೆಎಂ ಯೋಜನೆಗಳಲ್ಲಿ ನೂರಾರು ಕೋಟಿ ರೂಗಳ ಅವ್ಯವಹಾರ ನಡೆದಿದ್ದು,ಅಧಿಕಾರಿಗಳು ಲೂಟಿ ಹೊಡೆಯುತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯ ಸರಕಾರ ಹಾಲಿನ ದರ ಹೆಚ್ಚಳ ಮಾಡಿರುವುದನ್ನೇ ದೊಡ್ಡದೆಂದು ಬಿಂಬಿಸುತ್ತಾ ಪ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿರುವ ತುಮಕೂರು ಗ್ರಾಮಾಂತರ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಯಾವಾಗ ಪ್ರತಿಭಟನೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್,ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಸೇರಿ ಕೆರೆಗಳ ನಿರ್ವಹಣೆಗೆಂದು ಬಂದ 1 ಕೋಟಿ ರೂ ಅನುಧಾನವನ್ನು ಕಾಮಗಾರಿ ನಡೆಸದರೆ ಬಿಲ್ ಪಾವತಿ ಮಾಡಿದ್ದಾರೆ.ನಾಗವಲ್ಲಿ ಅಮಾನಿಕೆರೆ,ಕುಚ್ಚಂಗಿ ಕೆರೆ ನಿರ್ವಹಣೆ ಸೇರಿದಂತೆ ಒಟ್ಟು 9 ಕೆರೆಗಳ ನಿರ್ವಹಣೆಗೆ 1 ಕೋಟಿ ರೂ ಅನುದಾನ ಬಂದಿದ್ದು, ಇದನ್ನು ಟೆಂಡರ್ ಕರೆದು ಅರ್ನಹರಿಗೆ ಟೆಂಡರ್ ನೀಡಲಾಗಿದೆ.ಅಲ್ಲದೆ 12-03-2025ರಂದು ಅರ್ಹರ ಗುತ್ತಿಗೆದಾರರನ್ನು ಡಿಲೀಟ್ ಮಾಡಿ,ಆನರ್ಹರಿಗೆ ವರ್ಕ ಆರ್ಡರ್ ನೀಡಿ,13-03-2025ರಂದೇ 48.85 ಲಕ್ಷ,32.57 ಲಕ್ಷಕ್ಕೆ ಎರಡು ಬಿಲ್ ನೀಡಲಾಗಿದೆ.ಕೇವಲ ಒಂದು ದಿನದಲ್ಲಿ ಕೆರೆ ಕಾಮಗಾರಿ ನಡೆಸಲು ಸಾಧ್ಯವೇ ?, ಇದರ ಹಿಂದೆ ಯಾರಿದ್ದಾರೆ.ಇದು ಶಾಸಕರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ ಡಿ.ಸಿ.ಗೌರಿಶಂಕರ್, ಈ ವಿಚಾರವಾಗಿ ಶೀಘ್ರವೇ ಲೋಕಾಯುಕ್ತ ಮತ್ತು ಸರಕಾರಕ್ಕೆ ತನಿಖೆಗಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ನೀಡಬೇಕಾಗಿದ್ದ ಮೀಸಲು ಪಾಲಿಸಿಲ್ಲ.ಹೆಸರಿಗಷ್ಟೇ ಪರಿಶಿಷ್ಟ ಎಂದು ನಮೂದಿಸಿ, ಬೇರೆಯವರಿಗೆ ಗುತ್ತಿಗೆ ನೀಡಲಾಗಿದೆ.ಇದರಿಂದ ಸರಕಾರ ಗುತ್ತಿಗೆ ಕೆಲಸದ ಮೂಲಕ ಎಸ್ಸಿ, ಎಸ್ಟಿ ಜನರನ್ನು ಮೇಲೆತ್ತಬೇಕೆಂಬ ಆಶಯಕ್ಕೆ ಕೊಡಲಿಪೆಟ್ಟನ್ನು ಅಧಿಕಾರಿಗಳು ನೀಡಿದ್ದಾರೆ. ಇಷ್ಟು ರಾಜಾರೋಷವಾಗಿ ತಪ್ಪು ಮಾಡಲು ಯಾರು ಕಾರಣ. ಇವರಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದು ತನಿಖೆಯಿಂದ ಹೊರಬೇಕು. ಸರಕಾರದ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ದ ಎಫ್.ಐ.ಆರ್.ಹಾಕಿ ಜೈಲಿಗೆ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಡಿ.ಸಿ.ಗೌರಿಶಂಕರ್ ಒತ್ತಾಯಿಸಿದರು.
ನರೇಗದ ಪ್ರಮುಖ ಉದ್ದೇಶ ಗ್ರಾಮೀಣ ಭಾಗದ ಜನರಿಗೆ ಮನೆಯ ಬಾಗಿಲಿನಲ್ಲಿಯೇ ಕೆಲಸ ನೀಡುವುದು.ಆದರೆ ಗ್ರಾಮಾಂತರ ಕ್ಷೇತದ ಬಹುತೇಕ ನರೇಗ ಕೆಲಸಗಳನ್ನು ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ಮಾಡಿ, ಜಾಬ್ ಕಾರ್ಡು ಹೊಂದಿರುವವರಿಗೆ ಮೋಸ ಮಾಡಲಾಗುತ್ತಿದೆ.ಸಿಸಿ ಚರಂಡಿ ಮಾಡಲು ಜೆಸಿಬಿ ಯಂತ್ರದ ಮೂಲಕ ಕಾಲುವೆ ತೋಡಿಸಲಾಗುತ್ತಿರುವ ವಿಡಿಯೋ ನಮ್ಮ ಬಳಿ ಇದೆ.ಇದು ಶಾಸಕರ ಗಮನಕ್ಕೆ ಬಂದಿಲ್ಲವೇ, ಇಲ್ಲ ಬಂದಿದ್ದು ನಾಟಕ ಮಾಡುತ್ತಿದ್ದಾರೆಯೆ ಎಂಬುದು ಜನರಿಗೆ ಗೊತ್ತಾಗಬೇಕು. ಹೆಗ್ಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1.10 ಕೋಟಿ ರೂಗಳ ಕಾಮಗಾರಿಯನ್ನು ನಡೆಸದೆ ಬಿಲ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಅಧಿಕಾರಿಗಳು ಷಾಮೀಲಾಗಿದ್ದಾರೆ. ಇವರೆಲ್ಲರ ವಿರುದ್ದ ತನಿಖೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಈಗಾಗಲೇ ಸದನದಲ್ಲಿ ಪ್ರಸ್ತಾಪವಾಗಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೂರಾರು ಕೋಟಿ ರೂಗಳ ಕಾಮಗಾರಿ ನಡೆದಿದ್ದು,ಎಲ್ಲಿಯೂ ಕೂಡ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ನಿಯಮದ ಪ್ರಕಾರ ಪೈಫ್‍ನ್ನು ಸುಮಾರು 1.10 ಮೀಟರ್ ಆಳದಲ್ಲಿ ಹೂಳಬೇಕು ಎಂಬ ನಿಯಮವಿದ್ದರೂ ಜನರಿಗೆ ಕಾಣುವಂತೆ ಮೇಲೆ ಮೇಲೆಯೇ ಪೈಫ್ ಹೂಳಾಗಿದೆ.ಕೆಲವೊಂದು ಕಡೆ ಆರ್.ಡಬ್ಲ್ಯು.ಎಸ್‍ನವರು ನಡೆಸಿರುವ ಕಾಮಗಾರಿ ಯನ್ನು ತಮ್ಮದೆಂದು ಬಿಲ್ ಮಾಡಿಕೊಂಡಿರುವ ಉದಾಹರಣೆ ಇದೆ.ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ಫೆಬ್ರವರಿಯಲ್ಲಿಯೇ ದೂರು ನೀಡಿದ್ದೇನೆ.ಅಟಲ್ ಭೂ ಜಲ ಯೋಜನೆ ಯಲ್ಲಿಯೂ ಇದೇ ರೀತಿಯ ಅವ್ಯವಹಾರ ನಡೆದಿದ್ದು,ಸರಕಾರ ಈ ಕುರಿತು ಕೂಲಂಕಷ ತನಿಖೆ ನಡೆಸಿ ತಪಿತಸ್ಥರ ವಿರುದ್ದು ಕ್ರಮ ಕೈಗೊಳ್ಳಬೇಕು.ಆಗ ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದು ಡಿ.ಸಿ.ಗೌರಿಶಂಕರ್ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದಿಗೂ 52 ಹಳ್ಳಿಗಳಲ್ಲಿ ಸ್ಮಶಾನವಿಲ್ಲ. ಆ ಊರಿನಲ್ಲಿ ಯಾರಾದರೂ ಸತ್ತರೇ ರಸ್ತೆ ಬದಿಯಲ್ಲೋ,ಕೆರೆ ಅಂಗಳಲ್ಲೋ ಹೂಳಬೇಕಾದ ಸ್ಥಿತಿ ಇದೆ.ದುರ್ಗದಹಳ್ಳಿ ಘಟನೆ ನಮ್ಮ ಕಣ್ಣಮುಂದೆಯೇ ಇದೆ.ಆಗಿದ್ದರೂ ಸ್ಮಶಾನಗಳಿಗೆ ಅದ್ಯತೆಯ ಮೇಲೆ ಭೂಮಿ ನೀಡುವಲ್ಲಿ ಶಾಸಕರ ವಿಫಲರಾಗಿದ್ದಾರೆ. ಮೊದಲು ಇದರ ಬಗ್ಗೆ ಹೋರಾಟ ಮಾಡಲಿ, ಆ ನಂತರ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲಿ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾರಾಯಣಪ್ಪ, ಕೆಂಪಣ್ಣ,ಊರುಕೆರೆ ಉಮೇಶ್, ನರುಗನಹಳ್ಳಿ ವಿಜಯಕುಮಾರ್,ರಮೇಶ್ ಇನ್ನಿತರರು ಉಪಸ್ಥಿತರಿದ್ದರು.