ಎರಡು ಬಾರಿ ತಮ್ಮನ ಜೀವ ಉಳಿಸಿದ ವೈದ್ಯ ದೇವರು, ಬುಲೆಟ್ ಸೌಂಡಿಗೆ ಉಚ್ಚೆ ಒಯ್ದುಕೊಳ್ಳುತ್ತಿದ್ದ ಮಕ್ಕಳು

ತುಮಕೂರು: ನಾವು ಆ ಎರಡು ಬುಲೆಟ್ ಬೈಕ್ ಸೌಂಡ್ ಬಂದರೆ ನಮಗೇನೋ ಭಯ, ಆತಂಕ, ಆಗಿನ ಕಾಲಕ್ಕೆ ನಮ್ಮ ಸುತ್ತಲ 7 ಹಳ್ಳಿಯಲ್ಲಿ 3 ಬುಲೆಟ್ ಬೈಕ್‍ಗಳಿದ್ದವು, ಒಂದು ಬುಲೆಟ್ ಸೌಂಡ್‍ಗೆ ಮಾತ್ರ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇನ್ನೆರಡು ಬುಲೆಟ್ ಸೌಂಡ್‍ಗಳು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದ್ದವು.

ನಮಗೆ ಮೊದಲ ಬುಲೆಟ್ ಬೈಕ್ ಎಂದರೇನೆ ಭಯ, ಏಕೆಂದರೆ ಅದು ಅಂತಿಂತಹ ಬೈಕ್ ಅಲ್ಲ ಇಡೀ 7 ಹಳ್ಳಿಗಳಿಗೆ ಎಷ್ಟೊತ್ತಿಗೆ ಬೇಕಾದರೂ ಅದು ಸೌಂಡ್ ಮಾಡಿಕೊಂಡು ಬರುತಿತ್ತು, ಆ ಸೌಂಡ್ ಕಿವಿಗೆ ಬೀಳುತ್ತಲೇ ಪಿಳ್ಳೆ, ಪಿಸುಗ, ಮಕ್ಕಳು ಮರಿ ಎಲ್ಲಾ ಯಾವುದಾದರೂ ಮೂಲೆಗೋ, ಅಟ್ಟದ ಮೇಲಕ್ಕೋ, ಮಂಚದ ಕೆಳಕ್ಕೋ ಹೋಗಿ ಬಚ್ಚಿಟ್ಟುಕೊಂಡು ಬಿಕ್ಕಳಿಸುತ್ತಾ ಇರೋರು, ನಿಮಗಲ್ಲ ಅಂದರೂ ಅವರು ಬಿಕ್ಕಳಿಸುವುದನ್ನು ಬಿಡುತ್ತಿರಲಿಲ್ಲ. ಆ ಬುಲೆಟ್ ಸೌಂಡ್ಗೆ ಈ ರೀತಿಯಾದರೆ ಆ ಬುಲೆಟ್‍ನಲ್ಲಿ ಬರುತ್ತಿದ್ದವರನ್ನು ನೋಡಿದ ಎಷ್ಟೋ ಮಕ್ಕಳು ಉಚ್ಚೆ ಹೊಯ್ದುಕೊಂಡು ಬಾಯಿ ಬಡಿದುಕೊಂಡು ಅವರು ಹೋಗುವ ತನಕ ಅಳು ಎಂಬ ವಾಲಗವನ್ನು ನಿಲ್ಲಿಸುತ್ತಿರಲಿಲ್ಲ.

ಇಂತಹ ಬುಲೆಟ್ ಸೌಂಡ್ ಎಂದರೆ ಈಗಲೂ ನನಗೆ ಆ ಬುಲೆಟ್ ಸೌಂಡೆ ನನ್ನ ಕಿವಿಯಲ್ಲಿ ಇಂದಿಗೂ ಗುಯ್ ಗುಡುಗುವುದು, ಇಂತಹ ಬುಲೆಟ್‍ನಲ್ಲಿ ಬರುತ್ತಿದ್ದವರೇ ವೈದ್ಯರೆಂಬ ದೇವರು, ಅವರು ಹಗಲು ರಾತ್ರಿ ಎನ್ನದೆ ಹಳ್ಳಿಯ ಕಚ್ಚಾ ರಸ್ತೆಯಲ್ಲಿ ತಮ್ಮ ಬುಲೆಟ್‍ನಲ್ಲಿ ಡುಗು ಡುಗು ಬಂದು ಸಾವಿರಾರು ಜನರ ಜೀವ ಉಳಿಸಿದ, ಈಗಲೂ ಆ ಸುತ್ತೇಳು ಹಳ್ಳಿಗಳಲ್ಲಿ ಆ ವೈದ್ಯರ ಹೆಸರನ್ನು ಮಾತ್ರ ಹೇಳ ಬಲ್ಲರು, ಯಾಕೆಂದರೆ ಅವರ ಸೇವೆ, ಅವರ ಕೈ ಗುಣ ಹಾಗೆ ಇತ್ತು.

ಅವರೇ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯರಾದ ಡಾ||ರಾಜೇಂದ್ರರವರು. ಅವರು ನಮ್ಮ ಕುಟುಂಬದ ವೈದ್ಯರೂ ಹೌದು, ನಮ್ಮ ಮನೆಯ ಹಿತೈಶಿಯೂ ಹೌದು, ಅವರು ಎಂದೂ ಬೇಜಾರು ಮಾಡಿಕೊಂಡು ನಾನು ರೋಗಿಯನ್ನು ನೋಡಲು ಬರುವುದಿಲ್ಲ ಎಂದು ಹೇಳಿದ್ದನ್ನೂ ಕೇಳಿಯೇ ಇಲ್ಲ, ಅವರೆಂದೂ ದುಡ್ಡಿಗಾಗಿ ವೈದ್ಯ ವೃತ್ತಿಯನ್ನು ಮಾಡಿದ್ದನ್ನು ನಾನು ಕಣ್ಣಾರೆ ನೋಡಿಲ್ಲ, ಅವರು ಚಿಕ್ಕಮಗಳೂರು ಜಿಲ್ಲೆ ಆಣೇಗೆರೆ ಮತ್ತು ನಿಡುವಳ್ಳಿಯಲ್ಲಿ ಸಲ್ಲಿಸಿದ ಸೇವೆ ಅನನ್ಯ, ಎಷ್ಟೋ ರಾತ್ರಿಗಳು ಅವರು ಮಲಗದೆ ರೋಗಿಗಳನ್ನು ಗಾಡಿಯಲ್ಲಿ ಕರೆದುಕೊಂಡು ಬರುವ ತನಕ ಲಾಟೀನ್ ಹಚ್ಚಿಕೊಂಡು, ಆಸ್ಪತ್ರೆಯಲ್ಲೋ, ಅಥವಾ ಮನೆಯಲ್ಲೋ ಕಾದು ಕುಳಿತಿರುತ್ತಿದ್ದರು.

ರೋಗಿಯನ್ನು ಕರೆದುಕೊಂಡು ಬಂದ ಮೇಲೆ ಮೊದಲು ಅವರು ನಾಡಿ ಮಿಡಿತವನ್ನು ನೋಡಿ ಆ ನಂತರ ಸ್ಟೆತ್ ಇಟ್ಟು ಚೆಕ್ ಮಾಡುತ್ತಿದ್ದರು, ಅಷ್ಟರ ವೇಳೆಗೆ ಅವರ ಪತ್ನಿ ಬಿಸಿ ನೀರಿನಲ್ಲಿ ಕುದಿಯುತ್ತಿದ್ದ ಸಿರಿಂಜ್ ಮತ್ತು ಪಾತ್ರೆ, ಸಿರಿಂಜ್ ಹಿಡಿದುಕೊಳ್ಳುವ ಕ್ಲಿಪರ್ ಸಮೇತ ಡಾ|| ರಾಜೇಂದ್ರ ಅವರ ಮುಂದೆ ಇಡುತ್ತಿದ್ದರು.

ಸುಡುತ್ತಿದ್ದ ನೀರಿನಿಂದ ಸಿರಿಂಜ್ ಹಿಡಿಕೆಯಿಂದ ಸಿರಿಂಜ್ ಹೊರ ತೆಗೆದು ಅದು ಬಿಸಿ ಇರುತ್ತಿದ್ದರಿಂದ ತಮ್ಮ ಉಸಿರಿನಿಂದ ಊದಿ ಸ್ವಲ್ಪ ಆರಿದ ಮೇಲೆ ಸಿರಿಂಜ್‍ನ್ನು ಕೈಯಲ್ಲಿಡಿದು ಸೂಜಿ ಪಿಕ್ಸ್ ಮಾಡಿ ಸೂಜಿಯನ್ನ ಬಿಸಿ ನೀರೊಳಗೆ ಇಟ್ಟು ಸೀರಿಂಜ್ ಒಳಗೆ ನೀರನ್ನು ಎಳೆದುಕೊಂಡು ಸಿರಿಂಜಿನ ನೀರನ್ನು ಝೀ ಝೀ ಅಂತ ಪಾತ್ರೆಗೆ ಎರಡು ಮೂರು ಸಲ ಸೀ ಸೀ ಅನ್ನಿಸುವಾಗ ಮೈಯೆಲ್ಲಾ ಗಡ ಗಡ ನಡುಗುತ್ತಿತ್ತು, ಆ ಸೂಜಿಯಿಂದ ಯಾರಿಗೆ ಚುಚ್ಚುತ್ತಾರೋ ಎಂದು, ನಂತರ ಔಷಧಿ ಬಾಟಲ್ ತೆಗೆದುಕೊಂಡು ಚೆನ್ನಾಗಿ ಕುಲಕಿ ಔಷಧಿ ತುಂಬಿ ರೋಗಿಯ ಕುಂಡಿಗೋ, ಕೈಯಿಗೋ ಚುಚ್ಚುತ್ತಿದ್ದರು.

ಆ ಸೂಜಿ ಚುಚ್ಚಿ ಮನೆಯೊಳಗೆ ಆ ಪಾತ್ರೆ ತೆಗೆದುಕೊಂಡು ಹೋದ ಮೇಲೆ ಮಕ್ಕಳೆಲ್ಲಾ ಬಂದು ನೋಡುತ್ತಿದ್ದರು, ಡಾ|| ರಾಜೇಂದ್ರರವರೇ ಹಳ್ಳಿಗೆ ಹೋಗಿದ್ದರೆ ಅವರು ಹೊರಡುವ ಸಮಯಕ್ಕೆ ಅವರು ಬುಲೆಟ್ ಮೇಲೆ ಕುಳಿತು ಕಿಕ್ಕರ್ ಒತ್ತಿ ಬುಲೆಟ್ ಸ್ಟಾಟ್ ಆಗುವುದನ್ನೇ ಕಾಯುತ್ತಿದ್ದ ಮಕ್ಕಳು ಬುಲೆಟ್ ಸ್ಟಾಟ್ ಆಗಿ ಡುಗು ಡುಗು ಅಂದ ಕೋಡಲೇ ಓ ಹೋ ಓ ಎಂದು ಕೇಕೆ ಹಾಕುತ್ತಿದ್ದವು.

ನಮ್ಮ ತಂದೆಗೆ ಈ ವೈದ್ಯರು ತುಂಬಾ ಸ್ನೇಹಿತರು, ನಮಗೆ ಕಾಯಿಲೆ, ಜ್ವರ, ಇತರೆ ರೋಗ-ರುಜಿನವಾದಾಗ ಡಾ||ರಾಜೇಂದ್ರ ಅವರ ಬಳಿ ಕರೆದುಕೊಂಡು ಹೋಗುತ್ತಿದ್ದರು, ಮೊದಲು ಆಸ್ಪತ್ರೆಗೆ ಡಾಕ್ಟರ್ ಬಂದಿದ್ದರೋ ಇಲ್ಲವೋ ಎಂಬುದನ್ನು ಅವರ ಬುಲೆಟ್‍ನಿಂದಲೇ ಕಂಡು ಹಿಡಿಯುತ್ತಿದ್ದೆವು, ಬುಲೆಟ್ ಆಸ್ಪತ್ರೆಯ ಮುಂದೆ ಇದ್ದರೆ ಅಪ್ಪ ಅಪ್ಪ ಇಂಜೆಕ್ಷನ್ ಕೊಡಿಸಬೇಡ ಎಂಬ ರೋದನೆ ಸುರುವಾಗುತಿತ್ತು, ಇಲ್ಲ ಬಾರಪ್ಪ ಎಂದು ಕರೆದುಕೊಂಡು ಹೋಗೋರು, ನಮ್ಮಪ್ಪನ್ನು ನೋಡಿದ ಕೂಡಲೇ ಡಾಕ್ಟರು ಏಮಿ ವೆಂಕಟಯ್ಯ ಬಾಗುಂಡವಾ ಎಂದು ತೆಲುಗಿನಲ್ಲಿ ಮಾತನಾಡಿಸುತ್ತಿದ್ದರು, ಆಮೇಲೆ ಮಗ ಡಾಕ್ಟರ್ ಓದುತ್ತಿರುವ ಬಗ್ಗೆ ಮಾತುಕತೆ ನಡೆದು ನನಗೋ, ನನ್ನ ತಮ್ಮನಿಗೋ ಉಷಾರಿಲ್ಲ ಎಂದಾಗ ಟೇಬಲ್ ಮೇಲೆ ಮಲಗಿಸಿ ಚೆಕಪ್ ಮಾಡಿ ಇಂಜೆಕ್ಷನ್ ಕೊಟ್ಟೆ ಬಿಡುತ್ತಿದ್ದರು, ಇಂಜೆಕ್ಷನ್ ಕೊಟ್ಟ ಮೇಲೆ ನಮ್ಮಪ್ಪ ಜೇಬಿನಿಂದ ಕಲ್ಲು ಸಕ್ಕರೆ ತಿನ್ನಲು ನಮಗೆ ಕೊಡುತ್ತಿದ್ದರು, ಕಲ್ಲು ಸಕ್ಕರೆ ಕೊಟ್ಟು ಇಂಜೆಕ್ಷನ್ ನೋವು ಮರೆಯಲಿ ಎಂಬುದು ನಮ್ಮಪ್ಪ ಅನಿಸಿಕೆ, ಡಾಕ್ಟರಿಗೆ ಬರುತ್ತೀನಿ ಸ್ವಾಮಿ ಅಂತ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು.

ಇವರ ಎರಡು ವೈದ್ಯಕೀಯ ಘಟನೆಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ, ಒಂದನೆಯದು ನನ್ನ ತಮ್ಮ ಎರಡು ಬಾರಿ ತೀವ್ರ ಕಾಯಿಲೆಗೆ ಬಿದ್ದಾಗ ಉಳಿಸಿದ್ದು, ಇನ್ನೊಂದು ನಮ್ಮೂರ ದೇವರ ಹೊಸಹಳ್ಳಿಯ ಅಂಗಡಿ ವೀರಭದ್ರಯ್ಯನ ಕಾಲು ಆನೆ ಕಾಲಿನಂತೆ ಊದಿಕೊಂಡು ಉಳಿಯುವುದಿಲ್ಲ ಎಂದಕೊಂಡಾಗ ಇದೇ ರಾಜೇಂದ್ರ ಡಾಕ್ಟರ್ 6 ತಿಂಗಳಿಗೂ ಹೆಚ್ಚು ಟ್ರೀಟ್‍ಮೆಂಟ್ ನೀಡಿ ಉಳಿಸಿದರು.

ನನ್ನ ತಮ್ಮ ಹೆಚ್.ವಿ. ಮಂಜುನಾಥ ಇಂದು ಉಳಿದಿದ್ದಾನೆ ಎಂದರೆ ಈ ವೈದ್ಯರೇ ಕಾರಣ, ಮಂಜು ಚಿಕ್ಕವನಿರುವಾಗ ತುಂಬಾ ಕಾಯೆಲೆಗೆ ಬಿದ್ದು ಬಿಡುತ್ತಾನೆ, ನಮ್ಮ ಅಪ್ಪ-ಅಮ್ಮ ಆಸ್ಪತ್ರೆಗಳನ್ನೆಲ್ಲಾ ತಿರುಗಿ ಸಾಕಾಗಿ ನಮ್ಮೂರ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಗುವನ್ನು ಹಾಕಿಕೊಂಡಿರುತ್ತಾರೆ, ಅದನ್ನು ತಿಳಿದ ಪಂಚನಹಳ್ಳಿ ಹಾಸ್ಟೆಲ್ ನಲ್ಲಿ ಓದುತ್ತಿದ್ದ ನಮ್ಮಣ್ಣ ಡಾ.ರಂಗಸ್ವಾಮಿ ಬಂದು ಮಗೂಗೆ ಉಷಾರಿಲ್ಲ ಎಂದರೆ ದೇವಸ್ಥಾನದಲ್ಲಿ ಹಾಕಿಕೊಂಡಿದ್ದೀರ, ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ರೇಗಾಡಿದಾಗ, ಡಾ|| ರಾಜೇಂದ್ರ ಅವರು ಮಂಜೂಗೆ ಟೈಪಾಯ್ಡ್ ಆಗಿದೆ ಬೆಲಗೂರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಪ್ರಥಮ ಚಿಕಿತ್ಸೆ ನೀಡಿ, ಮುಂದಿನ ಚಿಕಿತ್ಸೆಯ ಬಗ್ಗೆ ಒಂದು ಚೀಟಿಯಲ್ಲಿ ರೋಗದ ಎಲ್ಲಾ ವಿವರ ಮತ್ತು ಚಿಕಿತ್ಸೆ ಏನು ನೀಡಬೇಕೆಂದು ಬರೆದು ಕಳಿಸಿದರು.

ನಮ್ಮಪ್ಪ, ಅಮ್ಮ ಬೆಲಗೂರಿಗೆ ಹೋಗಿ ಮುಂಜುಗೆ ಚಿಕಿತ್ಸೆ ಕೊಡಿಸಿ ಉಳಿಸಿಕೊಂಡು ಬಂದರು. ಮಂಜು ಎಸ್‍ಎಸ್‍ಎಲ್‍ಸಿ ಓದುವಾಗ ಅದೇ ರೀತಿ ಮಲೇರಿಯಾ ಕಾಯಿಲೆಯಾದಾಗ ಮತ್ತೊಮ್ಮೆ ಚಿಕಿತ್ಸೆ ನೀಡಿ, ಮಲೇರಿಯಾಗೆ ಆಯುರ್ವೇದಿಕ್ ಔಷಧಿ ಬೇಡ, ಪಂಚನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮತ್ತೆ ಚೀಟಿ ಕೊಟ್ಟು ಕಳಿಸಿದರು, ಪಂಚನಹಳ್ಳಿ ವೈದ್ಯರು ಚಿಕಿತ್ಸೆ ನೀಡಿದರು, ಆಗ ಮಲೇರಿಯಾ ಎಂದರೆ ಅದೊಂದು ಭಯಂಕರ ಕಾಯಿಲೆ, ದಿನಾ ನಮ್ಮ ಮನೆಯ ಮುಂದಕ್ಕೆ ಆಸ್ಪತ್ರೆಯ ಜೀಪ್ ಬಂದು ಚಿಕಿತ್ಸೆ ಕೊಟ್ಟು ಹೋಗುತ್ತಿತ್ತು.

ನನ್ನ ಮಗನಿಗೆ ದೆವ್ವ ಮೆಟ್ಟಿಕೊಂಡಿದೆ ಎಂದು ಆ ಆಸ್ಪತ್ರೆ ಜೀಪ್ ಬರುವ ವೇಳೆಗೆ ನಮ್ಮಪ್ಪ ಎರೆ ಮಣ್ಣಿನಲ್ಲಿ ಒಂದು ಗೊಂಬೆ ಮಾಡಿಕೊಂಡು ತಂಗಡೆ ಹೂ ಮುಡಿಸಿ, ಪೂಜೆ ಮಾಡಿ, ಆ ಗೊಂಬೆ ಮುಂದೆ ನನ್ನ ತಮ್ಮ ಮಂಜನನ್ನು ಬರಿ ಮೈಯಲ್ಲಿ ಕೂರಿಸಿ ಆ ಗೊಂಬೆ ಮುಂದೆ ಮಡಿಕೆಯಲ್ಲಿರುತ್ತಿದ್ದ ತಣ್ಣೀರನ್ನು ತಂಗಡೆ ಸೊಪ್ಪಿನಲ್ಲಿ ತೆಗೆದುಕೊಂಡು ಮಂಜು ಮುಖಕ್ಕೆ ಹೊಡೆಯೋರು, ಮಂಜು ಬರೀ ಮೈಯಲ್ಲಿ ನಿಕ್ಕರಿನಲ್ಲಿಕೂರುತ್ತಿದ್ದ, ಅವನ ಮೇಲೆಯೇ ದೆವ್ವ, ದೇವರು ಬಂದಿದೆಯೋನೋ ಅನ್ನುವ ರೀತಿಯಲ್ಲಿ ಹೂಂಕರಿಸುತ್ತಾ ಹೊಡೆಸಿಕೊಳ್ಳುತ್ತಿದ್ದ.

ಆ ನಂತರ ಆ ಗೊಂಬೆಯನ್ನ ಒಂದು ತಟ್ಟೆಯಲ್ಲಿ ಇಟ್ಟುಕೊಂಡು ಆ ಗೊಂಬೆಗೆ ಥೂ ಥೂ ಎಂದು ನಮ್ಮಪ್ಪ ಉಗಿಯುತ್ತಾ ಮೂರು ದಾರಿ ಕೂಡಿರುವ ರಸ್ತೆಯಲ್ಲಿ ಇಟ್ಟು ಮತ್ತಷ್ಟು ಆ ಗೊಂಬೆಗೆ ಉಗಿದು ಎಡಗಾಲಿನಲ್ಲಿ ಒದ್ದು, ಮೆಟ್ಟು ತಗೊಂಡು ಹೊಡೆಯೋರು, ಆ ನಂತರ ನನ್ನ ತಿರುಗಿ ನೋಡದೆ ಮನೆಗೆ ನಡಿ ಅನ್ನೋರು, ಇದನ್ನು ನೋಡಿದ ಅಂದಿನ ಮಲೇರಿಯಾ ಸೂಪರ್‍ವೈಸರ್ ಆಗಿದ್ದ ರುದ್ರಚಾರ್, ಸಿಸ್ಟರ್ ಗೌರಮ್ಮ ಬಿದ್ದು ಬಿದ್ದು ನಗೋರು, ಆಗ ನಮ್ಮಪ್ಪ ಸ್ವಾಮಿ ನಿಮ್ಮ ಕೆಲ್ಸ ನೀವು ಮಾಡಿ, ನಮ್ಮ ಕೆಲ್ಸ ನಾವು ಮಾಡುತ್ತೇವೆ ಎಂದು ಹೇಳೋರು.

ಇಂತಹ ಡಾ.ರಾಜೇಂದ್ರ ಅವರು ಈಗೊಂದು 20 ವರ್ಷಗಳ ನಂತರ ನನಗೆ ಪತ್ರಿಕಾಲಯದಲ್ಲಿ ಕೂತು ಕೆಲಸ ಮಾಡುತ್ತಿದ್ದರಿಂದ ಪೈಲ್ಸ್ ಆಗುವ ಸೂಚನೆ ಇದುದ್ದರಿಂದ ಇಂಗ್ಲೀಷ್ ಮೆಡಿಸನ್ ಬೇಡ, ಆಯುರ್ವೇದಿಕ್ ಔಷಧಿ ತೆಗೆದುಕೊಳ್ಳೋಣ ಎಂದು ತುಮಕೂರು ಜನರಲ್ ಆಸ್ಪತ್ರೆಯಲ್ಲಿರುವ ಆಯುರ್ವೇದಿಕ್ ಆಸ್ಪತ್ರೆಯಲ್ಲಿದ್ದ ಡಾ||ಪ್ರಭಾಕರ್ ಅವರನ್ನು ಭೇಟಿ ಮಾಡಿದೆ, ಅವರು ಔಷಧಿ ಕೊಟ್ಟು ಖಾಲಿಯಾದ ಮೇಲೆ ಬರುವಂತೆ ತಿಳಿಸಿದರು, ಔಷಧಿ ಖಾಲಿಯಾದಾಗ ಒಂದು ದಿನ ತುಮಕೂರು ಆಯುರ್ವೇದಿಕ್ ಆಸ್ಪತ್ರೆಗೆ ಹೋದಾಗ ಡಾ||ಪ್ರಭಾಕರ್ ರಜೆ ಇದ್ದರು, ಪಕ್ಕದಲ್ಲೇ ಇದ್ದ ಇನ್ನೊಬ್ಬರ ವೈದ್ಯರ ಕೊಠಡಿಗೆ ಬರೀ ಔಷಧ ಬರೆಸಿಕೊಳ್ಳುವುದಲ್ಲವೇ ಎಂದು ಹೋದೆ, ಆ ಮುಖ ಎಲ್ಲಿಯೋ ನೋಡಿದಂತೆ, ಆತ್ಮೀಯ ಮುಖದಂತೆ, ಅದೇ ನಗು ನನ್ನನ್ನು ಆಕರ್ಷಿಸಿತು, ಅವರ ಬಳಿ ಹೋಗಿ ತಮ್ಮ ಹೆಸರೇನು ಸಾರ್ ಎಂದೆ, ಡಾ|| ರಾಜೇಂದ್ರ ಅಂದರು, ನೀವು ಎಲ್ಲೆಲ್ಲಿ ಇದ್ರಿ ಅಂದಾಗ ನಿಡುವಳ್ಳಿ, ಆಣೇಗೆರೆ ಹೆಸರು ಹೇಳಿದ ತಕ್ಷಣ ಸಾರ್ ನಾನು ವೆಂಕಟಯ್ಯನವರ ಮಗ ವೆಂಕಟಾಚಲ ಎಂದ ಕೂಡಲೇ ಕುರ್ಚಿಯಿಂದ ಎದ್ದು ಬಂದವರೆ ಬಾಚಿ ತಬ್ಬಿಕೊಂಡು ಬಿಟ್ಟರು. ನಡೆ ತಿಂಡಿ ತಿನ್ನೋಣ ಅಂತ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿದರು, ಪೈಲ್‍ಸಿಗೆ ಒಳ್ಳೆ ಔಷಧಿ ಕೊಟ್ಟು ವಾಸಿನೂ ಮಾಡಿದರು.


ಅವರು ಒಮ್ಮೆ ನಮ್ಮ ಸೊಗಡು ಕಛೇರಿಗೆ ಬಂದು ವೆಂಕಟಾಚಲ ನನಗೆ ಪ್ರೊಮೋಷನ್ ಇದೆ ಎಂಎಲ್‍ಎ ಶಿವಣ್ಣ ಮತ್ತು ಸಚಿವರಾದ ಬಿಸತ್ಯನಾರಾಯಣ ಅವರ ಶಿಫಾರಸ್ಸು ಪತ್ರಬೇಕು ಎಂದು ಹೇಳಿದರು, ಶಿವಣ್ಣನವರ ಪತ್ರವನ್ನು ಆಗಲೇ ಕೊಡಿಸಿದೆ.

ಸತ್ಯನಾರಾಯಣ ಅವರ ಪತ್ರಕ್ಕಾಗಿ ನಾನು ಲಕ್ಕೇನಹಳ್ಳಿ ಶ್ರೀನಿವಾಸ್ ಸಚಿವ ಸತ್ಯನಾರಾಯಣ ಮನೆಗೆ ಹೋದೆವು, ಆಗ ರಾತ್ರಿ ಹತ್ತು ಗಂಟೆಯಾಗಿತ್ತು, ಸಚಿವ ಸತ್ಯನಾರಾಯಣ ಅವರು ಎಲ್ಲಿಯೋ ಹೋಗಿದ್ದವರು ಅವರ ಭುವನಹಳ್ಳಿ ಮನೆಗೆ ಆ ವೇಳೆಗೆ ಬಂದರು, ಸಚಿವರು ನನ್ನ ನೋಡಿದವರೆ ಒಳಗೆ ಕರೆದುಕೊಂಡು ಹೋದರು, ಏನು ವಿಷಯ ಎಂದರು ನಿಮ್ಮದೊಂದು ಶಿಫಾರಸ್ಸು ಪತ್ರಬೇಕು ಅಂದೆ, ಆಗಲೇ ಅವರ ಪಿಎಗೆ ಹೇಳಿ ಟೈಪ್ ಮಾಡಿಸಿ ಸಹಿ ಹಾಕಿ ನನಗೆ ಜೆರಾಕ್ಸ್ ಕಾಪಿ ಕೊಡಿ ಆರೋಗ್ಯ ಸಚಿವರ ಹತ್ತಿರ ಮಾತನಾಡುತ್ತೇನೆ ಎಂದ ಸಚಿವರು ಊಟ ಮಾಡುವ ತನಕ ಬಿಡದೆ ಊಟ ಮಾಡಿಸಿ ಕಳಿಸಿದರು, ಡಾ||ರಾಜೇಂದ್ರ ಅವರಿಗೆ ಪ್ರೊಮೋಷನ್ ಆಯಿತು, ಆ ಖುಷಿಯಲ್ಲಿ ಹೋಟಲ್‍ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿ ಒಂದಷ್ಟು ಹಣ ಕೊಡಲು ಬಂದರು, ನಾನು ನೀವು ನಮಗೆ ದೇವರಿದ್ದಂತೆ ನಿಮ್ಮ ಸೇವೆಯ ಭಾಗ್ಯ ನನಗೆ ಸಿಕ್ಕಿದ್ದು ಭಾಗ್ಯ ಎಂದು, ನಿಮ್ಮ ಪ್ರೀತಿಯಷ್ಟೆ ಸಾಕು ಎಂದೆ, ಆ ನಂತರ ಅವರು ಡಿಡಿ ಆಗಿ ಬೆಂಗಳೂರಿಗೆ ಹೋದರು.

ಮೊನ್ನೆ ಭಾನುವಾರ ನನ್ನ ಕ್ಲಾಸ್‍ಮೇಟ್ ರಾಧಮಣಿಯವರ ತಂದೆ ಚನ್ನಪ್ಪ.ಕೆ.ಟಿ.ನಿಧನ ಹೊಂದಿದ್ದರು, ಚನ್ನಪ್ಪನವರ ವೈಕುಂಠ ಸಮಾರಾಧನೆಗೆ ಹೋದಾಗ ಡಾ||ರಾಜೇಂದ್ರ ಅವರು ನಿಂತಿದ್ದಾರೆ, ನನಗೆ ನಮ್ಮೂರ ದೇವರನ್ನೇ ಕಂಡಂತಾಯಿತು, ಅವರು ಅದೇ ಪ್ರೀತಿಯಿಂದ ಬಾಚಿ ತಂಬಿಕೊಂಡರು, ಚನ್ನಪ್ಪನವರ ಮನೆಯ ತನಕ ನಮ್ಮ ಕಾರಲ್ಲೇ ಕರೆದುಕೊಂಡು ಹೋದೆವು.

ಊಟದ ನಂತರ ಕೇಳಿದರೆ ಡಾಕ್ಟರ್ ಹೋದರು ಅಂದರು, ಅವರಿಗೆ ಪೋನ್ ಮಾಡಿದಾಗ ಬಸ್ ಸ್ಟಾಂಡಿನಲ್ಲಿ ಇರುವುದಾಗಿ ಹೇಳಿದರು, ಅಲ್ಲಿಗೆ ಹೋಗಿ ಪೋಟೋ ತೆಗೆಸಿಕೊಂಡ ಮೇಲೆ ಕೈಯಲ್ಲಿ ಏನೋ ಹಿಡಿದುಕೊಂಡು ಜೇಬಿಗೆ ಇಡಲು ಬಂದರು, ನೋಡಿದರೆ ದುಡ್ಡು, ಬೇಡ ಸಾರ್ ನಿಮ್ಮ ಮೇಲಿನ ಪ್ರೀತಿ ಹೋಗಿ ಬಿಡುತ್ತೆ ಅಂದಾಗ ಹಣವನ್ನು ವಾಪಸ್ಸು ಜೇಬಿಗೆ ಇಟ್ಟುಕೊಂಡರು.

ಅವರು ಬಳ್ಳಾರಿಗೆ ಹೋದ ಮೇಲೆ ಪೋನ್ ಮಾಡಿದಾಗ ರಾಧಮಣಿಯವರ ತಂದೆ ಚನ್ನಪ್ಪ ನಾನು ಬಹಳ ಗೆಳೆಯರು ನಾನು ದೇವರ ಹೊಸಹಳ್ಳಿ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಬಂದಾಗಲೆಲ್ಲಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆ, ರಾಧಮಣಿ ಮದುವೆಗೂ ಹೋಗಿದ್ದೆ ಎಂದರು, ನಾನು ಮೆಲ್ಲಗೆ ಯಾಕೆ ಸಾರ್ ದುಡ್ಡು ಕೊಡಲು ಬಂದ್ರಿ ಅಂದೆ, ನಿನ್ನ ಮೇಲಿನ ಪ್ರೀತಿಗೆ, ಅಭಿಮಾನಕ್ಕೆ ಎಂದು, ತಪ್ಪು ತಿಳಿಬೇಡಪ್ಪ ವೆಂಕಟಾಚಲ ಎಂದರು, ಯಾಕೋ ಅವರ ಅಭಿಮಾನಕ್ಕೆ ನನ್ನ ಕಣ್ಣಾಲಿಗಳು ತೇವವಾದವು.


ನನ್ನ ತಮ್ಮನ ಜೀವ ಉಳಿಸಿದ ವೈದ್ಯೋ ನಾರಾಯಣ ಹರಿ ಡಾ|| ರಾಜೇಂದ್ರರವರಿಗೆ ಅಭಿನಂದನೆಗಳು, ಪ್ರೀತಿಯಿಂದ ಅವರಿಗೆ ಧನ್ಯವಾದಗಳು.

ಇನ್ನೊಂದು ಬುಲೆಟ್ ಬೈಕೆಂದರೆ ಅದು ಸಬ್ ಇನ್ಸ್‍ಫೆಕ್ಟರ್ ಶಕೀಲ್ ಅಹ್ಮದ್ ಅವರದು, ಅವರ ಬುಲೆಟ್ ಸೌಂಡ್ ಬಂತು ಎಂದರೆ ಇಸ್ಪೀಟ್ ಆಡುವವರು, ಕಳ್ಳರು, ಪಿಕ್‍ಪ್ಯಾಕೇಟ್ ಕಳ್ಳರು, ತೋಟದ ಕಾಯಿ ಕಳ್ಳರು ಗಿಡಗಂಟೆ, ಮನೆಯ ಅಟ್ಟ ಹತ್ತಿ ಬಚ್ಚಿಟ್ಟುಕೊಳ್ಳುತ್ತಿದ್ದರು.

ಇನ್ನೊಂದು ಗರುಗದಹಳ್ಳಿಯ ಜಿ.ಆರ್.ಮರುಳಸಿದ್ದಯ್ಯನವರ ಬುಲೆಟ್, ಇವರು ಪಂಚನಹಳ್ಳಿಯ ಹೈಸ್ಕೂಲ್ ಮೇಷ್ಟ್ರಾಗಿದ್ದರಿಂದ ಈ ಬುಲೆಟ್ ಸೌಂಡ್‍ಗೆ ಕೆಲ ವಿದ್ಯಾರ್ಥಿಗಳು ಬಿಟ್ಟರೆ ಬೇರೆ ಯಾರೂ ಹೆದರುತ್ತಿರಲಿಲ್ಲ.

ಡಾ||ರಾಜೇಂದ್ರರವರು ತುಂಬಾ ದೈವ ಭಕ್ತರು, ಅವರು ಆಸ್ಪತ್ರೆಗೆ ಹೋಗುವ ಮುನ್ನ, ಆಸ್ಪತ್ರೆಯ ಬಳಿ ಇದ್ದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯ ಸ್ವಾಮಿಗೆ ಕೈ ಮುಗಿದು ಎರಡು ನಿಮಿಷ ಧ್ಯಾನ ಮಾಡಿ ಹೋಗುತ್ತಿದ್ದರು.

ತುಮಕೂರಿನಲ್ಲಿದ್ದಾಗಲೂ ಅವರು ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಧ್ಯಾನ ಮಾಡುತ್ತಿದ್ದರು.

-ವೆಂಕಟಾಚಲ.ಹೆಚ್.ವಿ.

One thought on “ಎರಡು ಬಾರಿ ತಮ್ಮನ ಜೀವ ಉಳಿಸಿದ ವೈದ್ಯ ದೇವರು, ಬುಲೆಟ್ ಸೌಂಡಿಗೆ ಉಚ್ಚೆ ಒಯ್ದುಕೊಳ್ಳುತ್ತಿದ್ದ ಮಕ್ಕಳು

  1. ತುಂಬಾ ಉತ್ತಮ ನಿಜಜೀವನದ ಕಥನ. ಡಾ. ರಾಜೇಂದ್ರರವರು ನಮ್ಮ ಕುಟುಂಬದ ವೈದ್ಯರು ಹೌದು!. ಇತ್ತೀಚಿಗೆ ಒಂದು ಮದುವೆಯಲ್ಲಿ ಆರತಕ್ಷತಾ ಕಾರ್ಯಕ್ರಮದಲ್ಲಿ ಭೇಟಿಯ ನೆನಪುಗಳು ಹಾಗೆ ಇವೆ.👍👌🤝

Leave a Reply

Your email address will not be published. Required fields are marked *