ತುಮಕೂರು : ಭಾರತದ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ದೇಶದ ಪ್ರಜಾಪ್ರಭುತ್ವದ ಅಡಿಪಾಯ ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ 69ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನವು ವಿವಿಧತೆಯಲ್ಲಿ ಏಕತೆಯನ್ನು ಉಳಿಸಿ, ದೇಶವನ್ನು ಸುಭದ್ರವಾಗಿರಿಸಿದೆ ಎಂದು ತಿಳಿಸಿದರು.
ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರಲು ಹಿಂದಿನಿಂದಲೂ ಬಸವಣ್ಣ, ಬುದ್ಧ, ಕನಕದಾಸರು ಹಾಗೂ ಇನ್ನೂ ಹಲವು ಮಹಾನ್ ನಾಯಕರು ಹೋರಾಟ ನಡೆಸಿ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ ಎಂದರು.
ದೇಶದಲ್ಲಿರುವ ಅನಿಷ್ಟ ಪದ್ಧತಿ ಹಾಗೂ ಅಸಮಾನತೆಯನ್ನು ಹೋಗಲಾಡಿಸಿ ಪ್ರತಿಯೊಬ್ಬ ಪ್ರಜೆಗೂ ಕಾನೂನು ರೀತಿಯಲ್ಲಿ ಸಮಾಜದಲ್ಲಿ ಸರಿಸಮಾನವಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಈ ಮಹತ್ವದ ಸಂವಿಧಾನವನ್ನು ಕೊಟ್ಟವರು ಭಾರತ ರತ್ನ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿಯೇ ಭಾರತವು ಏಕತೆಯಿಂದ ಕೂಡಿದೆ. ಸಮಾಜದ ಪರಿವರ್ತನೆಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಡಾ: ಅಂಬೇಡ್ಕರ್ ಅವರ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ ಎಂದರು.
ಮೊಬೈಲ್ ಫೆÇೀನ್ನಲ್ಲಿ ಹಣವನ್ನು ಪಾವತಿಗಾಗಿ ಬಳಸುವ ಭೀಮ್ (BHIM) ಆ್ಯಪ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನೀಡಿರುವುದು ಅಭಿನಂದನಾರ್ಹ ಎಂದು ತಿಳಿಸಿದ ಅವರು, ಮಧ್ಯಪ್ರದೇಶದ ಮಾಹೋ(ಅಂಬೇಡ್ಕರ್ ನಗರ), ಪಂಚತೀರ್ಥಗಳು, ಯುನೈಟೆಡ್ ಕಿಂಗ್ಡಮ್, ಬುದ್ಧ ಧರ್ಮಕ್ಕೆ ಮತಾಂತರಗೊಂಡ ಮಹಾರಾಷ್ಟ್ರದ ನಾಗಪುರ ಮತ್ತು ದೆಹಲಿಯ ಅಲಿಪುರದಲ್ಲಿ ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸಿ ಅವರಿಗೆ ಗೌರವ ಸಿಗುವಂತೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ದೊರೆಯಬೇಕೆಂಬುದು ಸಂವಿಧಾನದ ಮೂಲ ಉದ್ದೇಶವಾಗಿದ್ದು, ಅದನ್ನು ಅನುμÁ್ಠನಗೊಳಿಸುವುದು ಪ್ರಮುಖವಾಗಿದೆ ಎಂದು ಹೇಳಿದರು.
ಡಾ: ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪಿಎಚ್ಡಿ ಪಡೆದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯಂತಹ ಮೌಲ್ಯಗಳನ್ನು ನಮ್ಮ ವ್ಯಾಪ್ತಿಯಲ್ಲಿ ಹೇಗೆ ಅನುμÁ್ಠನಗೊಳಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳು ನಮ್ಮ ಹಂತದಲ್ಲೆ ಪರಿಹರಿಸಿಕೊಂಡಾಗ ಮಾತ್ರ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ನಾವು ಸಲ್ಲುವ ಗೌರವವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಸಂವಿಧಾನವೇ ನಮ್ಮ ಸಮಾನ ಬದುಕಿಗೆ ಆಧಾರ. ಸಮಾಜದಲ್ಲಿ ನಾವೆಲ್ಲರೂ ಪ್ರತಿ ದಿನ ಸರಿ ಸಮಾನ ಜೀವನ ನಡೆಸಲು ನಮ್ಮ ಸಂವಿಧಾನವೇ ಕಾರಣ. ಸಂವಿಧಾನದ ಅಡಿಯಲ್ಲಿ ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದ ಅವರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಮಾತನಾಡಿ, ಸಂವಿಧಾನವು ಇಡೀ ದೇಶಕ್ಕೆ ಒಂದು ಸ್ವರೂಪವನ್ನು ನೀಡಿದ್ದು, ದೇಶದ ನಾಗರಿಕರಿಗೆ ಉತ್ತಮ ಭವಿಷ್ಯವನ್ನು ರೂಪಿಸಿದೆ. ಡಾ. ಅಂಬೇಡ್ಕರ್ ಅವರು ದೇಶದ ಯುವಕರಿಗೆ ಆಶಾಭಾವನೆ ಮೂಡಿಸಿದ್ದು, ವಿಶ್ವದ ಇತರ ರಾಷ್ಟ್ರಗಳೆದುರು ಮನ್ನಣೆಯೊಂದಿಗೆ ಬದುಕಲು ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಯಾವ ದೇಶವು ತನ್ನ ನಾಗರಿಕರಿಗೆ ಸಂಸ್ಕøತಿ, ಸಮಾನತೆ, ಮುಕ್ತ ಅವಕಾಶ, ಮಕ್ಕಳಿಗೆ ತಮ್ಮ ಭವಿಷ್ಯವನ್ನು ರೂಪಿಸುವ ಅವಕಾಶ ಹಾಗೂ ನಾಗರಿಕರಿಗೆ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಒದಗಿಸುತ್ತದೆಯೋ ಅಂತಹ ದೇಶವೇ ವಿಶ್ವಮಾನ್ಯವಾಗಿ ಬೆಳೆಯುತ್ತದೆ. ಅದಕ್ಕೆ ನಮ್ಮ ಭಾರತವು ಒಂದು ಉತ್ತಮ ಉದಾಹರಣೆಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹಲವು ಮಹಾನ್ ನಾಯಕರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಆದರೆ, ಸ್ವಾತಂತ್ರ್ಯದ ನಂತರ ದೇಶದ ಭವಿಷ್ಯದ ಪ್ರಶ್ನೆಗೆ ಉತ್ತರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನ ಎಂದು ಹೇಳಿದರು.
ನಮ್ಮ ಭಾರತದ ಸಂವಿಧಾನವು ದೇಶದ ಸರ್ವತೋಮುಖ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು, ವಿಶ್ವಕ್ಕೆ ಮಾದರಿಯಾಗಿದೆ. ಮಾನವ ಅಭಿವೃದ್ಧಿಗೆ ಭದ್ರ ಬುನಾದಿಯೇ ಶಿಕ್ಷಣ. ದೇಶ ಮತ್ತು ವ್ಯಕ್ತಿ ಬೆಳವಣಿಗೆ ಹೊಂದಲು ಶಿಕ್ಷಣವೇ ಮೂಲ ಸಾಧನ. ಇದಕ್ಕೆ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರೇ ನಿದರ್ಶನ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಮನುಕುಲಕ್ಕೆ ಏನೆಲ್ಲಾ ಬೇಕಾಗಿತ್ತೋ, ಅದೆಲ್ಲವನ್ನೂ ಕಾನೂನಿನಡಿ ನೀಡಿದಂತಹ ವ್ಯಕ್ತಿ ಬಾಬಾಸಾಹೇಬ್ ಅಂಬೇಡ್ಕರ್ ಅವರು. ದೇಶದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ ಬರಬೇಕು ಎಂಬ ಆಶಯವನ್ನು ಅಂಬೇಡ್ಕರ್ ಹೊಂದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಪಾಲಿಕೆ ಆಯುಕ್ತ ಯೋಗಾನಂದ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.