ದೇಶ ವೈದಿಕ ಕಬಂಧಬಾಹುಗಳಿಗೆ ಸಿಕ್ಕಿ ನರಳುತ್ತಾ ಇದೆ- ಸಾಹಿತಿ ಜಿ.ವಿ.ಆನಂದಮೂರ್ತಿ

ತುಮಕೂರು : ಇಡೀ ದೇಶ ವೈದಿಕ ಕಬಂಧಬಾಹುಗಳಿಗೆ ಸಿಕ್ಕಿ ನರಳುತ್ತಾ ಇದೆ, ವೈದಿಕರು ತಮ್ಮ ಸಂಸ್ಕೃತಿಯನ್ನು ಶೂದ್ರರು, ಕೆಳಸಮುದಾಯ ಮತ್ತು ದಲಿತರಿಗೆ ವೈದಿಕ ಸಂಸ್ಕøತಿಯ ಬೇಡಿಯನ್ನು ಹಾಕಿ ಆ ಬೇಡಿಗೆ ಬೀಗ ಹಾಕಿದ್ದಾರೆಂದು ಬರಹಗಾರರು ಹಾಗೂ ಸಾಹಿತಿ ನಮ್ಮ ಹಟ್ಟಿ ಪುಸ್ತಕದ ನಿರೂಪಕ ಜಿ.ವಿ.ಆನಂದಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ಪ್ರತಿಪದ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಕೆ.ದೊರೈರಾಜ್ ಅವರ ನಮ್ಮ ಹಟ್ಟಿ ಕೃತಿಯನ್ನು ಎನ್.ಆರ್.ಕಾಲೋನಿ ಹಟ್ಟಿಯ ಶಾಲಾ ಮಕ್ಕಳಿಂದ ಬಿಡುಗಡೆಗೊಳಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಹಟ್ಟಿ ಎಂದರೆ ಜನ-ದನ ವಾಸಿಸುವ ಸ್ಥಾನಿಕ, ಜನ-ದನ ಒಟ್ಟಿಗೆ ವಾಸಿಸುತ್ತಿದ್ದ ಜೀವ ಘಟ್ಟದ ಒಂದು ಜೀವನ, ಹಟ್ಟಿ ಎಂಬುದ ಅಚ್ಚಗನ್ನಡ ಶಬ್ದ, ಅದಕ್ಕೆ ವಿಶಾಲವಾದ ಅರ್ಥವಿದೆ, ಮನುಷ್ಯ ಪ್ರಕೃತಿ ಜೊತೆಯಲ್ಲಿ ಜೀವಿಸುತ್ತಿದ್ದ ಕಾಲಘಟ್ಟದಲ್ಲಿ ಆ ಶಬ್ದ ಉತ್ಪಾತಿಯಾಯಿತು. ಹಟ್ಟಿ ಬಗ್ಗೆ ಕೀಳರಿಮೆ ಬೇಡ, ಹಟ್ಟಿ ಎಂದರೆ ಸಮಬಾಳ್ವೆಯ ಸ್ಥಾನ. ಹಸು-ಕರುಗಳು, ಮನುಷ್ಯ ಒಟ್ಟಿಗೆ ವಾಸಿಸುತ್ತಿದ್ದ ಕಾಲಘಟ್ಟದಲ್ಲಿ ಹಟ್ಟಿ ಹುಟ್ಟಿಕೊಂಡದ್ದು ಎಂದು ಹೇಳಿದರು.

ಇಂದಿಗೂ ಕಾಡುಗೊಲ್ಲರ ಹಟ್ಟಿಗಳನ್ನು ತಮ್ಮ ಸಂಸ್ಕøತಿಯೊಂದಿಗೆ ಉಳಿಸಿಕೊಂಡಿದ್ದಾರೆ, ಅವುಗಳಿಗೆ ಯಾವುದೇ ಹೇಸರು ಇರುವುದಿಲ್ಲ, ಗೊಲ್ಲರ ಹಟ್ಟಿ ಎಂದೇ ಕರೆದುಕೊಂಡು ನಾಗರೀಕ ಸಮಾಜದ ಗೊಡವೆಯೇ ಬೇಡವೆಂದು ಪ್ರತ್ಯೇಕವಾಗಿ ತಮ್ಮದೇಯಾದ ಜೀವನ ಶೈಲಿಯನ್ನು, ಕೌಶಲ್ಯವನ್ನು ಹೊಂದಿದ್ದಾರೆ, ಹಾಗಾಗಿ ಮಾದಿಗರ ಹಟ್ಟಿ ಕೂಡ ಒಂದು ಬುಡಕಟ್ಟು ಸಮಾಜವಾಗಿದೆ ಎಂದು ಹೇಳಿದರು.

ಬಿಡುಗಡೆಗೆ ಅನಂತ ದಾರಿಗಳಿವೆ. ಗುಪ್ತರ ದಾರಿ ಒಂದು, ವಚನಕಾರರ ದಾರಿ ಒಂದು. ನಾರಾಯಣಗುರುಗಳ ದಾರಿ ಒಂದು. ಪೆರಿಯಾರ್ ಅವರ ದಾರಿಯೂ ಒಂದಿದೆ. ಕುವೆಂಪು ಅವರದ್ದು ಒಂದು ದಾರಿಯಿದೆ.
ಅಂಬೇಡ್ಕರ್ ಅವರ ದಾರಿಯೂ ಒಂದಿದೆ. ಗಾಂಧೀಜಿಯವರದ್ದಯ ಒಂದು ಬಿಡುಗಡೆಯ ದಾರಿ ಇದೆ. ಇವೆಲ್ಲವೂ ಕೂಡ ವೈದಿಕ ಸಂಸ್ಕೃತಿಯಿಂದ ಬಿಡುಗಡೆಗೊಳ್ಳುವ ಅನಂತ ಮಾರ್ಗಗಳು. ದಾರಿಗಳು ಅನಂತ. ಆದರ ಉದ್ದೇಶ ಒಂದೇ ಆಗಿದೆ. ಅದೆಂದರೆ ವೈದಿಕ ಸಂಸ್ಕೃತಿಯ ಕಬಂಧ ಬಾಹುಗಳಿಂದ ಬಿಡುಗಡೆಗೊಳ್ಳುವಂತಹದ್ದಾಗಿದೆ. ಹಾಗೆ ಬಿಡುಗಡೆಗೊಳ್ಳಲು ಬೇಕಾದ ಹತಾರಗಳು ಹೊರ ಜಗತ್ತಿನಲ್ಲಿ ಇಲ್ಲ. ನಮ್ಮೊಳಗೆ ಇದಾವೆ ಎಂದರು.

ನಮ್ಮ ಹಟ್ಟಿ ಹೊರ ಜಗತ್ತಿಗೆ ಕಾಣದ ದೊಡ್ಡ ಲೋಕವನ್ನು ಹೊಂದಿದೆ. ಸ್ವಾಭಿಮಾನದ ಜಗತ್ತು. ಹಟ್ಟಿಯಲ್ಲಿ ಎಲ್ಲವೂ ಇದೆ. ದುಡಿಮೆಗಾರರು, ಕುಶಲಕರ್ಮಿಗಳು ಇದ್ದಾರೆ. ಬೇರೆ ಬೇರೆಯವರೂ ಇದ್ದಾರೆ. ಆದರೆ ಹಟ್ಟಿ ಒಳಗೆ ಇರುವಂತ ಜಗತ್ತು ಇದೆಯಲ್ಲ ಅದು ಕ್ರಿಯಾಶೀಲವಾಗಿದೆ. ಆರೋಗ್ಯಕರವಾಗಿದೆ. ಹಟ್ಟಿ ತನ್ನೊಳಗಿನ ವೈವಿಧ್ಯಮಯವಾದ ಬದುಕನ್ನು ಈ ಕೃತಿಯ ಮೂಲಕ ಅದು ನಮ್ಮ ಮುಂದೆ ತೆರೆದಿಟ್ಟಿದೆ. ಇದು ದೊಡ್ಡ ಪ್ರಯತ್ನ. ನಿಗೂಢವಾಗಿದ್ದ ಲೋಕ ಅನಾವರಣಗೊಂಡಿದೆ ಎಂದು ತಿಳಿಸಿದರು.

‘ನಮ್ಮ ಹಟ್ಟಿ’ ಒಬ್ಬರ ಕಥೆಯಲ್ಲ. ಇದು ಇಡೀ ಹಟ್ಟಿಯ ಆಟೋಬಯಾಗ್ರಫಿ :

ಪುಸ್ತಕ ಕುರಿತು ಮಾತನಾಡಿದ ವಿಮರ್ಶಖ ನಟರಾಜು ಬೂದಾಳು ಅವರು, ಈ ಪುಸ್ತಕ ಓದಿ ಮಾತನಾಡುವ ಮೊದಲು ಒಂದು ಸಣ್ಣ ಕೇವಿಯಟ್ ಹಾಕುತ್ತೇನೆ. ಈ ಪುಸ್ತಕ ನನಗೆ ದಕ್ಕಿದ್ದು ಹಿಂಗೆ ಎಂದು ಮಾತ್ರ ಹೇಳುವವನು ನಾನು. ಬುದ್ದನ ಬಗ್ಗೆ, ಬುದ್ದನ ತಾತ್ವಿಕತೆ ಬಗ್ಗೆ ಯಾರಾದ್ರೂ ಮಾತಾಡಲಿಕ್ಕೆ, ಬರೆಯಲಿಕ್ಕೆ ಹೋದ್ರೆ ಅವರಿಗೊಂದು ಕಂಡಿಷನ್. ಅದು ಏನು ಅಂದ್ರೆ ಬುದ್ದ ಹೇಳಿದ್ದೇನು? ಎಂದು ಹೇಳಬೇಡಿ, ಬುದ್ದ ಹೇಳಿದ್ದನ್ನು ನಾನು ಹೆಂಗೆ ಕೇಳಿಸ್ಕಂಡೆ ಮಾತ್ರ ಹೇಳಿ. ಯಾರು ಅಲ್ಲಿರುವ ಹಾಗೆ ನೋಡುವುದಿಲ್ಲ. ಕೇಳಿದ್ದನ್ನೇ ಕೇಳಿಸಿಕೊಳ್ಳುವುದಿಲ್ಲ. ಹಾಗಾಗಿ ಈ ಲೋಕವನ್ನು ಹೇಗಿದೆಯೋ ಹಾಗೆ ನೋಡಲಿಕ್ಕೆ ಆಗುವುದಿಲ್ಲ. ಆದರೆ ಬುದ್ದಿನಿಗೆ ಮಾತ್ರ ಲೋಕ ಇರುವ ಹಾಗೆಯೇ ನೋಡಲು ಸಾಧ್ಯವಾಯಿತು. ಇನ್ನಾರಿಗೂ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

‘ನಮ್ಮ ಹಟ್ಟಿ’ ಒಬ್ಬರ ಕಥೆಯಲ್ಲ. ಇದು ಇಡೀ ಹಟ್ಟಿಯ ಆಟೋಬಯಾಗ್ರಫಿ. ಇದು ಆತ್ಮಕಥೆ ಅಲ್ಲ. ಯಾಕೆಂದ್ರೆ ಆತ್ಮ ಮತ್ತು ಕಥೆ ಎಂಬ ಎರಡು ಪದಗಳು ಭಾರತವನ್ನೇ ಬರ್ಬಾದ್ ಮಾಡಿಬಿಟ್ಟಿವೆ. ಹಾಗಾಗಿ ಕನ್ನಡದಲ್ಲಿ ಆಟೋಬಯಾಗ್ರಫಿಗೆ ಸಮಾನವಾದ ಬೇರೆ ಪದ ಹುಡುಕಿಕೊಳ್ಳಬೇಕು. ಅಲ್ಲಿಯವರೆಗೂ ಆಟೋಬಯಾಗ್ರಫಿ ಅನ್ನುವ ಪದವೇ ಬಳಸಿಕೊಳ್ಳೋಣ. ಯಾವ ಕಾರಣಕ್ಕೂ ಈ ಆತ್ಮವೂ ಬೇಡ, ಈ ಕಥೆಯೂ ಬೇಡ. ಯಾಕೆ ಅಂದರೆ, ಇಡೀ ಭಾರತದ ಬದುಕನ್ನು ನಿಯಂತ್ರಿಸಲಿಕ್ಕೆ ಒಂದಷ್ಟು ಪುಡಿ ಕಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಅದು ನಾವು ಯಾವುದೋ ಒಂದು ಕೃತಿಯನ್ನು ಆರೋಪಿಸಿ ಮನುಸ್ಮೃತಿಯನ್ನು ಕುರಿತು ಆರೋಪಿಸಿ ಮಾತನಾಡುವುದು ಬಹಳಷ್ಟು ಕೇಳಿದ್ದೇವೆ. ಆದರೆ ಮನುಸ್ಮೃತಿಗಿಂತ ಘೋರವಾದ ಇನ್ನೊಂದು ಪುಸ್ತಕ ನಮ್ಮ ಮನೋಸ್ಮೃತಿ. ನಮ್ಮ ಮನೋಸ್ಮೃತಿಯ ಮೂಲೆಯಲ್ಲಿರುವ ಈ ಕೇಡಿನ ಕತ್ತಲು ಇದೆಯಲ್ಲ, ಈ ಕತ್ತಲನ್ನು ಹಚ್ಚಿಡಲಿಕ್ಕೆ ಈ ಪುಸ್ತಕ ಸಹಕಾರಿಯಾಗಿದೆ ಎಂದು ವಿಮರ್ಶಕ ನಟರಾಜ್ ಬೂದಾಳ್ ಹೇಳಿದರು.

ಕತ್ತಲನ್ನು ನಿಭಾಯಿಸಲು, ನಿರ್ವಹಿಸಲು ಇಂಥಾದ್ದೊಂದು ಪುಸ್ತಕ ಅಗತ್ಯವಿದೆ. ನಮ್ಮ ಈವರೆಗಿನ ಅಕ್ಷರ ಮತ್ತು ಅಕ್ಷರಗಳನ್ನು ಬಳಸಿ ನಡೆಸೋ ಓದಿನ ಹತಾರಗಳಿವೆಯಲ್ಲ, ಆ ಹತಾರಗಳನ್ನು ಬಳಸಿ ಈ ಪುಸ್ತಕವನ್ನು ಓದುವುದು ಕಷ್ಟ. ಸಾಧ್ಯವಿಲ್ಲ ಅನ್ನಿಸುತ್ತದೆ. ಯಾಕೆ ಅಂದ್ರೆ ಅದೇ ಅಕ್ಷರ ಅಲ್ಲವೇ? ಅದೇ ಪುಸ್ತಕ, ಅದೇ ಭಾಷೆಯಲ್ಲಿ ಬಂದಿರೋ ಪುಸ್ತಕ ಓದೋಕೆ ಯಾಕೆ ಆಗಲ್ಲ ಅಂದ್ರೆ, ಇದರ ಅನುಭವ ಲೋಕ ಇದೆಯಲ್ಲ, ಅದನ್ನು ದಕ್ಕಿಸಿಕೊಳ್ಳದವರಿಗೆ ಈ ಪುಸ್ತಕದ ದನಿ ಮತ್ತು ಅದರ ಅಂತರಂಗ ಅರಿಯುವುದು ತುಂಬಾ ಕಷ್ಟ ಎಂದರು.

ಜಾತಿ ಒಂದು ಭ್ರಮಾತ್ಮಕವಾದ ಕಲ್ಪನೆ. ಆದರೆ ಗಂಭೀರವಾದ ವಾಸ್ತವವನ್ನು ಉಂಟು ಮಾಡುತ್ತದೆ. ನಮ್ಮ ಹಟ್ಟಿ ಕೃತಿ ಒಂದು ರೀತಿಯಲ್ಲಿ ಎಲ್ಲರ ಕಥೆ. ಈ ಎಲ್ಲರ ಕಥೆಯನ್ನು ಮುಂದಿನ ಪೀಳಿಗೆಯ ಮಕ್ಕಳು ಬಿಡುಗಡೆ ಮಾಡಿದ್ದು ಬಹಳ ಸಾಂಕೇತಿಕವಾಗಿತ್ತು ಮತ್ತು ಸರಿಯಾದದ್ದು ಎಂದು ಹೇಳಿದರು.

ಈ ಪುಸ್ತಕದಲ್ಲಿ ಆ ಹಟ್ಟಿಯನ್ನು ಅಲ್ಲಿ ಇರುವ ಹಾಗೆಯೇ ನೋಡಲಾಗಿದೆ. ನನಗೆ ಈ ಪುಸ್ತಕದ ಉದ್ದಕ್ಕೂ ಅದೇ ಕಾಣಿಸಿದ್ದು, ಈ ಹಟ್ಟಿಯಲ್ಲಿ ಇಂಥಾದ್ದೊಂದು ಬೆಳಕು ಹುಟ್ಟಿತ್ತಲ್ಲ. ಅದು ದೊರೈರಾಜ್ ಹಚ್ಚಿದ ಬೆಳಕಲ್ಲ. ಅದು ಒಂದು ವಿವೇಕ. ಈ ಹಟ್ಟಿಯ ಬಹಳ ಮುಖ್ಯವಾದ ಲಕ್ಷಣಗಳನ್ನು ಈ ಪುಸ್ತಕದ ಉದ್ದಕ್ಕೂ ಪಟ್ಟಿ ಮಾಡುತ್ತದೆ. ಅದೇನು ಅಂದರೆ, ಈ ಹಟ್ಟಿಯ ಜನ ಬೇರೆ ಯಾರನ್ನೂ ಎಂದು ಅಪಮಾನಿಸಿದವರಲ್ಲ, ಎಂದೂ ಯಾರ ಬದುಕನ್ನು ಕಿತ್ತುಕೊಂಡು ಬಾಳಿದವರಲ್ಲ. ಎಂದೂ ಯಾರನ್ನೂ ತುಳಿದವರಲ್ಲ. ಎಂದೂ ಯಾರನ್ನೂ ಹೊರಗೆ ನಿಲ್ಲಿಸಿದವರಲ್ಲ, ತಮ್ಮದಲ್ಲದ್ದನ್ನು ಪಡೆದುಕೊಂಡವರಲ್ಲ. ಕಷ್ಟಪಟ್ಟು ದುಡಿದವರು. ಒಂದೇ ಹೊತ್ತು ತಿಂದು ಮಲಗಿದವರು. ಯಾರನ್ನೂ ನೋಯಿಸಿದವರಲ್ಲ. ಈ ದೇಶದಲ್ಲಿ ಇμÉ್ಟೂಂದು ಸಂಕಟ, ಇಷ್ಟೊಂದು ಅಪಮಾನ, ಇಷ್ಟೊಂದು ಅಸ್ಪೃಶ್ಯತೆ ಇಷ್ಟೊಂದೆಲ್ಲ ಕೇಳಿದರಲ್ಲ ಹೇಗೆ ಸಾಧ್ಯ? ಗಾಂಧೀಜಿ ಬಂದಿದ್ದರು ಹಟ್ಟಿಗೆ. ಇದು ಕೂಡ ತುಮಕೂರಿನ ಮನೋಸ್ಮೃತಿಯಲ್ಲಿ ಉಳಿದಿಲ್ಲ. ಜಯಸಿಂಹರಾವ್ ಒಬ್ಬರಿದ್ದರು. ಅವರ ಎರಡು ದಿನಕ್ಕೊಮ್ಮೆ ಹಟ್ಟಿಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಅವರೊಬ್ಬ ದೊಡ್ಡ ಮನುಷ್ಯರು. ಇದು ಈ ಪುಸ್ತಕದಲ್ಲಿ ದಾಖಲಾಗಿದೆ.

ಈ ದೇಶದಲ್ಲಿ ಎಥೇಚ್ಚವಾದ ಅಸಮಾನತೆ, ಅಸ್ಪೃಶ್ಯತೆ, ಲಿಂಗತಾರತಮ್ಯ ಎಲ್ಲವೂ ಇದೆ. ಹೊರಗೆ ನಿಲ್ಲಿಸುವಿಕೆ ಇದೆಯಲ್ಲ, ಅದು ತುಂಬಿ ಹೋಗಿದೆ. ವೈದಿಕ ಆವರಣವನ್ನು ಬಿಟ್ಟರೆ, ಉಳಿದವರೆಲ್ಲರೂ ಒಂದಲ್ಲ, ಒಂದು ರೀತಿಯಲ್ಲಿ ಹೊರಗೆ ನಿಲ್ಲಿಸಲ್ಪಟ್ಟವರು. ಇಡಿಯಾಗಿ ಹೆಣ್ಣು ಮಕ್ಕಳು ಅಸಮಾನತೆಯ ಕಾರಣಕ್ಕೋ ಹೊರಗೆ ನಿಲ್ಲಿಸಲ್ಪಟ್ಟವರು. ಬೇರೆ ಬೇರೆ ಜಾತಿಯ ಜನ, ಬೇರೆ ಬೇರೆಯ ಆವರಣದಲ್ಲಿ ಹೊರಗೆ ನಿಲ್ಲಿಸಲ್ಪಟ್ಟವರು. ಈ ಕ್ರಿಯೆ ಅಷ್ಟೊಂದು ಮುಖ್ಯ ಅಂದರೆ, ಇಡಿಯ ಹಟ್ಟಿಯೇ ಹಾಗೆ ಇದೆ.

ಕಾಲೋನಿ ಎಂಬ ಪದವನ್ನು ತುಂಬ ಸರಳವಾಗಿ ಬಳಸುತ್ತೇವೆ. ಆದರೆ ಅದು ಅಷ್ಟು ಸರಳವಾದ ಪದವಲ್ಲ. ನಮ್ಮ ಹಟ್ಟಿ ಮಾತ್ರ ಕಾಲೋನಿ ಅಂತ ಭಾವಿಸಬೇಕಾಗಿಲ್ಲ. ಈ ಕಾಲೋನಿ ಕಲೋನೈಜೇಷನ್,. ನಾವು ಸಮಾನವಾಗಿ ಬದುಕಲಿಕ್ಕೆ ಬಿಡುವಂತಹದ್ದಲ್ಲ ಈ ಕಾಲೋನಿ. ಬ್ರಿಟೀಷರಿಗೆ ಇಡೀ ಭಾರತವೇ ಕಾಲೋನಿಯಾಗಿತ್ತು. ತುಮಕೂರಿಗೆ ನಮ್ಮ ಹಟ್ಟಿ ಕಾಲೋನಿ, ಇಡೀ ಮಹಿಳೆಯರು ಗಂಡಸರಿಗೆ ಕಾಲೋನಿ. ಈ ಕಾಲೋನಿಯ ಪ್ರಕ್ರಿಯೆ ಜಗತ್ತಿನ ಎಲ್ಲಾ ಪ್ರದೇಶಗಳಲ್ಲೂ ಇದೆ. ಅಸ್ಪೃಶ್ಯತೆ ಕಾಲೋನಿಯ ಪ್ರತೀಕ. ಈ ಕಾಲೋನಿ ಅನ್ನುವುದ ದೇಶದ 70ರಷ್ಟು ಭಾಗಕ್ಕೆ ಅನ್ವಯಿಸುತ್ತದೆ. ಶೂದ್ರ, ದಲಿತ, ಮಹಿಳೆಯರೆಲ್ಲರೂ ಕಾಲೋನೈಜ್ಡ್ ಆದವರು. ಕಾಲೋನಿ ಆದವರು. ನಮ್ಮನ್ನು ಆಳುತ್ತಿರುವ ಕಾಲೋನಿಯ ಯಜಮಾನರು ಇದ್ದಾರಲ್ಲ, ಅವರನ್ನು ನಾವು ಸರಿಯಾಗಿ ಗುರುತಿಸಿಕೊಳ್ಳದೇ ಹೋದರೆ, ಅಸಮಾನತೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.

ವಿಶ್ವದಲ್ಲಿ ಹೊಸ ಜನರೇಷನ್ ಬರುತ್ತಿದೆ. ಝನ್ ಜಿ. ಮುಂದಿನ ಜನರೇಷನ್ ಬಗ್ಗೆ ಎಷ್ಟೋ ತಕರಾರುಗಳಿದ್ದರು ಹೊಸ ಜನರೇಷನ್ ಧರ್ಮದ ಬಗ್ಗೆ ತೋರಿಸುತ್ತಿರುವ ತಿರಸ್ಕಾರ ಇದೆಯಲ್ಲ, ಅದು ದೊಡ್ಡ ಆಶಾಕಿರಣವಾಗಿ ಕಂಡು ಬರುತ್ತಿದೆ. ನಾನು ನಾನ್ ರಿಲೀಜಿಯನ್ ಆಗಿ ಬದುಕತ್ತೇನೆ ಎಂದು ಡಿಕ್ಲೇರ್ ಮಾಡಿಕೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದರು.

ಡಾ.ಎಸ್. ನಟರಾಜ ಬೂದಾಳ್, ಚಿಂತಕ ಕೆ.ದೊರೈರಾಜ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಸ್.ಮೂರ್ತಿ, ಲೇಖಕಿ ಬಾ.ಹ.ರಮಾಕುಮಾರಿ, ಹೋರಾಟಗಾರ ಸಯ್ಯೀದ್ ಮುಜೀಬ್, ರೇಷ್ಮೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ಭಾಗವಹಿಸಿದ್ದರು.

ದಲಿತ ಮುಖಂಡ ಹೇಮಾವತಿ ನರಸಿಂಹಯ್ಯ ಪ್ರಾಸ್ತಾವಿಕ ಮಾತನಾಡಿದರು. ಎಂ.ಸಿ.ನರಸಿಂಹಮೂರ್ತಿ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *