ತುಮಕೂರು: ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿರುವ ಮಾದಿಗ ಸಮುದಾಯದ ಕುಟುಂಬಕ್ಕೆ ಸಾಂತ್ವಾನ ಹೇಳುವ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಮಾಡಿಲ್ಲ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ಧಗಂಗಪ್ಪ ಸ್ವಾಮೀಜಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿ, ಪೋಲೇನಹಳ್ಳಿ . ಗ್ರಾಮದಲ್ಲಿ ನೀರಿನ ಬಿಲ್ ಕಟ್ಟಿ ಎಂದು ಗಲಾಟೆ ಮಾಡಿ ನೀರಿನ ಪೈಪ್ ಕಿತ್ತುಹಾಕಿ ಇದೇ ಊರಿನ ರಾಮಕೃಷ್ಣ (ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್) ಆನಂದನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅದನ್ನು ಹೇಳಲು ಹೋದ ಆನಂದನಿಗೆ ಚಪ್ಪಲಿಯಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದರು.
ಆನಂದ ಅಲ್ಲಿಂದ ಮನೆಗೆ ಹೋಗಬೇಕಾದರೆ ರಾಮಕೃಷ್ಣಪ್ಪ ಅವರ ಮಗ ನಾಗೇಶ ಬುಲೇರೋ ವಾಹನದಲ್ಲಿ ಗುದ್ದಿದ್ದು, ಕೆಳಗೆ ಬಿದ್ದ ಆನಂದ ಬದುಕಿರುವುದನ್ನು ನೋಡಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ನಂತರ ಕೊಡಿಗೇನಹಳ್ಳಿ ಠಾಣೆಗೆ ಹೋಗಿ ಅಪಘಾತ ಮಾಡಿರುವುದಾಗಿ ಶರಣಾಗಿದ್ದಾನೆ. ಹಾಡುಹಗಲಲ್ಲೇ ಪ್ರಕರಣ ನಡೆದಿದ್ದು, ಹೊಟೇಲ್, ಅಂಗಡಿ ತೆರದಿದ್ದರೂ ಸಹ ಸಾಕ್ಷಿ ಹೇಳಲು ಮುಂದೆ ಬಂದಿಲ್ಲ, ಸ್ಪೃಶ್ಯ ಸಮುದಾಯಗಳು ಊರಿನಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ಪಾವಗಡ ತಾಲ್ಲೂಕು ನಿಡಗಲ್ಲು ಹೋಬಳಿ, ಬೆಳ್ಳಿಬಟ್ಲು ಗ್ರಾಮದಲ್ಲಿ ಚಿಕ್ಕಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿರುವಾಗ ವಾಲ್ಮೀಕಿ ಎಂಬ ಯುವಕ ಗಾಡಿಯನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಹನುಮಂತರಾಯಪ್ಪ ಎಂಬುವರು ಗಾಡಿಯನ್ನು ನಿಧಾನಕ್ಕೆ ಓಡಿಸು ಮಕ್ಕಳಿದ್ದಾರೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಮಾದಿಗರ ಮಕ್ಕಳು ನಾನು ಬರುವಾಗ ರಸ್ತೆಯಲ್ಲಿ ಆಟವಾಡಬಾರದು. ನಿನಗೆಷ್ಟು ಧೈರ್ಯ. ನನಗೆ ಬುದ್ದಿ ಹೇಳುತ್ತೀಯ ಎಂದು ವಾಲ್ಮೀಕಿ ಎಂಬ ಯುವಕನು ಹನುಮಂತರಾಯಪ್ಪನನ್ನು ದೊಣ್ಣೆಯಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಎಂದರು.
ನಂತರ ರಾತ್ರಿ ಮನೆಗೆ ಬಂದು ಮನೆ ಒಳಗೆ ಮೊಮ್ಮಕ್ಕಳು ಮತ್ತು ಮಕ್ಕಳು ಮತ್ತು ಅಳಿಯನ ಮುಂದೆ ಮತ್ತೆ ಹಿಗ್ಗಾ ಮುಗ್ಗ ತಳಿಸಿ ಕೊಲೆ ಮಾಡಿರುತ್ತಾನೆ. ಹನುಮಂತರಾಯಪ್ಪನ ಮನೆಯವರು ಊರಿನಲ್ಲಿ ತಮಟೆಯನ್ನು ಹೊಡೆದುಕೊಂಡು ಚಾಕರಿ ಮಾಡಿಕೊಂಡು ಕಡುಬಡತನದಿಂದ ಬದುಕುತ್ತಿದ್ದಾರೆ. ಅವರನ್ನು ಮನೆ ಖಾಲಿ ಮಾಡಿ, ಇಲ್ಲಾ ನಿಮಗೂ ನಿಮ್ಮ ಮಕ್ಕಳಿಗೂ ಊರಲ್ಲಿ ಇರಲು ಬಿಡುವುದಿಲ್ಲ, ಹನುಮಂತರಾಯಪ್ಪ ಕುಡಿದು ಸತ್ತಿದ್ದಾನೆ ಎಂದು ಹೇಳಿ ಎಂದು ಬೆದರಿಕೆ ಹಾಕಿದ್ದಾನೆ. ಇದರಲ್ಲೂ ಕೂಡ ಪೆÇಲೀಸ್‍ನವರು ಸಾಕ್ಷಿ ಆಧಾರಗಳನ್ನು ಸಂಗ್ರಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಆರೋಪಿಯನ್ನು ಇನ್ನೂ ಕೂಡ ಬಂಧಿಸಿಲ್ಲ ಎಂದು ಸಿದ್ಧಗಂಗಪ್ಪ ಸ್ವಾಮೀಜಿ ಒತ್ತಾಯಿಸಿದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಸತ್ಯಪ್ಪ ಮಾತನಾಡಿ ಘಟನೆ ನಡೆದು ಇಷ್ಟು ದಿನಗಳಾದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಪೆÇೀಲೀಸ್‍ರವರಾಗಲೀ, ಸ್ಥಳಕ್ಕೆ ಬೇಟಿನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳುವುದಾಗಲೀ, ರಕ್ಷಣೆ ಕೊಡುವುದಾಗಲೀ, ಧೈರ್ಯ ತುಂಬುದಾಗಲೀ, ಯಾವುದನ್ನೂ ಮಾಡಿರುವುದಿಲ್ಲ. ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಜರೂರಾಗಿ ಕೊಡಿಸಿಕೊಡಬೇಕು, ನೊಂದ ಕುಟುಂಬಗಳಿಗೆ ಸರ್ಕಾರವು ತಕ್ಷಣ 5-00 ಎಕರೆ ಜಮೀನು ಹಾಗೂ 25 ಲಕ್ಷ ಹಣ ಪರಿಹಾರ ಅವರ ಅವಲಂಬಿತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಹಾಗೂ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಪ್ರಧಾನ ಸಂಚಾಲಕ ಕೇಶವ ಮೂರ್ತಿ ಮಾತನಾಡಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಪರಿಶಿಷ್ಟ ಸ್ಪುರ್ಶ್ಯ ಸಮುದಾಯಗಳು ಪಾಳೆಗಾರಿಕೆ ಮತ್ತು ಗೂಂಡಾ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ಕಾನೂನು ವ್ಯವಸ್ಥೆ ತುಮಕೂರು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಆದ್ದರಿಂದ ಸ್ಥಳೀಯ ಪೊಲೀಸರಿಂದ ಆಗಿರುವ ನಿರ್ಲಕ್ಷದೋರಣೆಯನ್ನು ಪರಿಗಣಿಸಿ ಉನ್ನತ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಮಿತಿಯನ್ನು ರಚಿಸಿ ಅವರ ಮೂಲಕ ಗಂಭೀರವಾಗಿ ಸಾಕ್ಷಿ ಆದಾರಗಳನ್ನು ಸಂಗ್ರಹಿಸಿ ಉಗ್ರಕ್ರಮ ಕೈಗೊಂಡು, ಪಾಳೆಗಾರಿಕೆಯನ್ನು ಮಟ್ಟಹಾಕಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮಧುಗಿರಿಯಲ್ಲಿ ಸೆ.24ರಂದು ಮಾದಿಗರ ಸ್ವಾಭಿಮಾನ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳು, ಮುಖಂಡರುಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು ಮಾನವೀಯತೆಯ ಮೌಲ್ಯಗಳನ್ನು ಸಂವಿಧಾನವನ್ನು ರಕ್ಷಿಸಲು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ನೌಕರರ ಒಕ್ಕೂಟದ ರಾಮಣ್ಣ, ಗೋವಿಂದಪ್ಪ, ರಾಜಣ್ಣ ಸೇರಿದಂತೆ ಇತರರಿದ್ದರು.