ತುಮಕೂರು :ರಾಜ್ಯದಾದ್ಯಂತ ಇರುವ ಹಾಗೆಯೇ ತುಮಕೂರು ಜಿಲ್ಲೆಯ ಬರ ಸ್ಥಿತಿಯೂ ಭೀಕರವಾಗಿದ್ದು ಎಲ್ಲ ಹತ್ತು ತಾಲ್ಲೂಕುಗಳಲ್ಲಿಯೂ ರೈತರ ಸ್ಥಿತಿ ಗಂಭೀರವಾಗಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶಗೌಡರು ಆತಂಕ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಮತ್ತು ಅದನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯಗಳನ್ನು ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ರಾಜ್ಯದ ಭೀಕರ ಬರದ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ತುಮಕೂರು ಜಿಲ್ಲೆಯಾದ್ಯಂತ ಶೇಕಡ 70 ರಷ್ಟು ಬೆಳೆ ನಾಶವಾಗಿದೆ. ರಾಗಿ, ನೆಲಗಡಲೆ, ಗೋವಿನ ಜೋಳ, ಜೋಳ, ಕಡಲೆ, ಅವರೆ, ಸಾಮೆ ಇತ್ಯಾದಿ ಎಲ್ಲ ಬೆಳೆಯೂ ಕೈ ಕೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 1.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಮಳೆಯಾಶ್ರಿತ ಬೆಳೆಗೆ ಹಾನಿಯಾಗಿದ್ದು ಅಂದಾಜು 1,086 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸುಮಾರು 248 ಕೋಟಿ ರೂಪಾಯಿ ಪರಿಹಾರ ಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಇದುವರೆಗೆ ಒಂದು ಪೈಸೆಯೂ ಪರಿಹಾರ ಬಂದಿಲ್ಲ. ಸಕಾಲದಲ್ಲಿ ನೆರವು ಸಿಗದೇ ಇದ್ದರೆ ಏನು ಪ್ರಯೋಜನ? ನಾವು ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ಆಗುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ʻನಮ್ಮದು ಕಲ್ಪತರು ನಾಡು ಎಂದು ಹೆಸರಾದ ಜಿಲ್ಲೆ. ಕೊಬ್ಬರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಒಂದು ಕ್ವಿಂಟಲ್ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ 16,500 ರೂಪಾಯಿ ಖರ್ಚು ಬರುತ್ತದೆ. ಆದರೆ, ಕೊಬ್ಬರಿ ಬೆಲೆ ಕೇವಲ 8,000 ರೂಪಾಯಿ ಆಸುಪಾಸು ಇದೆ. ಹೀಗಾಗಿ ಮಾಡಿದ ಖರ್ಚು ಕೂಡ ಕೈಗೆ ಬರದಂಥ ಸ್ಥಿತಿಯಿದೆʼ ಎಂದು ಸುರೇಶಗೌಡರು ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ಬಜೆಟ್ ಮೇಲಿನ ಚರ್ಚೆಯಲ್ಲಿ ಒಂದು ಕ್ವಿಂಟಲ್ ಕೊಬ್ಬರಿಗೆ 1,300 ರೂಪಾಯಿ ಬೆಂಬಲ ಬೆಲೆ ಕೊಡುವುದಾಗಿ ಘೊಷಿಸಿದ್ದರು. ಅದರಲ್ಲಿಯೂ ಒಂದು ಪೈಸೆ ಬಿಡುಗಡೆಯಾಗಿಲ್ಲ. ಆ ಹಣವನ್ನು ತಕ್ಷಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಆದೇಶ ಮಾಡಿ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವು ಬರ ಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡುವಲ್ಲಿ ಬೇಕೆಂದೇ ತಡ ಮಾಡಿತು. ಬೇಗ ಪಟ್ಟಿ ಬಿಡುಗಡೆ ಮಾಡಿದ್ದರೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಬೇಕಿತ್ತು. ತಾನೇ ತಡವಾಗಿ ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಣೆ ಮಾಡಿ ಪರಿಹಾರ ಬರುವುದು ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ತನ್ನ ವೈಫಲ್ಯಗಳನ್ನು ಮುಚ್ಚಿ ಇಟ್ಟುಕೊಳ್ಳುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಜಾತಿ ಗಣತಿ ಪ್ರಸ್ತಾಪ ಮಾಡಿತು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಲು ಹೋಗಿ ಇದೇ ಸಿದ್ದರಾಮಯ್ಯನವರು ಕೈ ಸುಟ್ಟುಕೊಂಡಿದ್ದಾರೆ. ಅದರಿಂದ ಅವರು ಪಾಠ ಕಲಿಯಬೇಕು. ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಈಗಾಗಲೇ ಜನರು ಹುಸಿ ಗ್ಯಾರಂಟಿ ಯೋಜನೆಗಳಿಂದ ಬೇಸತ್ತಿದ್ದು ಈ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಅವರು ತಾಕೀತು ಮಾಡಿದ್ದಾರೆ.
ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೂ ಅನುದಾನಕ್ಕೆ ಆಗ್ರಹ :
ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2,000 ರೂಪಾಯಿಗಳಂತೆ ಕಾಣಿಕೆ ಸಲ್ಲಿಸಿದ್ದನ್ನು ಸ್ವಾಗತಿಸಿದ ಸುರೇಶಗೌಡರು ರಾಜ್ಯದಲ್ಲಿನ ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ ಮುಂತಾದ ದೇವಸ್ಥಾನಗಳಿಗೂ ಇದೇ ರೀತಿ ಕಾಣಿಕೆ ಸಲ್ಲಿಸಬೇಕು, ದೇವರ ವಿಚಾರದಲ್ಲಿ ಸರ್ಕಾರ ಭೇದಭಾವ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ತುಮಕೂರು ಜಿಲ್ಲೆ ಗೊರವನಹಳ್ಳಿಯ ಪ್ರಸಿದ್ಧ ಲಕ್ಷ್ಮೀ ದೇವಸ್ಥಾನಕ್ಕೂ ಇದೇ ರೀತಿ ತಿಂಗಳಿಗೆ 2,000 ರೂಪಾಯಿಗಳ ಕಾಣಿಕೆ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.