ನಮ್ಮ ನಡುವೆ ಇರುವ ಚರಿತ್ರೆ ಅರ್ಧ ಸತ್ಯ-ಪ್ರೊ.ಹಿ.ಚಿ.ಬೋರಲಿಂಗಯ್ಯ

ತುಮಕೂರು: ಈವರೆಗಿನ ಚರಿತ್ರೆಗಳೆಲ್ಲಾ ಸಂಪೂರ್ಣ ಸತ್ಯ ಎಂದು ಭಾವಿಸಬೇಕಿಲ್ಲ. ಅವೆಲ್ಲ ಅರ್ಧ ಸತ್ಯ ಎಂದೇ ತಿಳಿಯಬೇಕು. ಚರಿತ್ರೆಯನ್ನು ಬರೆದವರೆಲ್ಲಾ ಯಾರದೊ ಹಂಗಿನಲ್ಲಿ ಬದುಕಿ ಅವರ ಅಪೇಕ್ಷೆಯಂತೆ ಬರೆದಿರಬಹುದು. ಸ್ವತಂತ್ರವಾಗಿ ಬರೆದಿರಬಹುದಾದ ಸಂದರ್ಭವೂ ಅದಲ್ಲ. ಯಾರದೋ ಚರಿತ್ರೆಯನ್ನು ಬರೆದು ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಬರೆಯಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ನಡುವೆ ಇರುವ ಚರಿತ್ರೆ ಅರ್ಧ ಸತ್ಯವಾಗಿದ್ದು, ಈಗ ಪೂರ್ಣ ಸತ್ಯದ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಎಂದು ಹೇಳಿದರು.

ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಡಾ.ಅಮ್ಮಸಂದ್ರ ಸುರೇಶ್ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಸಮುದಾಯದ ಸಂಸ್ಕøತಿ ಅಳಿವಿನ ಅಂಚಿನಲ್ಲಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತಿಸಬೇಕಿದೆ, ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಬರವಣಿಗೆಗಳು ಹೆಚ್ಚಬೇಕಿದೆ ಸಲಹೆ ನೀಡಿದರು.

ನಮ್ಮ ಸಂಸ್ಕøತಿ ಮತ್ತು ಪರಂಪರೆಯ ಕೊಡುಗೆಗೆ ಹಳ್ಳಿಗಳು ಮಹತ್ತರ ಪಾತ್ರ ನೀಡಿವೆ. ಆದರೆ ಹಳ್ಳಿಗಳಲ್ಲಿ ಈಗ ಸಂಸ್ಕøತಿ ಮರೆಯಾಗುತ್ತಿದೆ. ಇಡೀ ಸಮಾಜ ಮತ್ತು ರಾಜಕಾರಣ ವ್ಯವಸ್ಥೆ ಅತ್ಯಂತ ಸಂಕುಚಿತ ಮತ್ತು ಸಂಕೀರ್ಣವಾಗುತ್ತಿದೆ. ಸಂಕ್ರಮಣದ ಸ್ಥಿತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಜನಸಾಮಾನ್ಯರ ಸ್ಥಿತಿಗತಿಗಳ ಬಗ್ಗೆ ಚಿಂತಿಸುವವರು ಕಡಿಮೆಯಾಗುತ್ತಿದ್ದಾರೆ. ಗ್ರಾಮೀಣ ಸಮುದಾಯದ ಕಲೆಗಳು ಮೂಲೆಗುಂಪಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಗಳ ಜ್ಞಾನವನ್ನು ಪುನರ್ ಸ್ಥಾಪಿಸುವ ಮಹತ್ವದ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.

ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಮನುಷ್ಯನ ಬದುಕು ಮತ್ತು ಸಮಾಜವನ್ನು ಹತ್ತಿರದಿಂದ ನೋಡುವ ದೃಷ್ಟಿಕೋನದ ಬರವಣಿಗೆಗಳು ಡಾ.ಅಮ್ಮಸಂದ್ರ ಸುರೇಶ್ ಅವರಿಂದ ಹೊರಬರುತ್ತಿರುವುದು ಅತ್ಯಂತ ಶ್ಲಾಘನೀಯ. ಬರಹಗಾರರಿಗೆ ತಮ್ಮ ಸುತ್ತಲಿನ ಸಂದರ್ಭಗಳು ಪ್ರೇರಣೆಯಾಗಬೇಕು. ಆಗ ನಿಜವಾದ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಸಮಾಜದಲ್ಲಿ ಹಲವು ಏರಿಳಿತಗಳಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕ ಅಸಮಾನತೆ ಎಲ್ಲವೂ ಇದೆ. ಇವೆಲ್ಲವನ್ನು ಅವಲೋಕಿಸಿ ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಸಾಹಿತಿಗಳಿಂದ, ಲೇಖಕರಿಂದ ಆಗಬೇಕಿದೆ ಎಂದರು.

ಡಾ.ಅಮ್ಮಸಂದ್ರ ಸುರೇಶ್ ಅವರ ನಾಲ್ಕು ಕೃತಿಗಳನ್ನು ಪರಿಚಯಿಸಿ ಮಾತನಾಡಿದ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಬಿ.ಟಿ.ಮುದ್ದೇಶ್ ಅವರು ಸುರೇಶ್ ಅವರ ಕೃತಿಗಳಲ್ಲಿ ಸೃಜನಶೀಲ ಸಾಹಿತ್ಯವನ್ನು ಕಾಣಬಹುದಾಗಿದೆ. ತಳಸಮುದಾಯದ ಸಂಕಟಗಳನ್ನು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು, ದಲಿತರ ಶೋಷಣೆಯನ್ನು ಇವರ ಕೃತಿಗಳಲ್ಲಿ ಕಾಣಬಹುದಾಗಿದೆ. ಪತ್ರಕರ್ತರಾಗಿ, ಅಂಕಣಕಾರರಾಗಿ, ಮಾಧ್ಯಮ ವಿಶ್ಲೇಷಕರಾಗಿ ಅವರ ಕಾರ್ಯ ಅನನ್ಯ ಎಂದರು.

ಸಾಮಾಜಿಕ ಹೋರಾಟಗಾರ ಸಾ.ಚಿ.ರಾಜಕುಮಾರ ಮಾತನಾಡಿ ಮಾನವ ಹಕ್ಕುಗಳ ಪರ ಹೋರಾಡುವ ಶಕ್ತಿಗಳು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರ ಧ್ವನಿ ಎತ್ತುವ ಬರಹಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಹೊರಬರಬೇಕು. ದೇವಸ್ಥಾನ ನಿರ್ಮಾಣಕ್ಕೆ ಲಕ್ಷ ಲಕ್ಷ ಹಣ ಕೊಡುವ ಮನಸ್ಸುಗಳು ಗ್ರಾಮಗಳ ಅಭಿವೃದ್ಧಿಗೆ ಚಿಂತಿಸುವ ಮನಸ್ಸನ್ನು ಅಭಿವೃದ್ಧಿಪಡಿಸಬೇಕು. ಗ್ರಾಮಗಳಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸಬೇಕು. ಕಲಾವಿದರುಗಳಿಗೆ ಸರ್ಕಾರಗಳು ನಿರ್ಲಕ್ಷ್ಯ ಮಾಡದೆ ಸಾಂಸ್ಕøತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ನಮ್ಮ ಗ್ರಾಮೀಣ ಸಂಸ್ಕøತಿ, ಬದುಕು ಮತ್ತು ಬರಹ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಬಹುಮುಖಿ ಗೆಳೆಯರ ಬಳಗದ ಸಂಚಾಲಕರು ಹಾಗೂ ಲೇಖಕರಾದ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ ಸಮಾಜವಿಂದು ಜಾತಿ ಧರ್ಮಗಳ ಹೆಸರಿನಲ್ಲಿ ವಿಘಟನೆಯಾಗುತ್ತಿವೆ. ಎಲ್ಲೋ ನಡೆಯುವ ಘಟನೆಗಳಿಗೆ ಇಲ್ಲಿ ಪ್ರತಿಭಟನೆಗಳಾಗುತ್ತವೆ. ಇಂತಹ ಪ್ರತಿಭಟನೆಗಳು ನಮ್ಮೊಳಗಿನ ಶಾಂತಿಯನ್ನು ಕದಡುತ್ತಿವೆ. ನಾವುಗಳು ಜಾತಿ, ಧರ್ಮ ಮೀರಿದ ಮಾನವೀಯ ಶಾಂತಿಯ ಕಡೆಗೆ ಗಮನ ಹರಿಸಬೇಕಿದೆ. ಅಂತಹ ವಾತಾವರಣ ಸೃಷ್ಟಿಯಾಗಬೇಕಿದೆ ಎಂದರು.

ಸಾಮಾಜಿಕ ಹೋರಾಟಗಾರ್ತಿ ಜಯಲಕ್ಷ್ಮಮ್ಮ ಮಾತನಾಡಿ ಸಮಾಜದಲ್ಲಿ ದೌರ್ಜನ್ಯಕ್ಕೆ ಮಹಿಳೆಯರು ಹೇಗೆ ಒಳಗಾಗುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಿದರು.

ಮೈಸೂರಿನ ಡಾ.ಪ್ರಸನ್ನ, ಬಹುಮುಖಿ ಗೆಳೆಯರ ಬಳಗದ ದಂಡಿನಶಿವರ ಮಂಜುನಾಥ್ ಮಾತನಾಡಿದರು. ಎಂ.ವೈ.ಗಂಗಣ್ಣ ಸಂಗಡಿಗರು ಪ್ರಾರ್ಥಿಸಿದರು. ವಸಂತಕುಮಾರ್ ಹೆಚ್.ಎಂ. ಸ್ವಾಗತಿಸಿ, ರಾಘವೇಂದ್ರ ವಂದಿಸಿದರು. ವಿವೇಕ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *