ತುಮಕೂರು: ಡಾಕ್ಟರ್, ವಿಜ್ಞಾನಿಗಳು, ಇಂಜಿನಿಯರ್ಗಳು, ವೈದ್ಯರು, ಕಂಪ್ಯೂಟರ್ ಸೈನ್ಸ್ ಕಲಿತವರು, ಎಂ.ಕಾಂ ಓದಿದವರು ಸಾಹಿತ್ಯವನ್ನು ಬರೆಯುತ್ತಿದ್ದಾರೆ. ಹಾಗಾಗಿ ಬರಹಗಾರರ ಕ್ಷೇತ್ರ ತುಂಬಾ ದೊಡ್ಡದಾಗಿದೆ, ಈಗ ಲೇಖಕಿಯರ ಸಂಘಕ್ಕೆ ಒಂದು ಕಟ್ಟಡದ ಅವಶ್ಯಕತೆ ಇದೆ ಎಂದು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಆರ್.ಸುನಂದಮ್ಮ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ ಹಾಗೂ ಲಕ್ಷ್ಮೀದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಬೇರೆ ಜ್ಞಾನಶಾಖೆಗಳು ಕೂಡ ಲೇಖಕಿಯರ ಜೊತೆ ಸೇರಿದರೆ, ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜ್ಞಾನಶಿಸ್ತುಗಳಲ್ಲಿರುವ ಮಹಿಳೆಯರ ಜ್ಞಾನವನ್ನು ಬಳಸಿಕೊಂಡರೆ ಲೇಖಕಿಯರ ಸಂಘ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಯಾರೆಲ್ಲಾ ಲೇಖಕಿಯರು ಇದ್ದಾರೆ ಅವರನ್ನು ಬಳಸಿಕೊಂಡು ಹೋದರೆ ಗಟ್ಟಿಗೊಳ್ಳಬಹುದು ಎಂದರು.
ಲೇಖಕಿಯರ ಸಂಘಕ್ಕೆ ಒಂದು ಕಟ್ಟಡದ ಅವಶ್ಯಕತೆ ಇದೆ. ಅದಕ್ಕಾಗಿ ಸರ್ಕಾರ ಮೇಲೆ ಒತ್ತಡ ತರಬೇಕು. ಕನ್ನಡ ಸಾಹಿತ್ಯ ಪರಿಷತ್ ದೊಡ್ಡದಿರುವುದರಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕನ್ನಡ ಭವನಗಳಿವೆ. ಲೇಖಕಿಯರ ಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.
ಕನ್ನಡ ಭವನಗಳನ್ನು ಸಾರ್ವಜನಿಕರ ಹಣದಿಂದ ಕಟ್ಟಲಾಗಿದೆ. ಹಾಗಾಗಿ ಕನ್ನಡ ಭವನಗಳನ್ನು ಲೇಖಕಿಯರ ಸಂಘದ ಕಾರ್ಯಕ್ರಮ ನಡೆಸಲು ಉಚಿತವಾಗಿ ನೀಡಬೇಕು. ಮೈಸೂರಿನಲ್ಲಿ ಮಾತ್ರ ಇಂತಹ ಅವಕಾಶವಿದೆ. ಇನ್ನು ಉಳಿದ ಕಡೆಯೂ ಲೇಖಕಿಯರ ಸಂಘಟನೆಯ ಕಾರ್ಯಕ್ರಮಗಳನ್ನು ನಡೆಸಲು ಉಚಿತವಾಗಿ ನೀಡಬೇಕು. ಜಿಲ್ಲಾ ಕಸಾಪ ಅಧ್ಯಕ್ಷರನ್ನು ಲೇಖಕಿಯರು ಕನ್ನಡ ಭವನ ಬಳಸಲು ಅವಕಾಶ ನೀಡುವಂತೆ ಕೇಳಬೇಕು. ಜೊತೆಗೆ ಈ ಬಗ್ಗೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ, ಸಾಮಾನ್ಯ ಕಾರಣಗಳಿಗಾಗಿ ಎಲ್ಲರ ಜೊತೆಗೆ ಕೈಜೋಡಿಸಬೇಕು. ನಾವು ತುಂಬಾ ಚನ್ನಾಗಿ ಬದುಕುತ್ತೇವೆ ಎನ್ನುವುದೇ ಬೇರೆ. ಸಂಘವನ್ನು ಸಂಘಟನಾತ್ಮಕವಾಗಿ ಎಲ್ಲರನ್ನು ಒಳಗೊಂಡು ನಡೆಸುತ್ತೇವೆ ಎನ್ನುವುದೇ ಬೇರೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕು ಎಂದು ಹೇಳಿದರು.
ಎಲ್ಲರನ್ನು ಒಳಗೊಂಡಂತೆ ಸಂಘವನ್ನು ತೆಗೆದುಕೊಂಡು ಹೋಗುವವರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಸಂಘದಲ್ಲಿ ಒಗ್ಗಟ್ಟು ಇರಲು ಸಾಧ್ಯವಾಗುತ್ತದೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗುವವರನ್ನು ಆಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರೆ ಒಳ್ಳಯದಾಗುತ್ತದೆ ಎಂದರು. ನಾನು ಕಲೇಸಂ ಅಧ್ಯಕ್ಷರಾಗಿ 2 ಬಾರಿ ಆಯ್ಕೆಯಾಗಿದ್ದೇನೆ. 7 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಅಧ್ಯಕ್ಷರಾಗಿ ನನ್ನ 2 ಅವಧಿಯಲ್ಲಿ 60 ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಹಿರಿಯರು, ಕಿರಿಯರು ಎಲ್ಲರೂ ನನಗೆ ಸಹಕಾರ ನೀಡಿದರು. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಅನಿವಾಸಿ ಭಾರತೀಯ ಲೇಖಕಿ ಶಶಿಕಲಾ ಚಂದ್ರಶೇಖರ್, ಕಲೇಸಂ ಜಿಲ್ಲಾ ಉಪಾಧ್ಯಕ್ಷೆ ಸಿ.ಎ.ಇಂದಿರಾ, ಪತ್ರಿಕೋದ್ಯಮಿ ಎಸ್.ನಾಗಣ್ಣ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷೆ ಸಿ.ಎನ್.ಸುಗುಣಾದೇವಿ ಇದ್ದರು. ತೀರ್ಪುಗಾರರಾಗಿ ಲೇಖಕಿ ಡಾ.ಗೀತಾ ವಸಂತ್ ಕವನ ಸ್ಪರ್ಧೆಗೆ ಬಂದ ಕವನಗಳ ಕುರಿತು ಮಾತನಾಡಿದರೆ, ಲೇಖಕಿ ಬಾ.ಹ.ರಮಾಕುಮಾರಿ ಕಥಾ ಸ್ಪರ್ಧೆಗೆ ಬಂದ ಕಥೆಗಳ ಕುರಿತು ಮಾತನಾಡಿದರು.
ಕವನ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಸೇರಿದಂತೆ ಐವವರಿಗೆ ಮತ್ತು ಕಥಾ ಸ್ಪರ್ಧೆಯಲ್ಲಿ ಎಚ್.ವಿ.ವೆಂಕಟಾಚಲ ಸೇರಿದಂತೆ ನಾಲ್ವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಲೇಖಕಿ ಮರಿಯಂಬಿ ನಿರೂಪಿಸಿ, ಶ್ವೇತರಾಣಿ ಸ್ವಾಗತಿಸಿದರು.