ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಆಮಿಷಗಳ ಹಾವಳಿ ಸಾಮಾನ್ಯವಾಗಿದೆ – ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ

ತುಮಕೂರು :ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಯಲ್ಲೂ ಆಮಿಷಗಳ ಹಾವಳಿ ಇತ್ತೀಚೆಗೆ ಸಾಮಾನ್ಯವಾಗಿದೆ. ಆಮಿಷದ ಮೋಹಕ್ಕೆ ಒಳಗಾಗದೆ ಸಾರ್ವಜನಿಕರು ನೈಜವಾಗಿ ಮತ ಹಾಕಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ತುಮಕೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿರುವ ಹಾಗೂ ಬಾಕಿಯಿರುವ ಹಲವು ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಸಭೆಯನ್ನು ನಡೆಸಿ ಅವರು ಮಾತನಾಡಿದರು.

ಮನುಷ್ಯ ಸ್ವಾರ್ಥ ಬಿಡಬೇಕು. ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ವ್ಯವಸ್ಥೆ ಸುಧಾರಣೆಗೆ ಕೈಜೋಡಿಸಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾಜದ ಕುಸಿತಕ್ಕೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಸಹ ಸಮಾಜದಿಂದಲೇ ಬಂದಿರುವುದರಿಂದ ವ್ಯವಸ್ಥೆ ಸುಧಾರಣೆಗಾಗಿ ಮೊದಲು ಸಮಾಜ ಬದಲಾಗಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಕುವೆಂಪು ಅವರ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ನುಡಿಗಟ್ಟನ್ನು ಉದಾಹರಿಸಿದ ಅವರು, ಭಾರತ ಸಂವಿಧಾನದ ಅನುಚ್ಛೇದ 14ರಲ್ಲಿ ಎಲ್ಲರೂ ಸಮಾನರು, ಅನುಚ್ಛೇದ 21 ಗೌರವದಿಂದ ಬದುಕುವ ಹಕ್ಕು, ಇವೆಲ್ಲ ಇದ್ದರೂ ಕಾನೂನುಗಳು ಸಮಾಜದಲ್ಲಿ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಂಡಾಗ ಮಾತ್ರ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಲು ಸಾಧ್ಯ ಎಂದರು.

ಸುಳ್ಳು ಕೇಸ್ ದಾಖಲಿಸಿದರೆ 3 ವರ್ಷ ಜೈಲು :

ಲೋಕಾಯುಕ್ತ ಸಂಸ್ಥೆಯ ಉದ್ದೇಶ ಜನಸೇವೆಯನ್ನು ಬಲಪಡಿಸುವುದೇ ಆಗಿದೆ ಎಂದ ಅವರು, ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದಲ್ಲಿ 3 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾದೀತು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಸಮಾಜವನ್ನು ಎಚ್ಚರಿಸಿದರು.

ಎಲ್ಲಾ ಅಧಿಕಾರಿಗಳು ಕೆಟ್ಟವರಲ್ಲ. ನೈಜವಾಗಿ ಕೆಲಸ ಮಾಡುವವರ ವಿರುದ್ಧ ಸುಳ್ಳು ಕೇಸು ಹಾಕುವುದು ಅವರ ಗೌರವಕ್ಕೆ ಧಕ್ಕೆ ತರುವುದು ತಪ್ಪು. ಇದರಿಂದಾಗಿ ನೈಜ ಪ್ರಕರಣಗಳನ್ನೂ ಮರೆಮಾಚುವಂತಾಗುತ್ತದೆ ಎಂದು ಹೇಳಿದರು.

ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿರುವುದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ನಿಯಮಾನುಸಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆಡಳಿತವನ್ನು ಎಚ್ಚರಿಸಿದರು.

ನ್ಯಾಯಾಲಯಗಳು ಹಾಗೂ ಲೋಕಾಯುಕ್ತದಲ್ಲಿ ದಾಖಲಾಗುವ ಶೇಕಡಾ 90ರಷ್ಟು ಪ್ರಕರಣಗಳು ವಿದ್ಯಾವಂತರಿಂದಲೇ ಬರುತ್ತಿರುವುದು ದುರಂತದ ಸಂಗತಿ ಎಂದ ಅವರು, ಜನರು ಕಾನೂನು, ದಾಖಲೆ ಮತ್ತು ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಸರಿಯಾದ ಮಾರ್ಗದಲ್ಲಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ಮುಂಜಾನೆ ಅನಿರೀಕ್ಷಿತವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ, ಸಾರಿಗೆ ಬಸ್ ನಿಲ್ದಾಣ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾಕಷ್ಟು ಲೋಪಗಳನ್ನು ಗಮನಿಸಲಾಯಿತು. ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಂಗಡಿಗಳಲ್ಲಿ ವಾಯ್ದೆ ಮೀರಿದ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಪದಾರ್ಥಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದರು.

ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತುಮಕೂರು ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮಿ ನಾರಾಯಣ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಶುಕ್ರವಾರ ಕುಣಿಗಲ್ ಹಾಗೂ ಗುಬ್ಬಿ ತಾಲ್ಲೂಕಿನ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.

Leave a Reply

Your email address will not be published. Required fields are marked *