ಪ್ರತ್ಯೇಕ ಒಳಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದ ಸಮಾಜವಾದಿ ಮುಖ್ಯಮಂತ್ರಿ ಹೇಳಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಅಲೆಮಾರಿ ಸಮುದಾಯ

ಬೆಂಗಳೂರು : ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಒಳ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೇಳಿದ ಕೂಡಲೇ, ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದ ತಬ್ಬಲಿ ಸಮುದಾಯದ ಜನ ಬಿಕ್ಕಿ ಬಿಕ್ಕಿ ಅತ್ತರು.

ಮಾಜಿ ಸಚಿವ ಆಂಜನೇಯ ನೇತೃತ್ವದಲ್ಲಿ ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ಇಂದು ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿ ಸಮುದಾಯಗಳ ಒಳ ಮೀಸಲಾತಿಯ ಅಹವಾಲನ್ನು ಆಲಿಸಿದ ನಂತರ ಮಾತನಾಡಿ, ಈ ತೀರ್ಮಾನ ನನ್ನದೊಬ್ಬನ ತೀರ್ಮಾನವಲ್ಲ, ಸಚಿವ ಸಂಪುಟ ತೀರ್ಮಾನವಾಗಿರುವುದರಿಂದ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದರು.

ಇದರಿಂದ ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯದ ಪರ ಎಂದು ಬಿಂಬಿಸಿಕೊಂಡೇ ಬಂದ ಸಿದ್ದರಾಮಯ್ಯನವರು ಇಂದು ಅವರು ಅಲೆಮಾರಿಗಳಿಗೆ ಶೇಕಡ 1%ರಷ್ಟು ಒಳ ಮೀಸಲಾತಿಯನ್ನು ನೀಡದಿರಲು ದೊಡ್ಡ ಷಡ್ಯಂತ್ರ, ಪಿತೂರಿ ಮತ್ತು ರಾಜಕೀಯ ನಡೆದಿದೆ ಎಂಬುದು ಸ್ಪಷ್ಟವಾಯಿತು.

ಅಲೆಮಾರಿ ಸಮುದಾಯ ಕೇವಲ ಸುಮಾರು 6ಲಕ್ಷದಷ್ಟಿರುವುದರಿಂದ ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಕೆಲ ತಾಂತ್ರಿಕ ತೊಂದರೆಗಳಿವೆ ಎಂದೇ ಇಂದೂ ಸಹ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಏನಾದರೂ ಮಾಡಲು ಸಾಧ್ಯವಾದರೆ ಮಾಡೋಣ ಎಂಬ ಮಾತನ್ನೇ ಪುನರುಚ್ಚರಿಸಿದರು.

ಇದರಿಂದ ಅಲೆಮಾರಿ ಸಮುದಾಯ ಬಾಂಡಲಿಯಿಂದ ಬೆಂಕಿಗೆ ಬಿದ್ದಂತ್ತಾಗಿದ್ದು, ಸಮಾಜವಾದಿ ಎಂದು ಹೇಳಿಕೊಳ್ಳುತ್ತಾ, ದಲಿತರ, ಹಿಂದುಳಿದವರ ಮತ್ತು ಶೋಷಿತರ ಪರ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ತಬ್ಬಲಿ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ಸೋತಿದ್ದಾರೆ.

ಇಂದಿನ ಮುಖ್ಯಮಂತ್ರಿಗಳ ಸಭೆಯನ್ನು ತುಂಬಾ ಆಸೆಗಣ್ಣಿನಿಂದ ನೋಡುತ್ತಿದ್ದ ಅಲೆಮಾರಿ ಸಮುದಾಯಗಳು, ಮುಖ್ಯಮಂತ್ರಿಗಳ ನಿರ್ಧಾರದಿಂದ ಫ್ರೀಡಂ ಪಾರ್ಕಿನಲ್ಲಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದವರ ಬಳ ಬಳನೇ ಕಣ್ಣುಗಳಲ್ಲಿ ಹರಿದವು.

ತಮ್ಮ ಅಳಲನ್ನು ತೋಡಿಕೊಳ್ಳುಲು ಸಹ ಆಗದೆ ಮೂಕರಾಗಿ ವೇದನೆಯನ್ನು ಅನುಭವಿಸಿದರು. ಕೊನೆಯ ಪಕ್ಷ ಇಷ್ಟು ದಿನ ಮೀಸಲಾತಿ ಪಡೆದುಕೊಂಡಿರುವ ಸಮುದಾಯಗಳು ಸಹ ಇವರಿಗೆ ಬಾಹ್ಯ ಬೆಂಬಲ ಸೂಚಿಸಿದವೆ ಹೊರತು, ಒಳ ಮೀಸಲಾತಿ ಹಂಚಿಕೊಂಡಿರುವ ಮೂರು ಗುಂಪುಗಳು ನಮ್ಮ ತಬ್ಬಲಿ ಸಮುದಾಯಗಳಿಗೋಸ್ಕರ ತಲಾ ಶೇಕಡ ಅರ್ಧಷ್ಟು ಮೀಸಲಾತಿ ಬಿಟ್ಟು ಕೊಟ್ಟು ಅವರಿಗೆ ಶೇಕಡ ಒಂದೂವರೆಯಷ್ಟು ಒಳ ಮೀಸಲಾತಿ ನೀಡಿ ಎಂಬ ಔಧಾರ್ಯವನ್ನು, ಹೃದಯವಂತಿಕೆಯನ್ನು ತೋರಿಸದಿರುವುದು ನೋವಿನ ಸಂಗತಿಯಾಗಿದೆ.

ಇಲ್ಲಿಗೆ ಸರ್ಕಾರದಿಂದ ತಬ್ಬಲಿ ಸಮುದಾಯವಾದ ಅಲೆಮಾರಿಗಳಿಗೆ ಯಾವುದೇ ಒಳ ಮೀಸಲಾತಿ ದೊರೆಯದು ಎಂಬ ಸ್ಪಷ್ಟ ಸಂದೇಶ ಇದಾಗಿದೆ, ಮುಂದಿನದು ಶಕ್ತಿ ಇದ್ದರೆ ಈ ಸಮುದಾಯಗಳು ನ್ಯಾಯಾಲಯದ ಮೊರೆ ಹೋಗಬಹುದು.

ಈಗ ಈ ಸಮುದಾಯಗಳಿಗೆ ಯಾರೂ ಮೊಸಳೆ ಕಣ್ಣಿರು ಸುರಿಸುವುದು ಅಗತ್ಯವಿಲ್ಲ ಎನ್ನಿಸುತ್ತದೆ, ಏಕೆಂದರೆ ಮೂಕ, ಹಸಿವಿನ ಈ ಸಮುದಾಯಗಳಿಗೆ ರಾಜಕೀಯ ಅಧಿಕಾರ ಇಲ್ಲದಿರುವಾಗ ಶೋಷಣೆಯನ್ನು ಹೇಗೆ ಮಾಡಬಹುದು ಎಂಬುದನ್ನು ಶೋಷಿತ ಜಾತಿಗಳೇ ಇವರ ಪಾಲನ್ನು ಬಲವಂತವಾಗಿ ಕಿತ್ತುಕೊಳ್ಳುವುದರ ಮೂಲಕ ಮತ್ತೆ ಸಮಾಜದಲ್ಲಿನ ತಾರತಮ್ಯ ಸದಾ ಕಾಲ ಉಳಿಯುವಂತೆ ನೋಡಿಕೊಂಡಿವೆ.

ನ್ಯಾಯ ಕೇಳಲು ಫ್ರೀಡಂ ಪಾರ್ಕಿಗೆ ಬಂದಿರುವ ವಿದ್ಯಾವಂತ ಅಲೆಮಾರಿ ಗೆಳೆಯರೊಬ್ಬರು ಇವತ್ತು ಟೆಂಟಿನ ದೂರದಲ್ಲಿ ಕೂತು ಮಾತಾಡಿದ್ದು ಕಂಗೆಡಿಸಿತು….

“ನಮ್ಮ ಮಕ್ಕಳಿಗಾಗಿ ಮೀಸಲಾತಿ ತಗೊಂಡು ಗೆದ್ದೇ ಬರ್ತಿವಿ ಅಂತ ಬಂದಿದಿವಿ ಸಾರ್… ಈಗ ನ್ಯಾಯ ಸಿಕ್ಕಿಲ್ಲ ಅಂತ ವಾಪಸ್ ಮನೆಗೆ ಹೋಗ್ಬೇಕಂದ್ರೆ ಬೆಂಗಳೂರಿಂದ ಒಂದು ವಿಷದ ಬಾಟಲಿ ತಗಂಡು ಬ್ಯಾಗಲ್ಲಿಟ್ಕಂಡು ಹೋಗ್ತಿವಿ; ನಮ್ಮ ಸೋತ ಮುಖಗಳನ್ನ ಹೆಂಡತಿ ಮಕ್ಕಳು ನೋಡಲಾರರು…..”

Leave a Reply

Your email address will not be published. Required fields are marked *