ಉರಿಬಿಸಿಲಲ್ಲೂ ಉತ್ಸಾಹದಿಂದ ಸಾಗಿದ ಜನ, ಗಮನ ಸೆಳೆದ ಎತ್ತಿನ ಗಾಡಿ

ತುಮಕೂರು : ಇಂದು ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಅಭ್ಯರ್ಥಿ ನಾಮ ಸಲ್ಲಿಸಲು ಮೆರವಣಿಗೆ ಮೂಲಕ ತೆರಳುವಾಗ ಮಧ್ಯಾಹ್ನ ಉರಿ ಬಿಸಿಲಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕುತ್ತಾ ಹೆಜ್ಜೆ ಹಾಕಿದರು.

ಅಭ್ಯರ್ಥಿಯ ಮೆರವಣಿಗೆಗೆ ಎತ್ತಿನ ಗಾಡಿಯನ್ನು ತರಿಸಲಾಗಿತ್ತು, ಜನಸ್ತೋಮದ ಮಧ್ಯೆ ಎತ್ತಿನ ಗಾಡಿಯಲ್ಲಿ ಎಸ್.ಪಿ.ಮುದ್ದಹನುಮೇಗೌಡ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಕಾರ್ಯದರ್ಶಿ ಮಯೂರ ಜಯಕುಮಾರ್, ಇತರರಿದ್ದರು. ಜನರ ಮಧ್ಯೆ ಎತ್ತಿನ ಗಾಡಿ ಸಾಗುತ್ತಿರುವುದನ್ನು ಕಂಡ ಜನರು ಬೆರಗಾದರು. ಅಷ್ಟೆಲ್ಲಾ ಗಲಾಟೆ ಗದ್ದಲವಿದ್ದರೂ ಗಾಡಿಗೆ ಹೂಡಿದ್ದ ಹೋರಿಗಳು ಗಾಬರಿಯಾಗದೆ ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದವು.

ಬೆಳಿಗ್ಗೆ 11ಗಂಟೆಗೆ ಟೌನ್‍ಹಾಲ್ ಸರ್ಕಲ್‍ನಿಂದ ಮೆರವಣಿಗೆ ಹೊರಡಬೇಕಾಗಿದ್ದರೂ, ದೂರದ ಊರುಗಳಿಂದ ಕಾರ್ಯಕರ್ತರು ಬರುವುದು ತಡವಾದ ಹಿನ್ನೆಲೆಯಲ್ಲಿ ಮಧ್ಯಾಹ್ಮ 1 ಗಂಟೆಗೆ ಮಟ ಮಟ ಮಧ್ಯಾಹ್ನ ಉರಿಯುವ ಬಿಸಿಲಿನಲ್ಲಿ ಮೆರವಣಿಗೆ ಹೊರಟಿತು.

ಸ್ವತಃ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಮರದ ನೆರಳಿನಲ್ಲಿ ನಿಂತಿದ್ದವರನ್ನೆಲ್ಲಾ ಬನ್ನಿ ಬನ್ನಿ ಟೈಮ್ ಆಗುತ್ತೇ, ನಡೆಯಪ್ಪ ಚಿಕ್ಕಣ್ಣ ಎತ್ತಿನ ಗಾಡಿ ಹೊಡಕೊಂಡು ಎಂದು ಹುರಿದುಂಬಿಸಿದರು. ಕೆಲವರು ಚಾರ್ಜ್ ಆಗಿ ಬಿಟ್ಟಿದ್ದೀರಿ ಎಂದೂ ಹಾಸ್ಯ ಚಟಾಕಿ ಹಾರಿಸದರು.

ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಎತ್ತಿನ ಗಾಡಿ ಬಿಟ್ಟು ಜನರ ಮಧ್ಯೆಯೇ ಉರಿ ಬಿಸಿನಲ್ಲಿಯೇ ನಡೆದುಕೊಂಡು ಹೊರಟರು.

ಮೆರವಣಿಗೆಯ ಉದ್ದಕ್ಕೂ ಆಗಾಗ ಡಿಜೆಯಲ್ಲಿ ಹಾಡುಗಳು, ಜೈಕಾರ ಹಾಕಲಾಗುತ್ತಿತ್ತು. ಆಗಾಗ್ಗೆ ಬಣ್ಣದ ಪಾರ್ಟಿ ಪೇಪರನ್ನು ತೂರಲಾಗುತ್ತಿತ್ತು.

ಬಿಸಿಲಿನಿಂದ ಬಳಲುತ್ತಿದ್ದ ಕಾರ್ಯಕರ್ತರಿಗೆ ನಂದಿನ ಮಂಜಿಗೆ ಪ್ಯಾಕೆಟ್, ನೀರಿನ ಪ್ಯಾಕೆಟ್‍ಗಳನ್ನು ಹಂಚಿದ್ದರಿಂದ ಧಣಿವು ತಣಿಸಿಕೊಂಡರು.

ಅಶೋಕ ರಸ್ತೆಯ ಇಕ್ಕಲೆಗಳಲ್ಲಿ ಜನರು ನಿಂತು ಕಾಂಗ್ರೆಸ್ ಅಭ್ಯರ್ಥಿ ಮೆರವಣಿಗೆಯನ್ನು ನೋಡುತ್ತಿದ್ದು ಕಂಡು ಬಂದಿತು.

ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಮತ್ತೊಂದು ನಾಮ ಪತ್ರ ಸಲ್ಲಿಸಿ ಬರುವ ತನಕ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ನಿಂತು ತಮ್ಮ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *