ತುಮಕೂರು: ಪೊಲೀಸ್ ಇಲಾಖೆಯವರು ಜನರ ಮನಸ್ಥಿತಿಯನ್ನು ಅರ್ಥೈಸಿಕೊಂಡು, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಆಗಷ್ಟೆ ಸಮಾಜದ ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಪೊಲೀಸ್ ಉಪ ಮಹಾ ನಿರೀಕ್ಷಕರಾದ ರವಿ ಡಿ. ಚೆನ್ನಣ್ಣನವರ್ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲಸ ಮಾಡುವಲ್ಲಿ ಶ್ರೇಷ್ಠತೆ-ಕನಿಷ್ಠತೆ ಇರುತ್ತದೆ. ನಮ್ಮ ಸ್ಥಾನ ಮುಖ್ಯವಲ್ಲವೆಂದು, ಶಾಶ್ವತವಲ್ಲವೆಂದು ಭಾವಿಸಬೇಕು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಂದ ಬಗೆಹರಿಸಲಾಗದ ಎಷ್ಟೋ ಪ್ರಕರಣಗಳನ್ನು ಪೊಲೀಸ್ ಪೇದೆಗಳು ಬಗೆಹರಿಸಿದ್ದಾರೆ, ಪಿಎಸ್‍ಐಗಳು ಬಗೆಹರಿಸಿದ ಉದಾಹರಣೆಗಳಿವೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಫಲರಾಗಲು ಮೊದಲು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ರೈತ ಮಣ್ಣಲ್ಲಿ ಮಣ್ಣಾಗಿ ದುಡಿದು ಫಸಲು ತೆಗೆಯುತ್ತಾನೆ. ಹಾಗೆಯೇ, ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ಒಂದು ಗಂಟೆ ಓದಿದ್ದನ್ನು 15 ನಿಮಿಷ ಬರೆಯಬೇಕು, ಹಿಂದಿನ ದಿನ ಕಲಿತದ್ದನ್ನು ಮರುದಿನ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಯಂ ಉದ್ಯೋಗ ಸೃಷ್ಟಿಸುವ ಅನುಷ್ಠಾನ ಯೋಗ್ಯ ಶಿಕ್ಷಣದ ಅಗತ್ಯವಿದೆ. ರಾಜ್ಯದ 34 ಪ್ರಮುಖ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಶೇ.80 ರಷ್ಟು ಮಂದಿ ಉತ್ತರ ಕರ್ನಾಟಕದವರಿದ್ದಾರೆ. ಅವರಲ್ಲಿ ಹಸಿವಿನಿಂದ ಬಂದ ಆತ್ಮವಿಶ್ವಾಸ ಹೆಚ್ಚು. ಕಲಿತ ವಿದ್ಯೆ ಅವರನ್ನು ಗಟ್ಟಿಗೊಳಿಸಿದೆ. ಕೀಳರಿಮೆ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ನಿರಂತರ ಪ್ರಯತ್ನಿಸುತ್ತಾರೆ ಎಂದು ತಿಳಿಸಿದರು.
ಯುಪಿಎಸ್‍ಸಿ ಪರೀಕ್ಷೆಗಳ ತಯಾರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಮರ್ಪಣ ಮನೋಭಾವ, ಪ್ರಾಮಾಣಿಕತೆ, ಆತ್ಮವಿಶ್ವಾಸವಿದ್ದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣುವ ಗುರಿಯಿಟ್ಟುಕೊಳ್ಳಬೇಕು. ಇದಕ್ಕೆ ಪೂರಕವಾಗಿ ವಿವಿಯು ಸಹಕರಿಸುತ್ತದೆ. ಸಿಕ್ಕ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮೇಲೇರಬೇಕು ಎಂದರು.
ಬಿಬಿಎಂಪಿ ಹಣಕಾಸು ವಿಭಾಗದ ಉಪ ನಿಯಂತ್ರಕರಾದ ದೇವರಾಜ ಎಸ್. ಎಂ. ‘ಕೆಎಎಸ್ ಮತ್ತು ಕೆಪಿಎಸ್ಸಿ ಪರೀಕ್ಷಗಳು’ ಕುರಿತು, ಬೆಂಗಳೂರಿನ ಉಜ್ವಲ ಅಕಾಡೆಮಿಯ ನಿರ್ದೇಶಕರಾದ ಮಂಜುನಾಥ ಯು. ‘ಪಿಎಸ್‍ಐ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ವಿವಿ ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕಿ ಡಾ. ಸಿ. ಶೋಭಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಶಿವಣ್ಣ ನಿರೂಪಿಸಿದರು.