ತುಮಕೂರು : ತುಮಕೂರಿನ ಸೌಹಾರ್ಧ ಕೋ-ಆಪರೇಟಿವ್ ಸೋಸೈಟಿಯ ಅಧ್ಯಕ್ಷರೊಬ್ಬರು ಸಂಸಾರ ಸಮೇತ ರಾತ್ರೋ ರಾತ್ರಿ ನಾಪತ್ತೆಯಾಗಿದ್ದಾರೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಎದುರಿನ ಅಶೋಕ ರಸ್ತೆಯ ಜಿ.ಎಂ.ಎಸ್.ಕಾಂಪ್ಲೆಕ್ಸ್ನಲ್ಲಿರುವ ಆಕಾಶ್ ಸೌಹಾರ್ಧ ಕೋ-ಆಪರೇಟಿವ್ ಸೋಸೈಟಿಯ ಅಧ್ಯಕ್ಷರಾದ ಟಿ.ಶಿವಾನಂದಮೂರ್ತಿ ಅವರು 2025ರ ಜನವರಿ4ರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಅಧ್ಯಕ್ಷರಾದ ಟಿ.ಶಿವಾನಂದ ಮೂರ್ತಿ ಅವರು ನಾಪತ್ತೆಯಾಗಿರುವುದರಿಂದ ಅವರ ಮಾಲಿಕತ್ವದ ಆಕಾಶ್ ಜ್ಯೂಯಲರಿಯನ್ನೂ ತೆಗೆದಿರುವುದಿಲ್ಲ, ಮನೆಯ ಬಳಿ ಹೋದರು ಮನೆಗೂ ಬೀಗ ಹಾಕಿದ್ದು, ಮೊಬೈಲ್ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಅವರ ಪತ್ನಿ ಪೂರ್ಣಿಮಾ ಅವರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ, ಅಧ್ಯಕ್ಷರ ಮಗ ಆಕಾಶ್ ಅವರು ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕಾಯನಿರ್ವಹಿಸುತ್ತಿದ್ದು, ಅವರಿಗೆ ಪೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷರಾದ ಟಿ.ಶಿವಾನಂದಮೂರ್ತಿಯವರು ಇದ್ದಕ್ಕಿಂದಂತೆ ಕಾಣೆಯಾಗಿರುವುದರಿಂದ ಆಕಾಶ್ ಸೌಹಾರ್ಧ ಕೋ-ಆಪರೇಟಿವ್ ಸೋಸೈಟಿ ವೈಹಿವಾಟು ಸಂಪೂರ್ಣವಾಗಿ ನಿಂತು ಹೋಗಿದ್ದು, ಸೊಸೈಟಿಯಲ್ಲಿ ಭದ್ರತೆ ಇಲ್ಲದ ಕಾರಣ ಸೊಸೈಟಿಯ ನಗದು ಶಿಲ್ಕನ್ನು ಅಧ್ಯಕ್ಷರ ಅಂಗಡಿಯಾದ ಆಕಾಶ್ ಜ್ಯೂಯಲರಿಯ ಕಬ್ಬಿಣದ ಲಾಕರ್ ಪೆಟ್ಟಿಗೆಯಲ್ಲಿ ಇಟ್ಟಿದ್ದು, ಸೊಸೈಟಿ ವ್ಯವಹಾರಗಳಿಗೆ ಅಧ್ಯಕ್ಷರ ಉಪಸ್ಥಿತಿ ಅಗತ್ಯವಿದ್ದು, ಅವರ ಅನುಪಸ್ಥಿತಿಯಿಂದ ಸೊಸೈಟಿ ವ್ಯವಹಾರಗಳಿಗೆ ತೊಂದರೆಯಾಗಿದ್ದು ಅವರನ್ನು ಪತ್ತೆ ಹಚ್ಚಿ ಸೊಸೈಟಿ ವ್ಯವಹಾರಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೊಸೈಟಿಯ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ಹಾಗೂ ನಿರ್ದೇಶಕರುಗಳು ದೂರು ನೀಡಿ ಮನವಿ ಮಾಡಿದ್ದಾರೆ.
ಆಕಾಶ್ ಜ್ಯೂಯಲರಿ ಮತ್ತು ಆಕಾಶ್ ಸೌಹಾರ್ಧ ಕೋ-ಆಪರೇಟಿವ್ ಸೋಸೈಟಿಯ ಹೆಸರಿನಲ್ಲಿ ಯಾರಾದರೂ ಹಣ ಹೂಡಿಕೆ ಮಾಡುವಂತೆ ಕೇಳಿದಲ್ಲಿ ಯಾರು ವ್ಯವಹರಿಸಬಾರದೆಂದು ಸೊಸೈಟಿಯ ನಿರ್ದೇಶಕರಾದ ದೊಡ್ಡಬಸಪ್ಪನವರು ಮನವಿ ಮಾಡಿದ್ದಾರೆ.