ತುಮಕೂರು : ಲೋಕಸಭಾ ಚುನಾವಣೆಯಲ್ಲಿ ಆದ ಭಾರಿ ಪರಾಭವದ ನಂತರ ರಾಜ್ಯದ ಜನರ ಮೇಲೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ಳಲು ಹೊರಟಿದೆ. ಅದರ ಮೊದಲ ಭಾಗವಾಗಿ ನಿತ್ಯದ ಜೀವನಕ್ಕೆ ಅತ್ಯವಶ್ಯಕವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದೆ. ಇದನ್ನು ತಕ್ಷಣ ಇಳಿಸಬೇಕು ಎಂದು ಬಿಜೆಪಿ, ಜೆ.ಡಿ.ಎಸ್ ಸಂಯುಕ್ತಾಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ ಆಗ್ರಹಪಡಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಗ್ರಾಮದಲ್ಲಿ ಹಾದು ಹೋಗಿರುವ ಕೆ. ಶಿಪ್ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಅವರು ಮಾತನಾಡಿದರು.
ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಇಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಯಿತು.
ʻರಾಜ್ಯ ಸರ್ಕಾರವು ಹುಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬೊಕ್ಕಸವನ್ನು ಖಾಲಿ ಮಾಡಿದೆ. ಈಗ ಅದರ ಬಳಿ ನಿತ್ಯದ ಖರ್ಚಿಗೂ ಹಣವಿಲ್ಲದಂತೆ ಆಗಿದೆ. ಹೀಗಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿನವೂ ಒಂದೊಂದು ದರ ಏರಿಸುತ್ತಿದೆ. ಇದೀಗ ಸಾರ್ವಜನಿಕರ ಮೇಲೆ ಹಾಕಿದ ಮೊದಲ ಬರೆ ಎಂದರೆ ಅದು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ. ಇನ್ನು ಮುಂದೆ ಏನೇನು ದರಗಳು ಏರಲಿವೆ ಎಂದು ಕಾದನೋಡಬೇಕಾಗಿದೆ. ಈ ಜನವಿರೋಧಿ ಸರ್ಕಾರ ಅಧಿಕಾರದಲ್ಲಿ ಇರುವ ಎಲ್ಲ ನೈತಿಕತೆಯನ್ನೂ ಕಳೆದುಕೊಂಡಿದೆʼ ಎಂದು ಅವರು ಕಟುವಾಗಿ ಟೀಕಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಶಂಕರ್, ಮುಖಂಡರಾದ ಸಿದ್ದೇಗೌಡರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್, ಮಂಗಳಗೌರಮ್ಮ, ವೆಂಕಟೇಶ್, ನರಸಿಂಹಮೂರ್ತಿ, ಅನಸೂಯಮ್ಮ, ರವಿ, ಸಾರಂಗಿ ಶಂಕರಣ್ಣ ಮುಂತಾದವರು ಭಾಗವಹಿಸಿದ್ದರು.
ಈ ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.